ಬೀದರ್ ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆಯಾಗಿ ಬೆಳೆ, ಮನೆ, ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ₹100 ಕೋಟಿ ವಿಶೇಷ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಶನಿವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವರು, ʼಜಿಲ್ಲಾದ್ಯಂತ ಸಾವಿರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಹೆಸರು, ಉದ್ದು, ಸೋಯಾ, ತೊಗರಿ ಸೇರಿದಂತೆ ಹಲವು ಬೆಳೆ ನಾಶವಾಗಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯವೂ ನೀರು ಪಾಲಾಗಿದೆ, ಜೊತೆಗೆ ಕೆಲವು ಸಂಪರ್ಕ ಸೇತುವೆಗಳು ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತವಾಗಿದೆʼ ಎಂದು ತಿಳಿಸಿದರು.
‘ಜಿಲ್ಲಾಡಳಿತದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಸಮೀಕ್ಷೆ ನಡೆಸಿದ್ದು, ಪ್ರಾಥಮಿಕ ಅಂದಾಜಿನಂತೆ ಸುಮಾರು ₹500 ಕೋಟಿ ನಷ್ಟ ಸಂಭವಿಸಿದೆ. ಮೊದಲೇ ಹಿಂದುಳಿದಿರುವ ಬೀದರ್ ಜಿಲ್ಲೆ ಈ ಅನಾಹುತಕಾರಿ ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ರೈತರು, ಬಡಜನರು, ಕೂಲಿಕಾರ್ಮಿಕರು ಆಂತಕದಲ್ಲಿ ಕಾಲ ಕಳೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನೊಂದ ಜನರ ನೆರವಿಗೆ ಬರುವಂತೆʼ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಮರ್ಯಾದೆಗೇಡು ಹತ್ಯೆ | ಅನ್ಯಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ