ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾಗೂ ನಾಗರಿಕರ ಆಸ್ತಿಪಾಸ್ತಿ ಹಾನಿಗೀಡಾಗಿದ್ದು, ಶೀಘ್ರ ಪರಿಹಾರ ನೀಡುವಂತೆ ಜೇವರ್ಗಿಯ ಟಿಪ್ಪು ಸುಲ್ತಾನ್ ಕಮಿಟಿಯಿಂದ ಪ್ರತಿಭಟನೆ ನಡೆಸಲಾಯಿತು.
ಜೇವರ್ಗಿ ಪಟ್ಟಣದಲ್ಲಿ ಶನಿವಾರ ತಹಶೀಲ್ದಾರ್ ಕಚೇರಿ ಎದುರುಗಡೆ ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಟಿಪ್ಪು ಸುಲ್ತಾನ್ ಕಮಿಟಿ ಜೇವರ್ಗಿ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕು ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿ ಮುಖಂಡರು ಮಾತನಾಡಿ, ʼಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ವಿಶೇಷವಾಗಿ ಜೇವರ್ಗಿ ಪಟ್ಟಣದಲ್ಲಿ ಕಳೆದ ಕೆಲ ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರೈತರ ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ತಿಳಿಸಿದರು.
‘ಭಾರಿ ಮಳೆಗೆ ಹಲವೆಡೆ ಮನೆ, ಅಂಗಡಿಗಳು ಸೇರಿದಂತೆ ವಿವಿಧ ಬಡಾವಣೆಯ ಸಣ್ಣಪುಟ್ಟ ವ್ಯಾಪಾರಸ್ಥರ ಆಸ್ತಿ-ಪಾಸ್ತಿಗಳು ನೀರಿನಲ್ಲಿ ಮುಳುಗಿದ್ದು, ಕೆಲ ಮನೆಗಳಲ್ಲಿ ನೀರು ನುಗ್ಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
ʼಕೆಕೆಆರ್‌ಡಿಬಿ ಯೋಜನೆಯಲ್ಲಿ ಮಳೆಯಿಂದ ಮುಳುಗಿದ ಮನೆಗಳಿಗೆ ವಿಶೇಷ ಪರಿಹಾರ ಬಿಡುಗಡೆ ಮಾಡಬೇಕು. ಸಾರ್ವಜನಿಕರಿಗೆ ತಾತ್ಕಾಲಿಕ ಆಶ್ರಯ, ಕುಡಿಯುವ ನೀರು, ಆರೋಗ್ಯ ಸೇವೆಗಳು ಹಾಗೂ ಆಹಾರ ವಿತರಣೆಯ ವ್ಯವಸ್ಥೆ ಮಾಡಬೇಕು. ಭವಿಷ್ಯದಲ್ಲಿ ಇಂತಹ ಪ್ರಕೃತಿ ವಿಕೋಪ ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆ ಕಳೆದುಕೊಂಡ ರೈತರು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಜನರ ಬದುಕನ್ನು ಸುಸ್ಥಿರಗೊಳಿಸಲು ಪರಿಹಾರ ನೀಡಬೇಕುʼ ಎಂದು ಒತ್ತಾಯಿಸಿದರು.
ಸಮಿತಿಯ ಮುಖ್ಯಸ್ಥರಾದ ಮೊಹಿಯುದ್ದೀನ ಇನಾಮದಾರ, ಇಬ್ರಾಹಿಂ ಪಟೇಲ್ ಸಾಬ್ ಸೇರಿದಂತೆ ಆದರ್ಶ ಗ್ರಾಮ ಸಮಿತಿ ಯಾಳವಾರ, ಟಿಪ್ಪು ಸುಲ್ತಾನ್ ಕಮಿಟಿಯ ಪದಾಧಿಕಾರಿಗಳು, ರೈತರು ಇದ್ದರು.