1991ರಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಮೋಟೊ ಪ್ರಕರಣ ದಾಖಲಿಸಿದ್ದಾರೆ.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಕಿ ಉಳಿದ ಪ್ರಕರಣಗಳ ವಿಲೇವಾರಿ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದ ಫಲಾನುಭವಿಗಳು ತಮ್ಮ ಅಹವಾಲುಗಳನ್ನು ನೇರವಾಗಿ ಉಪ ಲೋಕಾಯುಕ್ತರಿಗೆ ಸಲ್ಲಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಉಪ ಲೋಕಾಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವ ಮೂಲಕ ಸಮಸ್ಯೆಗಳ ತ್ವರಿತ ಬಗೆಹರಿವಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಸ್ಥಳವಾದ ಜಗಜ್ಯೋತಿ ಬಸವೇಶ್ವರ ಸಭಾಂಗಣ ಮುಖ್ಯ ದ್ವಾರದ ಮುಂದೆ ನಿವೇಶನ ಹಕ್ಕುಪತ್ರಗಳನ್ನು ಕೈಯಲ್ಲಿ ಹಿಡಿದು ಕಾಯುತ್ತಿದ್ದ 20ಕ್ಕೂ ಹೆಚ್ಚು ಮಹಿಳೆಯರನ್ನು ಗಮನಿಸಿದ ಉಪಲೋಕಾಯುಕ್ತರು ಸ್ಥಳಕ್ಕೆ ಬಂದು ಅಹವಾಲುಗಳನ್ನು ಆಲಿಸಿದರು.

ದೇವದುರ್ಗ ತಾಲ್ಲೂಕು ಗಬ್ಬೂರು ಗ್ರಾಮದ ಸರ್ವೆ ನಂ.1007ರಲ್ಲಿ 1991ರ ನವೆಂಬರ್‌ನಲ್ಲಿ 30×40 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಆ ಜಾಗವನ್ನು ಇಂದಿಗೂ ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆಂದು ವಾಸ್ತವದ ಅಳಲನ್ನು ಅವರು ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಹಣಿ ತಿದ್ದುಪಡಿ ವಿಳಂಬ : ರೈತರಿಂದ ಪ್ರತಿಭಟನೆ
ತಕ್ಷಣವೇ ಸ್ಥಳಕ್ಕೆ ತಹಸೀಲ್ದಾರ ಹಾಗೂ ಪಿಡಿಓ ಅವರನ್ನು ಕರೆಸಿ ವಿಚಾರಣೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿರುವುದರಿಂದ ಸ್ಥಳದಲ್ಲೇ ಸೂಮೋಟೊ ಪ್ರಕರಣ ದಾಖಲಿಸಿದ ಉಪ ಲೋಕಾಯುಕ್ತರು, ಸಮಸ್ಯೆ ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಒಟ್ಟು 66 ಫಲಾನುಭವಿಗಳ ಅಹವಾಲುಗಳನ್ನು ಸ್ವೀಕರಿಸಿದರು.
