ಆಪರೇಷನ್ ಸಿಂಧೂರ ದೇಶದ ಐತಿಹಾಸಿಕ ಯಶಸ್ಸು, ನಮ್ಮ ಮೇಲೆ ದಾಳಿ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂಬ ಸಂದೇಶ. ಆಪರೇಷನ್ ಸಿಂಧೂರ ವಿಜಯೋತ್ಸವ ದೇಶದ ಸೇನೆಯ ಪರಾಕ್ರಮಕ್ಕೆ ಸಲ್ಲಿಸುವ ಅಭಿನಂದನೆ ಎಂದು ಮೇಘಾಲಯ ರಾಜ್ಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಹೇಳಿದರು.
ತುಮಕೂರು ನಗರದ ಸರ್ಕಾರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಪ್ರಿಲ್ 22ರಂದು ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆ ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರ ವಿರುದ್ಧ ನಡೆದ ಯಶಸ್ವಿ ದಾಳಿ ಎಂದರು.
ಪೆಹಲ್ಗಾಮ್ ದಾಳಿ ನಡೆದ ನಂತರ ಪ್ರಧಾನಿಯವರು ಮೂರೂ ವಿಭಾಗದ ಸೇನಾ ಮುಖ್ಯಸ್ಥರನ್ನು ಕರೆಸಿ, ದಾಳಿಗೆ ಪ್ರತೀಕಾರದ ತಂತ್ರ ರೂಪಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ತಕ್ಕ ಉತ್ತರ ನೀಡುವ ಶಕ್ತಿ ತಮಗಿದೆ ಎಂಬ ಸಂದೇಶ ನೀಡಿದರು. ಈ ಕಾರ್ಯಾಚರಣೆಯಲ್ಲಿ ಸೇನೆಯ ಪರಾಕ್ರಮ, ಯಶಸ್ಸು ಅಭಿನಂದಿಸೋಣ, ಶೌರ್ಯ, ಏಕತೆ ದೇಶಭಕ್ತಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ನಡೆದಿದೆ ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಆಪರೇಷನ್ ಸಿಂಧೂರ ಭಯೋತ್ಪಾದನೆ ವಿರುದ್ಧ ಹೊಸ ಮಾನದಂಡ, ದೇಶದ ಮೇಲಿನ ದಾಳಿ, ಹಕ್ಕುಗಳ ರಕ್ಷಣೆಗೆ ಹಿಂಜರಿಯುವುದಿಲ್ಲ ಎಂಬುದು ಈ ಕಾರ್ಯಾಚರಣೆಯಲ್ಲಿ ಸಂದೇಶ ನೀಡಲಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾದಲ್ಲಿ ದೇಶ ಸುಭದ್ರವಾಗಿದೆ ಎಂದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.
ವಿಜಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಸೊಗಡು ಶಿವಣ್ಣ ಅಧ್ಯಕ್ಷತೆವಹಿಸಿದ್ದರು.
ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‍ಕುಮಾರ್, ಶಾಸಕ ಎಂ.ಟಿ.ಕೃಷ್ಣಪ್ಪ,ಶಾಸಕ ಬಿ.ಸುರೇಶ್‍ಗೌಡ, ಎಂ.ಪಿ.ನಾಡಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಸ್ಫೂರ್ತಿ ಚಿದಾನಂದ್, ಆರ್.ಸಿ.ಆಂಜನಪ್ಪ, ಆಚರಣಾ ಸಮಿತಿಯ ಆಶಾ ಪ್ರಸನ್ನಕುಮಾರ್, ಸಂಪಿಗೆ ಜಗದೀಶ್, ಪ್ರಭಾಕರ್, ಡಾ.ಎಸ್.ಪರಮೇಶ್, ಪ್ರದೀಪ್‍ಕುಮಾರ್, ಧನಿಯಾಕುಮಾರ್ ಮೊದಲಾದವರು ಭಾಗವಹಿಸಿದ್ದರು.