ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅವನಿಗೆ ಆಶ್ಚರ್ಯ, ಬಹಳ ಆಶ್ಚರ್ಯ.
ಈ ಅಮೆರಿಕದ ಮಾನವಶಾಸ್ತ್ರಿ, ಈ ಫರ್ಗುಸನ್ ನೋಡಿ. ಮನು ಓದಿದಾನೆ. ಇವನಿಗೆ ನಮ್ಮ ಸೂತಕಗಳ ಬಗ್ಗೆ ಎಷ್ಟು ವಿಷಯ ಗೊತ್ತಿದೆ! ತಾನು ಬ್ರಾಹ್ಮಣ. ತನಗೇ ಇದೆಲ್ಲ ಗೊತ್ತಿಲ್ಲ.
ಅಮೆರಿಕಕ್ಕೆ ಬರಬೇಕು ಆತ್ಮಜ್ಞಾನಕ್ಕೆ. ಮಹಾತ್ಮರು ಜೈಲಿನಲ್ಲಿ ಕೂತು ಕಂಬಿ ಮಧ್ಯ ಆತ್ಮಚರಿತ್ರೆ ಬರೆದ ಹಾಗೆ. ನೆಹರು ಇಂಗ್ಲೆಂಡಿಗೆ ಹೋಗಿ ಸ್ವದೇಶ ಕಂಡುಕೊಂಡ ಹಾಗೆ. ದೂರದಲ್ಲಿದ್ದರೇ ಬೆಟ್ಟ.
ನಮ್ಮ ದೇಹದ ಹನ್ನೆರಡು ದ್ರವಗಳಿಂದ ನಮಗೆ ಮಲದ ಸೋಂಕು:
ದೇಹದ ಜಿಡ್ಡುಗಳು, ವೀರ, ರಕ್ತ, ಮಿದುಳಿನ ಮಜ್ಜೆಯ ನೀರು, ಮೂತ್ರ,
ಹೇಲು, ಶಿಂಬಳ, ಕಿವಿಯ ಕಿಸುರು, ಕಫ, ಕಣ್ಣೀರು, ಕಣ್ಣಿನ ಪಿಸುರ್,
ಮೈಚರ್ಮದ ಬೆವರು. (ಮನು ೫.೧೩೫)
ಚಿಕಾಗೋವಿನಲ್ಲಿದ್ದರೂ ಎಣಿಸುವುದು ಕನ್ನಡದಲ್ಲೇ. ಎಣಿಸಿದ ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಭತ್ತು ಹತ್ತು ಹನ್ನೊಂದು. ಹನ್ನೊಂದು, ಹನ್ನೊಂದು, ಮೊದಲನೇ ಸಾರಿ ಎಣಿಸಿದಾಗ ಹನ್ನೊಂದೇ ಮಲ ಸಿಕ್ಕಿತು. ಮತ್ತೆ ಎಣಿಸಿದಾಗ, ಹನ್ನೆರಡು, ಸರಿಯಾಗಿ ಹನ್ನೆರಡು. ಅವನಿಗೆ ಗೊತ್ತಿದ್ದ ಈ ಹನ್ನೆರಡರಲ್ಲಿ ಎಂಜಲು, ಒಂದ, ಎರಡ. ಚಿಕ್ಕಂದಿನಿಂದ ಹೇಳಿದ್ದರು. ಎಂಜಲು ಮಾಡಬಾರದು. ಕಕ್ಕಸ ಮಾಡಿದರೆ ಸರಿಯಾಗಿ ತೊಳೆದುಕೊಳ್ಳಬೇಕು. ಸುಸ್ಸು ಮಾಡಿದರೆ ತೊಳೆಯಬೇಕು. ಅವರತ್ತೆ ಕಕ್ಕಸಿಗೆ ಹೋದರೆ ಹಿಡಿಮಣ್ಣು ಮೃತ್ತಿಕೆ, ಕೂಡ ತೆಗೆದುಕೊಂಡು ಹೋಗುತ್ತಿದ್ದರು. ಅವರಿರುವವರೆಗೆ ಹಿತ್ತಲಲ್ಲಿ ಒಂದು ಮಣ್ಣ ಗುಳಿ ಯಾವಾಗಲೂ.
ದಕ್ಷಿಣ ದೇಶದಲ್ಲಿ ಬಾಯಿಗಿಟ್ಟು ಎಂಜಲು ಮಾಡಿ ಊದುವ ಪೀಪಿ ನಾಗಸ್ವರಗಳೆಲ್ಲ ಮುಟ್ಟಬಾರದ ವಸ್ತು, ಎಂಜಲು-ಮುಟ್ಟಬಾರದ ಅಸ್ಪೃಶ್ಯರು ಮಾತ್ರ ಮುಟ್ಟಿ ಬಾರಿಸತಕ್ಕ ವಾದ್ಯ. ವೀಣೆ ಬ್ರಾಹ್ಮಣರಿಗೆ. ಮುಖವೀಣೆ ಹೊಲೆ ಜಾತಿಗೆ.
ಮಡಕೆಗಿಂತ ಬೆಳ್ಳಿ; ಹತ್ತಿಗಿಂತ ರೇಷ್ಮೆ ಉತ್ತಮ. ಕಾರಣ, ಅದಕ್ಕೆ ಈ ಹನ್ನೆರಡು ಮಲ ಅಷ್ಟು ಸುಲಭವಾಗಿ ಅಂಟುವುದಿಲ್ಲ. ರೇಷ್ಮೆಯೇ ರೇಶಿಮೆ ಹುಳದ ಮೈಯ ಮಲ ನಿಜ. ಆದರೆ ಅದು ಮನುಷ್ಯರಿಗೆ ಮಡಿ. ನೋಡಿ ಹೇಗಿದೆ.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಈ ಅಮೆರಿಕನ್ನರಿಗೆ ಎಷ್ಟು ವಿಷಯ ಗೊತ್ತಿದೆ! ಯಾವ ಯಾವದೊ ಲೈಬ್ರರಿಗಳಿಗೆ ಹೋಗಿ ನೋಡಿದ್ದಾರೆ. ಎಂಥೆಂಥ ಕಾಶೀ ಗೊಡ್ಡು ಪಂಡಿತರ ಕಾಳಜಿ ಹಿಂಡಿ ಪಾಂಡಿತ್ಯದ ರಸ ಇಳಿಸಿದ್ದಾರೆ. ಎಲ್ಲೆಲ್ಲಿನ ಓಲೆಗರಿ ಹಸ್ತಪ್ರತಿಗಳ ಧೂಳು ಹೊಡೆದು ವಸ್ತು ಸಂಗ್ರಹಿಸಿದ್ದಾರೆ. ಆಶ್ಚರ್ಯ, ಪರಮಾಶ್ಚರ್ಯ ಇವನಿಗೆ.
ಹಿಂದುದೇಶದ ವಿಷಯ ಕಲಿಯಬೇಕಾದರೆ ಫಿಲಡೆಲ್ಫಿಯ, ಬರ್ಕ್ಲಿ, ಚಿಕಾಗೋ, ಅಂಥ ಜಾಗಕ್ಕೆ ಬರಬೇಕು. ನಮಗೆಲ್ಲಿದೆ ಇವರ ಆಸ್ಥೆ? ವಿವೇಕಾನಂದರು ಕೂಡ ಚಿಕಾಗೋವಿಗೆ ಬರಲಿಲ್ಲವೆ? ಅವರು ನಮ್ಮ ಧರ್ಮದ ಮೇಲೆ ಕೊಟ್ಟ ಮೊದಲ ಭಾಷಣ ಇಲ್ಲೆ.
ಸೂತಕ ತರುವ ಮೂರು ಜೀವಕ್ರಿಯೆಗಳಲ್ಲಿ ಮುಟ್ಟಾಗುವುದು ಮೊದಲು, ಹುಟ್ಟುವುದು ಅದಕ್ಕಿಂತ ಒಂದು ಡಿಗ್ರಿ ಹೆಚ್ಚಿನದು. ಎಲ್ಲಕ್ಕಿಂತ ಬಲವತ್ತರವಾದ ಸೂತಕ ಸಾವಿನ ಸೂತಕ. ಸಾವಿನ ಸೋಂಕಿದ್ದರೆ ಸಾಕು: ಏನೂ ಸೂತಕ ತರುತ್ತದೆ. ಉರಿಯುವ ಚಟ್ಟದ ಹೊಗೆ ಸೋಕಿದರೆ ಸಾಕು ಬ್ರಾಹ್ಮಣ ಸ್ನಾನ ಮಾಡಬೇಕು. ಹೊಲೆಯರಲ್ಲದೆ ಮಿಕ್ಕವರಾರೂ ಸತ್ತವನುಟ್ಟ ಬಟ್ಟೆ ಉಡುವ ಹಾಗಿಲ್ಲ. (ಮನು. ೧೦.೩೯)
ಶುಭದಲ್ಲಿ ಶುಭವಾದ ಹಸು ಸತ್ತರೆ ಅದರ ದೇಹದ ಮಾಂಸ ತಿನ್ನುವವರು ಎಲ್ಲರಿಗಿಂತ ಕೀಳುಜಾತಿ. ಕಾಗೆ ಹದ್ದು ಕೂಡ ಈ ಕಾರಣಕ್ಕೇ ಹಕ್ಕಿ ಜಾತಿಯಲ್ಲಿ ಕೀಳು ಹಕ್ಕಿ. ಕೆಲವು ಸಾರಿ ಸಾವಿಗೂ ಅಸ್ಪೃಶ್ಯತೆಗೂ ಇರುವ ಅಂಟು ಬಹಳ ಸೂಕ್ಷ್ಮ. ಬಂಗಾಳದ ಗಾಣಿಗ ಜಾತಿಯವರಲ್ಲಿ ಎರಡು ಒಳಜಾತಿ: ಎಣ್ಣೆ ಮಾರುವವರು ಉತ್ತಮ ಜಾತಿ. ಆದರೆ ಗಾಣ ಆಡಿಸಿ ಬೀಜ ಅರೆದು ಒತ್ತಿ ಎಣ್ಣೆ ತೆಗೆಯುವ ಜಾತಿ ಕೀಳುಜಾತಿ. ಕಾರಣ. ಅವರು ಬೀಜ ಕೊಲ್ಲುವವರು, ಸಾವಿನ ಸೋಂಕಿನವರು. (ಹಟನ್ ೧೯೪೬:೭೭-೭೮)
ಇದೆಲ್ಲ ಇವನಿಗೆ ಗೊತ್ತೇ ಇರಲಿಲ್ಲ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಅವನೇನು ಓದದವನಲ್ಲ. ಮೈಸೂರಿನಲ್ಲಿ ಪ್ರತಿದಿನ ಯೂನಿವರ್ಸಿಟಿ ಲೈಬ್ರರಿಗೆ ನಡೆದು ನಡೆದು ಚಪ್ಪಲಿ ಚಕ್ಕಳ ಸವೆಸಿದ್ದ. ಅಲ್ಲಿ ಗುರುತಿದ್ದ ಕ್ಲಾರ್ಕುಗಳು ಐದಾರು ಜನ- ಅದರಲ್ಲಂತೂ ಶೆಟ್ಟಿ ಅವರ ಜೊತೆಗೇ ಎಕನಾಮಿಕ್ಸ್ ಕ್ಲಾಸಿನಲ್ಲಿ ಓದಿ ಹಿಂದಿನ ವರುಷ ಫೇಲಾಗಿ ಲೈಬ್ರರಿ ಕೆಲಸಕ್ಕೆ ಸೇರಿಕೊಂಡಿದ್ದ. ಅಣ್ಣಯ್ಯ ಬಂದಾಗೆಲ್ಲ ಶೆಟ್ಟಿ ಅವನಿಗೆ ಲೈಬ್ರರಿಯ ಬೀಗದ ಕೈ ಗೊಂಚಲನ್ನೇ ಕೊಟ್ಟು, ಬೇಕಾದ ಪುಸ್ತಕ ಹುಡುಕಿ ತೊಗೊಳ್ಳಿ ಅಣ್ಣಯ್ಯ, ಎಂದು ಕೊಡುತ್ತಿದ್ದ.
ಭಾರವಾದ ಗೊಂಚಲು, ಬಳಸಿ ಬಳಸಿ ಕೈಯಿಂದ ಕೈಗೆ ಹಾದು ತೇಯ್ದು ನುಣ್ಣಗೆ ಹೊಳೆಯುತ್ತಿದ್ದ ಕಬ್ಬಿಣದ ಬೀಗದ ಕೈಗಳು. ಅವುಗಳ ನಡುವೆ ಸಣ್ಣಗೆ ಸೇರಿಕೊಂಡ ಹಳದಿ ಹೊಳಪಿನ ಹಿತ್ತಾಳೆಯ ಕೀಲಿಗಳು. ಹಿತ್ತಾಳೆಯ ಬೀಗಕ್ಕೆ ಹಿತ್ತಾಳೆಯ ಕೈ, ಹೆಣ್ಣು-ಬೀಗಕ್ಕೆ ಗಂಡು-ಕೈ. ಗಂಡು-ಬೀಗಕ್ಕೆ ಹೆಣ್ಣು-ಕೈ. ದೊಡ್ಡದಕ್ಕೆ ದೊಡ್ಡದು. ಚಿಕ್ಕದಕ್ಕೆ ಚಿಕ್ಕದು. ಕೆಲವು ಮಾತ್ರ ದೊಡ್ಡ ಬೀಗಕ್ಕೆ ಸಣ್ಣ ಬೀಗದ ಕೈ. ಸಣ್ಣ ಬೀಗಕ್ಕೆ ದೊಡ್ಡ ಬೀಗದ ಕೈ. ಹೀಗೆ ವಿಪರ್ಯಾಸ. ಪರ್ಯಾಯ, ಅನುಲೋಮ- ಈ ಪುಸ್ತಕದಲ್ಲಿ ಹೇಳಿದ ಮನು ಹೇಳಿದ ಮದುವೆಗಳ ಹಾಗೆ. ಕೆಲವು ಬೀರುವಿಗಿಂತಲೂ ಬೀಗ ದೊಡ್ಡದಾಗಿದ್ದರೂ ಬೀಗ ಹಾಕುವುದಕ್ಕೆ ಬರುತ್ತಿರಲಿಲ್ಲ. ಮುಟ್ಟಿದರೆ ಬಿಟ್ಟುಕೊಳ್ಳುತ್ತಿತ್ತು. ಕೆಲವು ಕಪಿಮುಷ್ಟಿ. ಒಡೆದೇ ತೆಗೆಯಬೇಕು. ಅದರ ಹಿಂದೆ ಅವನಿಗೆ ಕಣ್ಣಿಗೆ ಕಾಣುವ, ಕೈಗೆ ಸಿಕ್ಕದ ಪುಸ್ತಕ. ಎಂತಹ ಕತೆ ಸಮಾಜಶಾಸ್ತ್ರ ಬೆತ್ತಲೆ ಚಿತ್ರ ಇದೆಯೋ ಅಂಥ ಪುಸ್ತಕದಲ್ಲಿ!
ಮೈಸೂರಿನಲ್ಲಿ ಇವನು ಓದಿದ್ದೆಲ್ಲ ಪಾಶ್ಚಾತ್ಯರ ಬಗ್ಗೆ. ಇಂಗ್ಲೀಷು, ಕನ್ನಡ ಓದಿದರೂ ಅನಕಾರನೀನದ ಭಾಷಾಂತರ. ಮೂರ್ತಿರಾಯರು ಷೇಕ್ಸ್‌ಪಿಯರ್‌ನ ಮೇಲೆ ಬರೆದ ಪುಸ್ತಕ. ಅಮೆರಿಕಕ್ಕೆ ಹೋಗಿ ಬಂದವರು ಬರೆದ ಸ್ಥಳಪುರಾಣ, ಸಮುದ್ರದಾಚೆಯಿಂದ. ಅಪೂರ್ವ ಪಶ್ಚಿಮ. ಅಮೇರಿಕದಲ್ಲಿ ನಾನು.
ಮಲಶುದ್ದಿಗೆ ಮನು ಹನ್ನೊಂದು ಮಾರ್ಗ ಹೇಳಿದ. ಬ್ರಾಹ್ಮಣದ ವಿಧಿಗಳು, ಬೆಂಕಿ, ಪ್ರಸಾದ, ಮಣ್ಣು, ಅಂತಃಕರಣ ಸಂಯಮ, ನೀರು, ಸೆಗಣಿಯೆತ್ತಿ ಇಟ್ಟ ಆಣೆ, ಗಾಳಿ, ಕರ್ಮಗಳು, ಸೂರ್ಯ, ಕಾಲ- ಇವು ಒಡಲುಗೊಂಡ ಪ್ರಾಣಿಗಳನ್ನು ಶುದ್ಧಮಾಡುತ್ತವೆ.(ಮನು. ೫೧-೦೫)
ಈ ಬಿಳಿಯರಿಗೆ ಇದೆಲ್ಲ ಹೇಗೆ ತಿಳಿದುಹೋಯಿತು? ಇಷ್ಟುದೂರ, ಹತ್ತುಸಾವಿರ ಮೈಲಿ, ನೀರು, ಸೂರ್ಯ, ಗಾಳಿ, ನೆಲ, ಕಾಲಗಳನ್ನು ದಾಟಿ ಬಂದು ಇವನು ಈ ಕೆಟ್ಟ ನಾತದ ಚಿಕಾಗೋನಲ್ಲಿ. ಅಣ್ಣಯ್ಯ ಶ್ರೋತ್ರಿಗಳ ಬೀಜಕ್ಕೆ ಮೊಳೆಯಾಗಿ ಹುಟ್ಟಿದ ಅಣ್ಣಯ್ಯ. ಇಲ್ಲಿ ಬಂದು ಇದೆಲ್ಲ ಕಲಿಯಬೇಕಾಯಿತು. ಈ ಚಳಿಯಲ್ಲಿ ಈ ಬಿಳಿ ಮಂಜಿನಲ್ಲಿ ಆ ಬಿಸಿ ಆ ಬಿಸಿಲು, ಈ ಕರಿ ಗುಟ್ಟನ್ನೆಲ್ಲ ಈ ಬಿಳಿಜನ ಹೇಗೆ ತಿಳಿದುಕೊಂಡು ಬಿಟ್ಟರು? ಈ ಮಂತ್ರ ಇವರಿಗೆ ಯಾರು ಕಿವಿಯಲ್ಲಿ ಜಪಿಸಿದರು? ಜರ್ಮನಿಯ ಮ್ಯಾಕ್ಸಮುಲ್ಲರ್ ಸಂಸ್ಕೃತ ಕಲಿತು ಮೋಕ್ಷಮುಲ್ಲ ಭಟ್ಟನಾಗಿ ನಮಗೇ ವೇದ ಕಲಿಸಿದನಲ್ಲ!
ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ
ಹಿಂದೂಸ್ಥಾನದಲ್ಲಿ ಇವನು ಅಮೆರಿಕ ಇಂಗ್ಲೆಂಡು ಯುರೋಪು ಎಂದು ಜಪಿಸಿದ ಹಾಗೆ ಇಲ್ಲಿ ಈ ಅಮೆರಿಕದಲ್ಲಿ ಇವನು ಮತ್ತೆ ಮತ್ತೆ ಹಿಂದೂಸ್ಥಾನದ ಬಗ್ಗೆ ಓದಿದ, ಆಡಿದ. ಸಿಕ್ಕಸಿಕ್ಕವರಿಗೆ ಕಾಫಿ ಕೊಡಿಸಿ ಅವರು ಕೊಟ್ಟ ಬೀರು ಕುಡಿದು ಬಿಳೀ ಹುಡುಗಿಯರ ಕೈ ಹಿಡಿದು ತನಗೆ ಬರದ ಹಸ್ತಸಾಮುದ್ರಿಕ ಹೇಳಿದ.
ಇಲ್ಲಿ ಇವನಿಗೆ ಆಂತ್ರೋಪಾಲಜಿಯ ಆತುರ. ಕಾಮಾತುರದ ಹಾಗೆ ಈ ಆತ್ಮಜ್ಞಾನದ ಆತುರ- ಲಜ್ಜೆಯಿಲ್ಲ ಭಯವಿಲ್ಲ ಇದಕ್ಕೂ. ಹಿಂದೂದೇಶದ ಸಂಪ್ರದಾಯಗಳ ಬಗ್ಗೆ ಮಾನವಶಾಸ್ತ್ರಜ್ಞರ ಬರಹ ಸಿಕ್ಕಸಿಕ್ಕದ್ದು ಓದಿದ. ಎರಡನೆಯ ಅಟ್ಟದ ಮೇಲೆ ಆ ಪುಸ್ತಕ ಕಂತೆ ಕಂತೆ ಇದ್ದುವು. ಅದರ ನಂಬರು PK 321. ಏಣಿ ಏರಿ ಕಾಲಾವಧಿಯ ಹಾಗೆ ಮರದಲ್ಲಿ ಕಟ್ಟಿದ್ದ. ಕೊಳಾಯಿಗಳ ಕೈ ಹಿಡಿ ಇದ್ದ ಅಟ್ಟ. ಈ ಪಶ್ಚಿಮದಲ್ಲಿ ಈ ಪೂರ್ವ ಬಂದು ಮುಟ್ಟಿತು. ದೂರದ ಹಸಿರೋ, ಇಂಟರ್‌ನ್ಯಾಷನಲ್ ಹೌಸಿನಲ್ಲಿ ಬಳಕಿಯಾದ ಬಿಳೀ ಹುಡುಗಿಯರು,
“ನಿಮ್ಮ ಹೆಂಗಸರು ಹಣೆಯ ಮೇಲೆ ಕೆಂಪು ಬೊಟ್ಟು ಇಟ್ಟುಕೊಳ್ಳುತ್ತಾರಲ್ಲ. ಯಾಕೆ?” ಎಂದಾಗ ಕುತೂಹಲಕ್ಕೆ ಉತ್ತರ ಸಿದ್ಧವಾಗಿರಲಿ ಎಂದೋ, ಅಂತೂ ಮೈಸೂರಿನಲ್ಲಿ ಅವರ ಅಪ್ಪ ಎಷ್ಟು ಹೇಳಿದರೂ ಕೋಪಿಸಿಕೊಂಡರೂ ಮಾಡದ ಗೀತಾಪಾರಾಯಣ ಅಮೆರಿಕೆಯಲ್ಲಿ ಮಾಡಿ. ಬೀರು ವ್ಹಿಸ್ಕಿ ಹಸುವಿನ ಮಾಂಸ, ಕಕ್ಕಸಿಗೆ ಹೋದರೆ ಶೌಚಕ್ಕೆ ನೀರಿಲ್ಲದೆ ಕಾಗದದಿಂದ ಒರೆಸಿಕೊಳ್ಳುವ ಈ ಶ್ವಪಚತನ, ಪ್ಲೇಬಾಯ್ ಮ್ಯಾಗಜೀನಿನ ಬೆತ್ತಲೆ ಮೊಲೆ ತೊಡೆ ರೂಪಾಯಿಯಗಲ ಹೊಕ್ಕುಳಲ್ಲಿ ಸಿಲುಕಿ ಬಿಡಿಸಿಕೊಂಡ ಬಿಡುವಿನಲ್ಲಿ, ಅವನು ಎಕನಾಮಿಕ್ಸ್ ನಡುವೆ ಈ ಎರಡು ವರ್ಷ ಹಿಂದೂ ಸಂಪ್ರದಾಯ ಓದಿದ. ಸ್ಟಾಟಿಸ್ಟಿಕ್ಸಿನ ಅಂಕಿ ಸಂಖ್ಯೆಗಳ ನಡುವೆ ರಾಮಕೃಷ್ಣಾಶ್ರಮದ ಪುಸ್ತಕ ಪಟ್ಟಿ. ಹಿಂದೂ ಸಂಸ್ಕೃತಿ ಕಲಿಯಬೇಕಾದರೆ ಅಮೆರಿಕಕ್ಕೆ ಬರಬೇಕು, ಅನ್ನುತ್ತಿದ್ದ. ನಮ್ಮ ಚಿಕಾಗೋ ಲೈಬ್ರರಿಯಲ್ಲಿ ‘ಪ್ರಜಾವಾಣಿ’ ಕೂಡ ಬರುತ್ತೆ ಕಾಣ್ರಿ. ಹಿಂದೂ ಸಂಸ್ಕೃತಿಯ ಮುಚ್ಚಿದ ಬಾಗಿಲಿಗೆ, ಹಾಕಿದ ಬೀಗಗಳನೇಕಕ್ಕೆ ಅಮೆರಿಕದ ಬೀಗದ ಕೈ ಸಿಕ್ಕಿತು: ಗೊಂಚಲಿಗೆ ಗೊಂಚಲೇ ಸಿಕ್ಕಿತ್ತು.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಅವನು ಅವತ್ತು ಆ ಪುಸ್ತಕದ ಅಲಮಾರಿಗಳ ನಡುವೆ ಓಡಾಡಿದಾಗ ಥಟ್ಟನೆ ಹೊಸದೊಂದು ಪುಸ್ತಕ. ನೀಲಿಬಣ್ಣದ ಬಟ್ಟೆಯ ರಟ್ಟು, ಕೈತುಂಬ ಪುಸ್ತಕ. ಚಿನ್ನದಕ್ಷರದಲ್ಲಿ ನೀಲಿ ಬೆನ್ನ ಮೇಲೆ: Hinduism: Custom and Ritual ಎಂದು ಬರೆದಿತ್ತು. ಸ್ಟೀವನ್ ಫರ್‍ಗುಸನ್ ಬರೆದದ್ದು. ಈಗ ತಾನೆ, 1968ರಲ್ಲಿ ಅಚ್ಚಾದದ್ದು. ಬಿಸಿಬಿಸಿ ಸುದ್ದಿ. ಸೀಮಂತ, ನಾಮಕರಣ, ಮೊದಲ ಚೌಲ, ಅನ್ನಪ್ರಾಶನ, ಮುಂಜಿ, ಮದುವೆಯ ಸಪ್ತಪದಿ, ಪ್ರಸ್ಥದ ರಾತ್ರಿ ಕೊಡುವ ಹಣ್ಣು ಹಾಲು ಬಾದಾಮಿ.
ಹೊಸ ಹೆಂಡತಿಗೆ ಯಾಲಕ್ಕಿ ಬಾದಾಮಿ ತಿನ್ನಿಸಿ ನೆಟ್ಟಗೆ ಬಾದಾಮಿ ಹಾಲು ಕುಡೀತಾನೆ ಕಣೋ ರಸಿಕ ಎಂದು ಯಾವುದೋ ಹುಣಸೂರು ಪ್ರಸ್ಥದಲ್ಲಿ ಯಾರೋ ಪೋಲಿ ಜೋಕು ಹೇಳಿದ್ದರು.
ಗಂಡ ಹೆಂಡತಿಗೆ ಹೇಳುವ ಸಂಸ್ಕೃತದ ಮೈಥುನ-ಮಂತ್ರ, ಷಷ್ಠ ಅಬ್ಧಪೂರ್ತಿ, ಶಾಂತಿಗಳು ಪ್ರಾಯಶ್ಚಿತ್ತಗಳು, ದಾನಗಳು, ಉತ್ತರಕ್ರಿಯೆ ಇತ್ಯಾದಿ ಇತ್ಯಾದಿ ಸಂಸ್ಕಾರಗಳೆಲ್ಲ ವಿವರವಾಗಿ ಬಿಡಿಬಿಡಿಯಾಗಿ ಪಟ್ಟಿ ಹಾಕಿ ಬಿಚ್ಚಿ ಬರೆದಿದ್ದರು.
163ನೇ ಪುಟ. ಬ್ರಾಹ್ಮಣರ ಉತ್ತರಕ್ರಿಯೆಗಳ ವರ್ಣನೆ ಚಿತ್ರಗಳೊಂದಿಗೆ. ಎಷ್ಟು ವಿಷಯ ಹೇಳಿದ್ದ ಈ ಫರ್‍ಗುಸನ್ ಆಸಾಮಿ. ಪುಟಪುಟಕ್ಕೂ ಮನು, ಪಿತೃ-ಮೇಧ-ಸೂತ್ರ: ಸಪಿಂಡ ಯಾರು ಅಲ್ಲ ಯಾರು ಹೌದು. ಸನ್ಯಾಸಿಗೂ ಹಲ್ಲುಬರದ ಮಗುವಿಗೂ ಸೂತಕವಿಲ್ಲ. ಹಲ್ಲು ಬಂದ ಮಗು ಸತ್ತರೆ ಒಂದು ದಿನದ ಮೈಲಿಗೆ. ಚೌಲಕರ್ಮ ಆಗಿದ್ದರೆ ಮೂರು ದಿನ. ಶ್ರಾದ್ಧಕ್ಕೆ ಏಳು ಮಂದಿ ಬೇಕು: ಮಗ ಮೊಮ್ಮಗ ಅವನ ಮಗ ಶ್ರಾದ್ಧ ಮಾಡುವವರು, ತಂದೆ ತಾತ ಮುತ್ತಾತ ಮಾಡಿಸಿಕೊಳ್ಳುವವರು. ಮೂರು ತಲೆಮಾರು ಮೇಲೆ, ಮೂರು ತಲೆಮಾರು ಕೆಳಗೆ: ನಡುವೆ ತಾನು. ಏಳು ಪಿಂಡದ ನಡು ಪಿಂಡ. ಇಂತಹ ವಿವರ ಎಷ್ಟೋ, ಜತೆಗೆ ಯಾವ ವರ್ಣದಲ್ಲಿ ಯಾರಿಗೆ ಎಷ್ಟು ದಿನ ಸೂತಕ ಎನ್ನುವುದಕ್ಕೆ ಪಟ್ಟಿಗಳು. ಅಷ್ಟೇ ಅಲ್ಲ, ಪರದೇಶದಲ್ಲಿ ಸಪಿಂಡ ಸತ್ತರೆ, ಸುದ್ದಿ ಕೇಳುವವರೆಗೂ ಸೂತಕವಿಲ್ಲ. ಸುದ್ದಿ ಕೇಳಿದ ಕೂಡಲೆ ಸೂತಕ ಸುತ್ತಿಕೊಳ್ಳುತ್ತದೆ. ಅದಕ್ಕೆ ತಕ್ಕ ದಿನದ ಲೆಕ್ಕ, ಸ್ನಾನದ ಲೆಕ್ಕ ಆಗಬೇಕು. ಇವನ ಶ್ರದ್ದೆ ಕುತೂಹಲ ವಾಕ್ಯ ವಾಕ್ಯಕ್ಕೆ ಏರುತ್ತ ಹೋಯಿತು.
ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ
ಪುಸ್ತಕಗಳ ನಡುವೆ ಹಾಗೇ ಕೂತು ಓದಿದ. ಶ್ರಾದ್ಧದ ನಾಲ್ಕು ಭಾಗವನ್ನೂ ಪುಸ್ತಕ ಹೇಳಿತ್ತು. ಅವನೆಂದೂ ಯಾರ ಸಾವನ್ನೂ ನೋಡಿದವನಲ್ಲ. ಮೂರನೆ ಬೀದಿಯಲ್ಲಿ ಅಗಸರು ಹೆಣಕ್ಕೆ ಶೃಂಗಾರ ಮಾಡಿ ಮೆರವಣಿಗೆಯಲ್ಲಿ ಹೊತ್ತುಕೊಂಡು ಹೋಗಿದ್ದನ್ನು ಒಂದೆರಡು ಸಾರಿ ನೋಡಿದ್ದ. ಅಷ್ಟೆ. ದೊಡ್ಡಪ್ಪ ಸತ್ತಾಗ ಅವನು ಬೊಂಬಾಯಿಗೆ ಹೋಗಿದ್ದ. ಮನೆಯಲ್ಲಿ ಅಪ್ಪನಿಗೆ ಸ್ವಲ್ಪ ಮೂತ್ರರೋಗ ಇದ್ದರೂ ನಾಲಗೆ ಚಪಲ ಹಿಡಿತದಲ್ಲಿದ್ದರೆ ಪ್ರಾಣಭಯವಿಲ್ಲ ಎಂದಿದ್ದರು ಡಾಕ್ಟರು. ಒಂದೂವರೆ ವರ್ಷದ ಹಿಂದೆ ಲಕ್ವ ಹೊಡೆದು ಕೈ ಸೇದಿಹೋಗಿತ್ತು. ಮುಖದ ಎಡಭಾಗ ಸೆಳೆದಿತ್ತು. ಆದರೂ ಸೌಖ್ಯ, ಎಂದು ಅಮ್ಮ ಎರಡು ವಾರಕ್ಕೊಮ್ಮೆ ಬರೆಯುತ್ತಿದ್ದ ನೀರಸವಾದ ದಮಯಂತಿ ಬಾಣಂತನ, ಅಲ್ಲಿ ಶನಿವಾರ ಶನಿವಾರ ಎಣ್ಣೆನೀರು ಹಾಕಿಕೊಳ್ಳದೇ ಇರಬೇಡ ಉಷ್ಣ ಆಗುತ್ತೆ ಸೀಗೇಕಾಯಿ ಕಳಿಸಲೇ? ಎಂದೆಲ್ಲ ನಡುಗಕ್ಷರದಲ್ಲಿ ಬರೆದ, ಪತ್ರದಲ್ಲಿ ಬರೆಯುತ್ತ ಇದ್ದರು.
ಒಬ್ಬ ಬ್ರಾಹ್ಮಣನಿಗೆ ಸಾವು ಸಮೀಪಿಸಿದಾಗ ಅವನನ್ನು ಮಂಚದಿಂದೆತ್ತಿ ದರ್ಭೆ ಹರಡಿದ ನೆಲದ ಮೇಲೆ ಕಾಲು ದಕ್ಷಿಣಕ್ಕೆ ಮಾಡಿ ಮಲಗಿಸುತ್ತಾರೆ. ದೇಹ ನೆಲಕ್ಕೂ ಆಕಾಶಕ್ಕೂ ನಡುವೆ ಇಬ್ಬಂದಿಯಾಗಿ ಮಂಚದ ಮೇಲಿರದೆ, ಭೂಮಿಯ ಮೇಲೆ ನಿರಾತಂಕವಾಗಿರಬೇಕು. ದರ್ಭೆಯಂತೂ ಭೂಮಿಯ ರಸ ಹೀರಿದ ರಸವಾದಿ ಹುಲ್ಲು, ಬೆಂಕಿಗೂ ಪ್ರಿಯ, ದಕ್ಷಿಣ ಯಮನ ದಿಕ್ಕು, ಪಿತೃಗಳ ದೆಸೆ.
ಆಮೇಲೆ ಬಲಗಿವಿಯಲ್ಲಿ ವೇದಸ್ವರ, ಬಾಯಲ್ಲಿ ಪಂಚಗವ್ಯ, ಮನುಷ್ಯರ ಸತ್ತ ದೇಹ ಮೈಲಿಗೆ; ಜೀವಂತ ಹಸುವಿನ ಮಲ ಮಡಿ: ನೋಡಿ ಹೇಗಿದೆ. ದಶದಾನಗಳು, ಎಳ್ಳು, ಹಸು, ಭೂಮಿ, ತುಪ್ಪ, ಚಿನ್ನ, ಬೆಳ್ಳಿ, ಉಪ್ಪು, ಬಟ್ಟೆ, ಧಾನ್ಯ, ಸಕ್ಕರೆ. ಸತ್ತವನು ಸತ್ತ ಕೂಡಲೆ ಗಂಡು ಮಕ್ಕಳೆಲ್ಲ ಸ್ನಾನ ಮಾಡಿ, ಹಿರಿಯ ಮಗ ಜನಿವಾರವನ್ನು ಎಡ ಕಂಕುಳಡಿಗೆ ಅಶುಭಸೂಚಕವಾಗಿ ತಿರುಗಮುರುಗ ಹಾಕಿಕೊಳ್ಳುತ್ತಾನೆ. ದೇಹಕ್ಕೆ ಮಡಿಯಾಗಿಸಿ, ವಿಭೂತಿ ಇತ್ಯಾದಿ ಹಾಕಿ, ಭೂಮಿತಾಯಿಗೆ ಶ್ಲೋಕ ಹೇಳುತ್ತಾರೆ.
ಈ ಪುಟದ ಪಕ್ಕದಲ್ಲಿ ಒಂದು ನುಣುಪು ಕಾಗದದ ಚಿತ್ರ ಇತ್ತು. ಮೈಸೂರು ರೀತಿಯ ಮನೆಯ ಮುಂಭಾಗದ ವರಾಂಡ. ಹಿಂದಿನ ಗೋಡೆಯಲ್ಲಿ ಕಂಬಿ ಹಾಕಿದ ಕಿಟಕಿ. ವರಾಂಡದ ನೆಲದ ಮೇಲೆ ಮಡಿಮಾಡಿಸಿ ಶೃಂಗರಿಸಿ ಮಲಗಿಸಿದ ಶವ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಸತ್ತವನು ದೇವರು. ಅವನ ದೇಹ ವಿಷ್ಣು. ಅವಳಾದರೆ ಅದು ಲಕ್ಷ್ಮಿ. ದೇವರಿಗಾಗುವ ಹಾಗೆ ಅದಕ್ಕೆ ಪ್ರದಕ್ಷಿಣೆ ಆರತಿ ಎಲ್ಲ ಆಗುತ್ತದೆ.
ಯಮನಿಗೀಗ ಅಗ್ನಿ ಬೆಳೆಸಿ ತುಪ್ಪದ ಹವಿಸ್ಸು ಹಾಕುತ್ತಾರೆ. ಶವಕ್ಕೂ ಅಗ್ನಿಗೂ ಸಂಬಂಧ ಬರುವ ಹಾಗೆ ಒಂದು ಎಳೆ ನೂಲು. ಶವದ ಹೆಬ್ಬೆಟ್ಟುಗಳನ್ನು ಕಟ್ಟಿ ಅದರ ಮೇಲೆ ಹೊಸ ಬಿಳಿ ಬಟ್ಟೆ ಹೊದಿಸುತ್ತಾರೆ.
ಇದರದೂ ಒಂದು ಚಿತ್ರ ಅಲ್ಲಿತ್ತು. ಅದೇ ಮೈಸೂರು ಮನೆಯಂಥ ಮನೆ. ಅದೇ ಕಂಬಿ ಕಿಟಕಿ. ಆದರೆ ಒಬ್ಬಿಬ್ಬರು ವಿಭೂತಿ ಬಳಿದ ಬ್ರಾಹ್ಮಣರು ಚಿತ್ರದಲ್ಲಿ ಇದ್ದರು. ಎಲ್ಲೋ ನೋಡಿದ ಹಾಗೆ ಕೂಡ ಇತ್ತು. ಇಷ್ಟು ದೂರದಲ್ಲಿ ಮೈಸೂರಿನ ವಿಭೂತಿಯ ಹಾರುವರೆಲ್ಲ ಒಂದೇ ಬೂದಿ ಮುಖ.
ನಾಲ್ಕು ಮಂದಿ ಹೆಣ ಹೊರುವವರು. ಚಟ್ಟಕ್ಕೆ ಕಟ್ಟಿ, ಮನೆಗೆ ವಿಮುಖವಾಗುವಂತೆ ಶವದ ಮುಖ ತಿರುಗಿಸಿ, ಕಡೆಯ ಮೆರವಣಿಗೆ ಹೊರಡುತ್ತದೆ.
ಇಲ್ಲಿ ಮತ್ತೊಂದು ಚಿತ್ರ. ಮೈಸೂರಿನದೇ ಬೀದಿ. ಸಂದೇಹವಿಲ್ಲ. ನಾಲ್ಕಾರು ಮನೆ, ಚಿರಪರಿಚಿತವಾಗಿ ಕಾಣಿಸಿತು. ಮೂರು ಕಡೆ ಮೆರವಣಿಗೆ ನಿಂತು ಚಟ್ಟವನ್ನು ಇಳಿಸುತ್ತಾರೆ. ಅದಕ್ಕೆ ಪ್ರದಕ್ಷಿಣೆ ಮಾಡಿ, ಅಶುಭ ದೈವಗಳಿಗೆ ಅಕ್ಕಿಕಾಳು ಎಸೆಯುತ್ತಾರೆ.
ಸುಡುಗಾಡಿಗೆ ಬಂದ ಮೇಲೆ ದಕ್ಷಿಣ-ಮುಖವಾಗಿ ಚಿತೆಯ ಮೇಲೆ ದೇಹವನ್ನಿಟ್ಟು, ಹೆಬ್ಬೆಟ್ಟಿನ ಗಂಟು ಬಿಚ್ಚಿ, ಮುಚ್ಚಿದ ಬಿಳಿ ಬಟ್ಟೆ ತೆಗೆದು ಸುಡುಗಾಡಿನ ಚಂಡಾಲನಿಗೆ ಅದನ್ನು ದಾನಮಾಡುತ್ತಾರೆ. ಮಗ, ಸಂಬಂಧಿಕರು ಹೆಣದ ಬಾಯಿಗೆ ನೀರು ಚಿಮುಕಿಸಿದ ಅಕ್ಷತೆ ಹಾಕುತ್ತಾರೆ. ಚಿನ್ನದ ನಾಣ್ಯವೊಂದರಿಂದ ಅದರ ಬಾಯಿ ಮುಚ್ಚುತ್ತಾರೆ. ಸೊಂಟದ ಕೆಳಗೆ ಸಣ್ಣ ಬಾಳೆ ಎಲೆಯೋ ಬಟ್ಟೆಯ ಚಿಂದಿಯೋ ಬಿಟ್ಟರೆ ಹುಟ್ಟಿದಷ್ಟೇ ಬೆತ್ತಲೆ. ಈಗ ಅದು.
ಚಿನ್ನ ಈಗಿನ ಕಾಲದಲ್ಲಿ ಎಲ್ಲಿಸಿಕ್ಕಿತೋ ಕಾಣೆ. ಹದಿನಾಲ್ಕು ಕ್ಯಾರೆಟ್ಟಾದರೆ ಪರವಾಯಿಲ್ಲವೆ? ವೇದಸಮ್ಮತವೇ?
ಹಿರಿಯ ಮಗ ಹೊಸ ಮಡಕೆಯಲ್ಲಿ ನೀರು ತುಂಬಿ, ಅದರ ಪಕ್ಕದಲ್ಲಿ ಒಂದು ತೂತು ಹೊಡೆದು ಹೆಗಲ ಮೇಲಿಟ್ಟುಕೊಂಡು ಚಿತೆಯ ಸುತ್ತ ಮೂರು ಪ್ರದಕ್ಷಿಣೆ ಮಾಡಿ ನೀರನ್ನು ನೆಲಕ್ಕೆ ಹರಿಸುತ್ತಾನೆ. ಮೂರು ಸಾರಿ ಆದ ಮೇಲೆ ಹೆಗಲ ಹಿಂದೆ ಅದನ್ನೆಸೆದು ಒಡೆಯುತ್ತಾನೆ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಸುಡುಗಾಡಿನ ಚಿತ್ರವೂ ಒಂದರಲ್ಲಿತ್ತು. ಅದನ್ನು ನೋಡಿ ಇವನ ಮನಸ್ಸು ಕಲಕಿತು. ಯಾಕೋ ಇದು ಚಿರಪರಿಚಿತ ಎನಿಸಿತು. ಒಳ್ಳೆಯ ಕ್ಯಾಮರದಿಂದ ತೆಗೆದ ಚಿತ್ರ. ಚಿತ್ರ, ದೇಹ, ತಲೆ ಬಾದಾಮಿ ಕ್ರಾಪು ಮಾಡಿಸಿಕೊಂಡ ಮಧ್ಯವಯಸ್ಕ, ಹೆಗಲ ಮೇಲೆ ಸೋರುವ ಮಡಕೆ, ದೂರದಲ್ಲಿ ಮರಗಳು ಇತರರು.
ಅರೆ, ಆ ಮಧ್ಯವಯಸ್ಸಿನ ಮುಖ ತಿಳಿದ ಮುಖ. ದಾಯಾದಿ ಸುಂದರರಾಯರ ಮುಖ. ಹುಣಸೂರಿನಲ್ಲಿ ಸ್ಟುಡಿಯೋ ಇಟ್ಟಿದ್ದರು. ಇದೇಕೆ ಇಲ್ಲಿ ಬಂತು. ಈ ಚಂಡಾಲ ಇದೆಲ್ಲಿ ಬಂದ?
ಪಕ್ಕದ ಪುಟದಲ್ಲಿನ ಚಿತ್ರದಲ್ಲಿ ಚಿತೆ ಉರಿಯುತ್ತಿತ್ತು. ಅದರಡಿಯಲ್ಲಿ ಅಗ್ನಿಗೆ ಹೇಳಿದ ಮಂತ್ರಗಳು:
ಎಲೆ ಅಗ್ನಿಯೆ, ಈ ಮನುಷ್ಯನ ದೇಹವನ್ನು ಸುಡಬೇಡ. ಇವನ ಚರ್ಮವನ್ನು ಸುಡಬೇಡ. ಇವನನ್ನು ಪಕ್ವಮಾಡಿ ಪಿತೃಗಳ ಹತ್ತಿರ ಕಳಿಸಿಕೊಡು.
ಎಲೆ ಅಗ್ನಿಯೆ, ನೀನು ಈ ಯಜಮಾನನ ಯಜ್ಞದಲ್ಲಿ ಹುಟ್ಟಿದೆ. ಈಗ ನಿನ್ನಿಂದ ಮತ್ತೆ ಇವನು ಹುಟ್ಟಲಿ.
ಮಂತ್ರ ಅರ್ಧಕ್ಕೇ ನಿಲ್ಲಿಸಿ ಮತ್ತೆ ಅವನು ಹಿಂದಿನ ಪುಟ ತಿರುವಿ ದಾಯಾದಿ ಸುಂದರರಾಯರ ಮುಖ ನೋಡಿದ. ತಿಳಿದ ಮುಖ. ಕನ್ನಡಕ ತೆಗೆದಿದ್ದಾನೆ. ಅರೆನೆರೆತ ಪೂರ್ತಿ ಕ್ರಾಪಿನ ಬದಲು ಸ್ವಲ್ಪ ಶಾಸ್ತ್ರಕ್ಕೆ ತೆಗೆಸಿದ ಬಾದಾಮಿ ಕ್ರಾಪು. ಹೊಸ ಸರ್ವಾಂಗ-ಕ್ಷೌರ, ಎದೆಯ ಮೇಲಿನ ಕೂದಲು ಕೂಡ ಇಲ್ಲ. ಬೊಜ್ಜು ಹೊಕ್ಕುಳ ಕೆಳಗೆ ಮೇಲುಕೋಟೆ ಮಡಿ ಪಂಚೆ. ಇವನು ಯಾಕೆ ಇಲ್ಲಿ. ಈ ಪುಸ್ತಕದಲ್ಲಿ?
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಮುನ್ನುಡಿಗೆ ತಿರುಗಿದ. ಅದರಲ್ಲಿ ಈ ಫರ್‍ಗುಸನ್ ಮನುಷ್ಯ ಫೋರ್ಡ್ ವಿದ್ಯಾರ್ಥಿವೇತನದ ಸಹಾಯದಿಂದ ಮೈಸೂರಿಗೆ 1966-68ರಲ್ಲಿ ಹೋದದ್ದಾಗಿ ತಿಳಿಯಿತು. ಮೈಸೂರಿನಲ್ಲಿ ಮಿ. ಸುಂದರರಾಯರು ಮತ್ತು ಅವರ ಕುಟುಂಬ ವಿಷಯ ಸಂಗ್ರಹಣಕ್ಕೆ ಬಹಳ ಸಹಾಯ ಮಾಡಿದ್ದಾಗಿಯೂ ಹೇಳಿತ್ತು. ಅದಕ್ಕೇ ಮೈಸೂರು ಮನೆಗಳು. ಆ ಚಿತ್ರದಲ್ಲಿ ಮತ್ತೆ ಹಿಂದಿನ ಫೋಟೊಗಳನ್ನೆಲ್ಲ ತಿರುವಿ ಹಾಕಿದ. ಆ ಕಂಬಿ ಕಿಟಕಿ ಮನೆ ಪಕ್ಕದ ಮನೆಗಳು ಗೋಪಿ ಮನೆ ಸಂಪಿಗೆ ಮರದ ಗಂಗಮ್ಮನ ಖಾಲಿ ಮನೆ. ತಮ್ಮ ಮನೆ ಬೀದಿ. ಆ ವರಾಂಡ ತನ್ನ ಮನೆಯ ವರಾಂಡ. ಆ ಶವ ತಂದೆಯ ಶವ ಇರಬಹುದು. ಮುಖ ಸ್ಪಷ್ಟವಾಗಿ ಕಾಣಿಸಲಿಲ್ಲ. ಲಕ್ವ ಹೊಡೆದ ಮುಖ ಹರಿಯವ ನೀರಿನಲ್ಲಿ ನೋಡಿದ ಮುಖ, ಮೈಯೆಲ್ಲ ಬೆಳ್ಳಗೆ ಹೊದಿಸಿದೆ. ಆ ಬ್ರಾಹ್ಮಣರೂ ತಿಳಿದವರ ಹಾಗಿದಾರೆ.
ಮತ್ತೆ ಮುನ್ನುಡಿ ಓದಿದ.
ಸುಂದರರಾಯರು ಬಹಳ ಸಹಾಯ ಮಾಡಿದ್ದರು. ತಮ್ಮ ಮನೆಯ ಸಂಬಂಧೀಕರ ಮನೆಯ ಮದುವೆ ಮುಂಜಿ ಸೀಮಂತ ಉತ್ತರಕ್ರಿಯೆ ಎಲ್ಲಕ್ಕೂ ಕರೆದುಕೊಂಡು ಹೋಗಿ ಫೋಟೋ ತೆಗೆಸಿ ತೆಗೆದುಕೊಳ್ಳುವದಕ್ಕೆ ಸಹಾಯ ಮಾಡಿ, ಪ್ರಶ್ನೆ ಕೇಳಿ ಉತ್ತರ ಬರೆದುಕೊಳ್ಳುವುದಕ್ಕೂ ಮಂತ್ರಗಳನ್ನು ಟೇಪ್ ರೆಕಾರ್ಡ್ ಮಾಡಿಕೊಳ್ಳುವುದಕ್ಕೂ ಅನುಕೂಲ ಮಾಡಿಕೊಟ್ಟಿದ್ದರು. ಮನೆಯಲ್ಲಿ ಊಟಹಾಕಿದ್ದರು. ಅವರಿಗೆ ಈ ಮ್ಲೇಚ್ಛ ಅನೇಕಾನೇಕ ಕೃತಜ್ಞತೆ ಸಲ್ಲಿಸಿದ್ದ.
ಮತ್ತೆ ಚಿತೆಯ ಫೋಟೋ ನೋಡಿದೆ. ಉರಿಯುತ್ತಿತ್ತು. ಅದರ ಕೆಳಗೆ ಅಗ್ನಿಗೆ ಹೇಳಿಕೊಂಡ ಮಾತು. ಮರಗಿಡ ಮೈಸೂರಿನ ಸುಡುಗಾಡಿದ್ದ ಹಾಗೆ ಇತ್ತು. ಕೆಳಗೆ ಸಣ್ಣ ಅಕ್ಷರದಲ್ಲಿ ಕೃತಜ್ಞತೆ: ಸುಂದರರಾಯರ ಸ್ಟುಡಿಯೋ ಎಂದಿತ್ತು. ಅವನೇ ತೆಗೆದ ಚಿತ್ರ.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಅವನ ತಂದೆ ಸತ್ತು ಅವನ ದಾಯಾದಿ ಸುಂದರರಾಯ ಕರ್ಮ ಮಾಡಿದ. ಮಗ ಪರದೇಶದಲ್ಲಿ. ಅವರಮ್ಮ ಹೇಳಬೇಡ ಎಂದಿರಬೇಕು. ದೂರ ದೇಶ ಒಂಟಿ ಇದಾನೆ, ತಂದೆ ಇಲ್ಲದ ತಬ್ಬಲಿ. ಕೆಟ್ಟ ಸುದ್ದಿ, ಹೇಗೊ ಏನೋ, ಹೋದ ಕೆಲಸ ಮುಗಿಸಿಕೊಂಡು ಬರಲಿ ಎಂದಿರಬೇಕು. ಇಲ್ಲ ಈ ಇವನೇ ಈ ಸುಂದರೂನೇ ಸಲಹೆ ಕೊಟ್ಟಿರಬೇಕು- ಎಂದಿನ ಹಾಗೆ. ಅವನ ಮಾತೆಂದರೆ ಬಾವಿ ಹಾರುವುದಕ್ಕೂ ಸಿದ್ಧ ಅಮ್ಮ. ಲಕ್ವ ಹೊಡೆದು ಕೈಸೇದಿ ಹೋಗಿ ತಂದೆ ಕಾಗದ ಬರೆಯಲಿಲ್ಲ ಎಂದು ಹೇಳಿದ್ದರು ಎರಡು ವರ್ಷದ ಹಿಂದೆ- ಇವನು ಬಂದ ಮೂರು ತಿಂಗಳಲ್ಲಿ. ಇನ್ನು ಅಮ್ಮನಿಗೆ ಏನು ಮಾಡಿದರೋ? ತಲೆ ಬೋಳಿಸಿಬಿಟ್ಟರೋ, ಎಲ್ಲರೂ ಸೇರಿಕೊಂಡು ಆಚಾರವಂತರು. ಸುಂದರರಾಯನ ಮೇಲೆ ಕೆಂಡದಂತಹ ಕೋಪ ಬಂತು. ನೀಚ, ಚಂಡಾಲ, ಮತ್ತೆ ಮತ್ತೆ ಚಿತೆಯ ಚಿತ್ರ ನೋಡಿದ, ಕಂಬಿ ಕಿಟಕಿ, ಆ ಶವ, ಸುಂದರರಾಯನ ಬಾದಾಮಿ ಕ್ರಾಪು ಹೊಕ್ಕುಳು ನೋಡಿದ. ವರ್ಣನೆ ಓದಿದ.
ಹಿಂದೆಮುಂದೆ ಪುಟ ತಿರುವಿ ಹಾಕಿದ. ಗಾಬರಿಯಲ್ಲಿ ಪುಸ್ತಕ ಲೈಬ್ರರಿ ನೆಲಕ್ಕೆ ಮುಖ ಕೆಳಗಾಗಿ ಬಿತ್ತು. ಆ ಪುಟಗಳು ಮಡಿಸಿ ಹೋದುವು.
ಗಾಬರಿ ಗಾಬರಿಯಾಗಿ ಎತ್ತಿ ಪುಟ ಸರಿಮಾಡಿ ತಿರುವಿದ, ತಿರುವಿದ. ಅಲ್ಲಿಯವರೆಗೂ ಏನೂ ಕೇಳಿಸದಿದ್ದ ಅವನಿಗೆ ಕಾರಿಡಾರಿನ ಕೊನೆಯ ಅಮೇರಿಕನ್ ಕಕ್ಕಸಿನಲ್ಲಿ ಯಾರೋ ಫ್ಲಷ್ ಮಾಡಿದ ನೀರಿನ ಜಲಪಾತದ ಸದ್ದು ಭೋರೆಂದು ಎದ್ದು ಅಡಗಿ ಇಂಗಿದ್ದು ಕೇಳಿಸಿತು.
ಪುಟ ತಿರುವಿದ. ಸೀಮಂತದ ಅಧ್ಯಾಯದಲ್ಲಿ ಸೀತೆಯ ಹಾಗೆ ವೇಷ ಹಾಕಿಸಿಕೊಂಡು, ತಲೆಗೆ ಕಿರೀಟ ಕಟ್ಟಿಸಿಕೊಂಡು ಅನೇಕ ಸುಮಂಗಲಿಯರ ನಡುವೆ ಸ್ವಲ್ಪ ಸೊಟ್ಟ ಮೂತಿ ಮಾಡಿಕೊಂಡು ಕೂತಿದ್ದಳು ಅವನ ದಾಯಾದಿಯ ಮಗಳು ದಮಯಂತಿ. ಅವಳ ನಡು ಏಳು ತಿಂಗಳ ಚೊಚ್ಚಲು ಬಸುರಿನಿಂದ ಬೆಳೆದಿತ್ತು. ಈ ಸುಂದರರಾಯ ಅಮೇರಿಕನ್ ಬಂದಿದ್ದಾನೆ, ಇದೇ ಸಮಯ ಫೋಟೋ ತೊಗೊಳ್ಳಲಿ ಎಂತ ಮಗಳ ಬಸರಿಗೆ ಕಾದು ಸೀಮಂತ ಮಾಡಿಸಿರಬೇಕು. ಉತ್ತರ ಕ್ರಿಯೆ ಎಲ್ಲ ತೋರಿಸೋಣ ಅಂತ ಕಾದಿರಬೇಕು. ದೊಡ್ಡಪ್ಪನ ಮನೆಯಲ್ಲಿ ಅನುಕೂಲವಾಗಿ ಸಿಕ್ಕಿತು. ದೊರಕಿಸಿದ. ಎಷ್ಟು ಹಣ ಕೊಟ್ಟನೋ ಆ ಫರ್‍ಗುಸನ್ ಮನುಷ್ಯ.
ಆ ಸುಮಂಗಲಿ ಹೆಂಗಸರ ನಡುವೆ ಅಮ್ಮನ ಮುಖ ಹುಡುಕಿದ. ಸಿಕ್ಕಲಿಲ್ಲ. ಸಂಪಿಗೆ ಮರದ ಗಂಗಮ್ಮ ಆಚೆಮನೆಯ ಎಂಬ್ರಾಯ್ಡರಿ ಲಚ್ಚಮ್ಮ ಇದ್ದರು.
ಅದೇ ಮುಖ, ಅದೇ ಬೊಜ್ಜು ಮೂಗುಗಳು, ವಾಲೆ, ಮೂಗುಬೊಟ್ಟು, ಕಾಸಗಲದ ಕುಂಕುಮಗಳು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಅವಸರವಸರವಾಗಿ ಅನುಕ್ರಮಣಿಕೆಯ ಪುಟ ತಿರುವಿದ. ವಕಾರ ವಿಕಾರ ವುಕಾರ ದಾಟಿ, ವೆಡ್ಡರು ವೇದಗಳು ವೇದಭೂಷಣ ದಾಟಿ ವೈಖಾನಸ ವೈದಿಕ ಅಕ್ಷರಾನುಕ್ರಮದಲ್ಲಿ ವೈಧವ್ಯ ಸಿಕ್ಕಿತು. ವೈಧವ್ಯದ ಮೇಲೆ ಇಡೀ ಅಧ್ಯಾಯ ಇತ್ತು. ಇರದೇ ಮತ್ತೆ? ಅದರಲ್ಲಿ 233ನೇ ಪುಟದ ಎದುರಿಗೆ ಒಂದು ಸೊಗಸಾದ ಫೋಟೋ.
ಹಿಂದೂ ವಿಧವೆ. ಕೆಲವು ಶೈವ ಸಂಪ್ರದಾಯಂತೆ ತಲೆಕೂದಲು ಬೋಳಿಸಿದೆ.
ಎಂದು ಇದ್ದದ್ದು ಇದ್ದ ಹಾಗೆ ಶೀರ್ಷಿಕೆ, ಕೃತಜ್ಞತೆ: ಸುಂದರ್‍ರಾಯರು ಸ್ಫೂಡಿಯೋ ಹುಣಸೂರು. ಅಮ್ಮನ ಚಿತ್ರ? ತಿಳಿದ ಮುಖವಾದರೂ ಅಪರಿಚಯ. ಬೋಳಿಸಿಕೊಂಡ ತಲೆ. ಮೇಲೆ ಎಳೆದ ಮುಸುಕು. ಅದು ಕಪ್ಪು ಬಿಳಿ ಚಿತ್ರವಾದರೂ ಇವನಿಗೆ ಗೊತ್ತು ಅದು ಕೆಂಪು ಸೀರೆ. ಮಾಸಿದ ಸೀರೆ. ಸುಂದರರಾಯರು ಫೆಸಿಫಿಕ್ ಸಾಗರದಾಚೆ 10,000 ಮೈಲಿ ದೂರದ ಹುಣಸೂರಿನ, ಚೆಲುವಾಂಬ ಅಗ್ರಹಾರದ ಹಿಂಭಾಗದ ಓಣಿಯಲ್ಲಿ ವಾಸವಾಗಿದ್ದರಿಂದ, ಆವತ್ತು ಬದುಕಿಕೊಂಡರು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಎ.ಕೆ. ರಾಮಾನುಜನ್ (1929-1993): ಮೈಸೂರಿನವರಾದ ರಾಮಾನುಜನ್ ಮೈಸೂರು, ಪೂನಾ, ಅಮೆರಿಕಾಗಳಲ್ಲಿ ವಿದ್ಯಾಭ್ಯಾಸ ನಡೆಸಿ ಎಂ.ಎ., ಪಿಎಚ್.ಡಿ ಪದವಿಗಳನ್ನು ಪಡೆದರು. ಮುವ್ವತ್ತು ವರ್ಷಗಳ ಕಾಲ ಅಮೆರಿಕಾದ ಷಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಭಾಷಾ ವಿಜ್ಞಾನ ಹಾಗೂ ದ್ರಾವಿಡ ಭಾಷಾ ಅಧ್ಯಯನದ ಪ್ರಾಧ್ಯಾಪಕರಾಗಿದ್ದರು. ಕನ್ನಡ ಜಾನಪದ ಕ್ಷೇತ್ರದಲ್ಲಿ ಅಪೂರ್ವ ಅಧ್ಯಯನ ಮಾಡಿದ್ದರು. ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕೆಲವು ಪ್ರಕಟಿತ ಕೃತಿಗಳು: ‘ಹೊಕ್ಕುಳಲ್ಲಿ ಹೂವಿಲ್ಲ’, ‘ಮತ್ತು ಇತರ ಪದ್ಯಗಳು’ (1969) ಹಾಗೂ ‘ಕುಂಟೋಬಿಲ್ಲೆ'(ಕವನ ಸಂಕಲನಗಳು); ‘ಮತ್ತೊಬ್ಬನ ಆತ್ಮಚರಿತ್ರೆ'(ಕಾದಂಬರಿ); ‘ಹಳದಿ ಮೀನು'(ಅನುವಾದಿತ ಕಾದಂಬರಿ); ‘Speaking of Shiva'(ವಚನಗಳ ಅನುವಾದ). ಭಾರತದ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ ಗಳಿಸಿದ್ದಾರೆ.