ಪ್ರಧಾನಿ ಮೋದಿ ಚೀನಾಗೆ ತೆರಳಿದ್ದಾರೆ. ತಮ್ಮ ಭೇಟಿಯು 'ಪರಸ್ಪರ ಗೌರವ, ಸಂವೇದನಾಶೀಲತೆ ಹಾಗೂ ಉಭಯ ರಾಷ್ಟ್ರಗಳ ಹಿತಾಸಕ್ತಿ'ಯ ಭಾಗವಾಗಿದೆ ಎಂದಿದ್ದಾರೆ. ಆದರೆ, ಭಾರತ-ಚೀನಾ ಗಡಿ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ.
ಉಕ್ರೇನ್ ಜೊತೆ ಸಂಘರ್ಷ ನಡೆಸುತ್ತಿರುವ ರಷ್ಯಾದೊಂದಿಗೆ ತೈಲ ಮತ್ತು ಶಸ್ತ್ರಾಸ್ತ್ರ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೋಬ್ಬರಿ 50% ತೆರಿಗೆ ವಿಧಿಸಿದ್ದಾರೆ. ಆಗಸ್ಟ್ 27ರಿಂದ ಭಾರೀ ಮೊತ್ತದ ತೆರಿಗೆ ಜಾರಿಗೆ ಬಂದಿದೆ. ಈ ಸುಂಕವು ಭಾರತದ ಜವಳಿ, ಕೃಷಿ ಉತ್ಪನ್ನ ಹಾಗೂ ವಜ್ರಾಭರಣ ಉದ್ಯಮಕ್ಕೆ ಭಾರೀ ಹೊಡೆತ ನೀಡಲಿದೆ ಎಂಬ ಆತಂಕ ಎದುರಾಗಿದೆ. ಆರ್ಥಿಕ ಮತ್ತು ಉದ್ಯೋಗ ನಷ್ಟದ ಭೀತಿ ಭಾರತೀಯರಲ್ಲಿದೆ.
ಟ್ರಂಪ್ ನೀತಿಯನ್ನು ಭಾರತವು ‘ಅನ್ಯಾಯ, ಅನಗತ್ಯ ಹಾಗೂ ಅಸಮಂಜಸ’ ಎಂದು ಟೀಕಿಸಿದ್ದರೂ, ಮೋದಿ ಅವರು ಟ್ರಂಪ್ ಧೋರಣೆಯನ್ನು ಖಂಡಿಸಿಲ್ಲ. ಬದಲಾಗಿ, ರೈತರ ಹಿತ ಕಾಯಲು ಸರ್ಕಾರ ದೃಢವಾಗಿದೆ ಎಂದಷ್ಟೇ ಹೇಳಿದ್ದಾರೆ. ಭಾರತ-ಅಮೆರಿಕ ಸುಂಕ ಸಂಘರ್ಷದಿಂದ ದೂರ ಉಳಿದಿದ್ದಾರೆ. ಇದೇ ಸಮಯದಲ್ಲಿ, ಭಾರತವು ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಡೆಗೆ ಗಮನ ಹರಿಸಿದೆ. ಮೋದಿ ಅವರು ಭಾರತ-ಚೀನಾ ಭಾಯಿ-ಭಾಯಿ ಎನ್ನುತ್ತಿದ್ದಾರೆ. ಮೋದಿ ಭಕ್ತರೂ ಚೀನಾ ಭಜನೆ ಮಾಡುತ್ತಿದ್ದಾರೆ.
ಅಂದಹಾಗೆ, ಸ್ವಾತಂತ್ರ್ಯಾ ನಂತರದಲ್ಲಿ ಭಾರತ-ಚೀನಾ ಭಾಯಿ-ಭಾಯಿ ಆಗಿಯೇ ಇದ್ದವು. ಆದರೆ, ಕಾಲಾನಂತರದಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಹದಗಟ್ಟಿತು. 1950ರ ದಶಕದಲ್ಲಿ ಭಾರತ ಮತ್ತು ಚೀನಾ ನಡುವಿನ ಸ್ನೇಹ ಉತ್ತಮವಾಗಿತ್ತು. ನೆಹರೂ ನಾಯಕತ್ವದ ಭಾರತ ಮತ್ತು ಮಾವೋತ್ಸೆ ತುಂಗ್ ನೇತೃತ್ವದ ಚೀನಾ– ಎರಡೂ ರಾಷ್ಟ್ರಗಳು ಒಗ್ಗಟ್ಟಿನೊಂದಿಗೆ ಏಷ್ಯಾದ ಶಕ್ತಿಯಾಗಿ ಬೆಳೆಯುವ ಕನಸು ಹೊತ್ತಿದ್ದವು. 1954ರಲ್ಲಿ ‘ಪಂಚಶೀಲ ಒಪ್ಪಂದ’ದ ಮೂಲಕ ಇದನ್ನು ದೃಢಪಡಿಸಿದ್ದವು.
ಆದರೆ, 1962ರಲ್ಲಿ ಹಿಮಾಲಯದ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ಆರಂಭವಾಯಿತು. ಭಾರತದ ಮೇಲೆ ಚೀನಾ ದಾಳಿ ಮಾಡಿತು. ಇದು ಯುದ್ಧಕ್ಕೆ ಕಾರಣವಾಯಿತು. ಭಾರತದ ಆಕ್ಸೈ ಚಿನ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿತು. ಪರಿಣಾಮ, ಉಭಯ ರಾಷ್ಟ್ರಗಳ ಸ್ನೇಹ ಹಳಸಿಕೊಂಡಿತು.
ಅಂದಿನಿಂದ ಇಂದಿನವರೆಗೂ ಭಾರತ-ಚೀನಾ ಸಂಬಂಧ ಆಗಾಗ ಗಟ್ಟಿಗೊಳ್ಳುವುದು, ಕಳಚಿಕೊಳ್ಳುವುದು ನಡೆಯುತ್ತಲೇ ಇದೆ. 2015ರಲ್ಲಿ ಚೀನಾಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಆಗಲೂ ‘ಇಂಡಿಯಾ-ಚೀನಾ ಭಾಯಿ-ಭಾಯಿ’ ಎಂದಿದ್ದರು. ಚೀನಾದೊಂದಿಗೆ ಭಾರತವು ದ್ವಿಪಕ್ಷೀಯ ಸಂಬಂಧವನ್ನು ಮುಂದುವರೆಸುತ್ತದೆ ಮತ್ತು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದರು.
ಅಂತೆಯೇ, 2019ರ ಅಕ್ಟೋಬರ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಭಾರತಕ್ಕೆ ಭೇಟಿ ನೀಡಿದ್ದರು. ‘ಉಭಯ ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡಿ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಒಗ್ಗಟ್ಟಿನಿಂದ ಶಾಂತಿಯುತವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು. ಭಾರತದಿಂದ ಚೀನಾಕ್ಕೆ ಹೆಚ್ಚಿನ ರಫ್ತುಗಳಿಗೆ ಅವಕಾಶ ಕಲ್ಪಿಸುತ್ತೇವೆ. ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆರ್ಥಿಕ ಸಹಕಾರ ದೊರೆಯಲಿದೆ’ ಎಂದು ಹೇಳಿದ್ದರು.
ಆದರೆ, ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ನಂತರದ ಎಂಟೇ ತಿಂಗಳಲ್ಲಿ, ಅಂದರೆ, 2020ರ ಜೂನ್ 15ರಂದು ಲಡಾಖ್‌ನ ಗಲ್ವಾನ್‌ನಲ್ಲಿ ಭಾರತೀಯ ಮತ್ತು ಚೀನೀ ಸೈನಿಕರ ನಡುವೆ ಭೀಕರ ಘರ್ಷಣೆ ನಡೆಯಿತು. ಆ ಸಮಯದಲ್ಲಿ ಭಾರತದ ನೆಲೆದಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಲು ಮುಂದಾಗಿತ್ತು. ಅದನ್ನು ಪಡೆಯುವ ಪ್ರಯತ್ನದಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಮತ್ತು 4 ಚೀನೀ ಸೈನಿಕರು ಮೃತಪಟ್ಟಿದ್ದರು. ಇದು, ಕಳೆದ 50 ವರ್ಷಗಳಲ್ಲಿ ನಡೆದ ದೊಡ್ಡ ಸಂಘರ್ಷವಾಗಿತ್ತು.
ಚೀನಾವು 2020ರಿಂದ ಈಚೆಗೆ ಸುಮಾರು 4,000 ಚ.ಕಿ.ಮೀ ಭಾರತೀಯ ಭೂಪ್ರದೇಶವನ್ನು ಅತಿಕ್ರಮಣ ಮಾಡಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಚೀನಾವು ಭಾರತದ ಭೂಮಿಯನ್ನು ಅತಿಕ್ರಮಿಸಿಕೊಂಡರೆ, ಭಾರತವು ಚೀನಾದ 50 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿ, ಅದನ್ನೇ ದೊಡ್ಡ ಸಾಧನೆಯೆಂದು ಹೇಳಿಕೊಂಡಿತು. ಭಾರತದ ಈ ಧೋರಣೆಯು ಭಾರತದ ಸಂಸತ್‌ನಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ, ಮೋದಿ ಸರ್ಕಾರ ಯಥಾಪ್ರಕಾರ, ಮೌನಕ್ಕೆ ಶರಣಾಯಿತು.
ಆದಾಗ್ಯೂ, ಭಾರತ-ಚೀನಾ ನಡುವೆ ಈಗಲೂ ವ್ಯಾಪಾರ ಸಂಬಂಧ ಮುಂದುವರೆದಿದೆ. 127 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿದೆ. ಚೀನಾ ದೇಶವು ಭಾರತದ 2ನೇ ಅತಿ ದೊಡ್ಡ ವ್ಯಾಪಾರ ರಾಷ್ಟ್ರವಾಗಿದೆ.
ಈ ನಡುವೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ರಾಷ್ಟ್ರಗಳ ಮೇಲೆ ಸುಂಕ ಸವಾರಿ ಮಾಡಲು ಯತ್ನಿಸಿದರು. ಇದೇ ವರ್ಷದ ಏಪ್ರಿಲ್‌ನಲ್ಲಿ ಭಾರತ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಗರಿಷ್ಠ ಮೊತ್ತದ ತೆರಿಗೆ ವಿಧಿಸಿದರು. ಟ್ರಂಪ್ ತೆರಿಗೆ ನೀತಿಯನ್ನು ಚೀನಾ ಟೀಕಿಸಿದರೆ, ಭಾರತ ಮತ್ತೆ ಮೌನಕ್ಕೆ ಜಾರಿತು. ಇದೇ ಸಮಯದಲ್ಲಿ, ಜುಲೈ ತಿಂಗಳಿನಲ್ಲಿ ಚೀನಾ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರು ದೆಹಲಿಯಲ್ಲಿ ಮೋದಿ, ಜೈಶಂಕರ್ ಮತ್ತು ಡೋವಲ್ ಅವರನ್ನು ಭೇಟಿಯಾದರು. ಉಭಯ ರಾಷ್ಟ್ರಗಳ ಸಹಕಾರ ಸಂಬಂಧದ ಬಗ್ಗೆ ಚರ್ಚಿಸಿದ್ದರು.
ಈ ಲೇಖನ ಓದಿದ್ಧೀರಾ?: ಮಾಲ್, ಸಿಂಗಲ್ ಸ್ಕ್ರೀನ್, ಮುಂಗಡ ಬುಕಿಂಗ್ ಆ್ಯಪ್ ಎಂಬ ಅಧಿಕೃತ ಕಳ್ಳರ ಕೂಟಗಳು
ಇದೀಗ, ಟ್ರಂಪ್ ಅವರು ಭಾರತದ ಮೇಲೆ 50% ಸುಂಕ (25% ತೆರಿಗೆ – 25% ದಂಡ) ವಿಧಿಸಿದ್ದಾರೆ. ಇದು ಭಾರತಕ್ಕೆ ಆರ್ಥಿಕ ಒತ್ತಡವನ್ನು ಹೇರಲಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸಲು ಭಾರತವು ಇತರ ಮಿತ್ರ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಅಂತೆಯೇ, ಚೀನಾದ ಸಖ್ಯವನ್ನೂ ಬಯಸುತ್ತಿದೆ.
ಪ್ರಧಾನಿ ಮೋದಿ ಅವರು ಆಗಸ್ಟ್ 31ರಂದು ಚೀನಾದಲ್ಲಿ ನಡೆಯುತ್ತಿರುವ ‘ಶಾಂಘೈ ಕೋ-ಆಪರೇಷನ್ ಆರ್ಗನೈಜೇಷನ್’ (SCO) ಸಮ್ಮೇಳನದಲ್ಲಿ ಭಾಗವಹಿಸಲು ಚೀನಾಗೆ ತೆರಳಿದ್ದಾರೆ. ತಮ್ಮ ಭೇಟಿಯು ‘ಪರಸ್ಪರ ಗೌರವ, ಸಂವೇದನಾಶೀಲತೆ ಹಾಗೂ ಉಭಯ ರಾಷ್ಟ್ರಗಳ ಹಿತಾಸಕ್ತಿ’ಯ ಭಾಗವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಆದರೆ, ಭಾರತ-ಚೀನಾ ಗಡಿ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ. ಯಾರ್ಲುಂಗ್ ತಸಂಗ್‌ಪೋ (ಬ್ರಹ್ಮಪುತ್ರ) ನದಿಯ ಮೇಲೆ ಚೀನಾ ವಿಶ್ವದ ಅತಿ ದೊಡ್ಡ ಜಲಾಶಯ ನಿರ್ಮಾಣ ಮಾಡುತ್ತಿದೆ. ಇದು, ಭಾರತದ ಈಶಾನ್ಯ ರಾಜ್ಯಗಳಿಗೆ ನೀರಿನ ಅಭಾವ ಸೃಷ್ಟಿಸುವ ಆತಂಕವಿದೆ. ಪಾಕಿಸ್ತಾನಕ್ಕೆ ಚೀನಾ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ. ಇತ್ತೀಚೆಗೆ ನಡೆದ ಭಾರತ-ಪಾಕ್ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡಿದೆ. ಇಂತಹ ಸನ್ನಿವೇಶದಲ್ಲಿಯೂ, ಭಾರತ-ಚೀನಾ ‘ಭಾಯಿ-ಭಾಯಿ’ ಆಗಲು ಸಾಧ್ಯವೇ? ಈ ಸಂಬಂಧವು ಕೇವಲ ಆರ್ಥಿಕ ಸಹಕಾರಕ್ಕೆ ಮಾತ್ರ ಸೀಮಿತವಾಗುತ್ತದೆಯೇ?