ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಮುಂಗಾರು ವಾಣಿಜ್ಯ ಬೆಳೆಯಾದ ಹೆಸರು ಕಾಳು ಬೆಳೆದ ರೈತರ ಪಾಡು ಹೇಳತೀರದಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೇ ಇಳುವರಿ ಕುಂಠಿತವಾಗಿರುವ ಹೆಸರು ಕಾಳು ಸದ್ಯ ಕಟಾವಿನ ಹಂತಕ್ಕೆ ಬಂದಿದೆ. ಆದರೆ, ಕಟಾವಿನ ವೇಳೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಹೆಸರು ಸಂಪೂರ್ಣ ನೀರು ಪಾಲಾಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ಶಿರಹಟ್ಟಿ, ಮುಂಡರಗಿ ನರಗುಂದ ಲಕ್ಷ್ಮೇಶ್ವರ ಗದಗ ತಾಲೂಕು ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶದ ಜಮೀನುಗಳಲ್ಲಿ ಅತಿ ಹೆಚ್ಚು ಹೆಸರು ಬೆಳೆಯನ್ನು ಬೆಳೆಯಲಾಗಿತ್ತು. ಆದರೆ ಅತಿಯಾದ ಮಳೆಯಿಂದ ಹೆಸರು ಬೆಳೆ ನೆಲ ಕಚ್ಚಿದೆ.
ಜಿಲ್ಲೆಯಲ್ಲಿ ವಾಡಿಕೆಯಾಗಿ 46.9 ಮಿಮೀ ಮಳೆ ಸುರಿಯುತ್ತಿತ್ತು ಇತ್ತು. ಅದು ಈ ಬಾರಿ 140.2 ಮಿಮೀ ಸುರಿದು ದಾಖಲೆ ಬರೆದಿದೆ. ಈ ಮೂಲಕ ಶೇ.198.9ರಷ್ಟು ಅಧಿಕ ಮಳೆ ಸುರಿದಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 292826 ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. 94884 ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ. ಇದರಲ್ಲಿ ಹೆಸರು ಬೆಳೆ 67533 ಹೆಕ್ಟೇರ್ ಹಾನಿಯಾಗಿದೆ ಎಂದು ಪ್ರಾಥಮಿಕ ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ. ಸಮೀಕ್ಷಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಸರು ಬೆಳೆ ಬೆಳೆಯಲು ಪ್ರತಿ ಎಕರೆಗೆ ಹೊಲ ಹದಗೊಳಿಸಲು, ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ಖರ್ಚು ಸೇರಿ 8 ರಿಂದ 10 ಸಾವಿರ ರೂ.ವರೆಗೆ, ಖರ್ಚು ತಗಲುತ್ತದೆ. 10-15 ಎಕರೆ ಹೊಲ ಇರುವ ಕೆಲವು ರೈತರು ಅಂದಾಜು 50 ರಿಂದ 60 ಸಾವಿರ ರೂ ರೂಪಾಯಿವರೆಗೂ ಖರ್ಚು ಮಾಡಿದ್ದಾರೆ. ಹೆಸರು ಬೆಳೆದ ರೈತರು ಅತಿಯಾದ ಮಳೆಯಿಂದ ಬೆಳೆ ಹಾನಿ ಅನುಭವಿಸಿದ್ದಾರೆ. ರೈತರ ಖರ್ಚಿಗೆ ತಕ್ಕ ಇಳುವರಿ ಬಾರದಿರಲು ಮಳೆ ಕಾರಣವಾಗಿದೆ ಎಂದು ಹೆಸರು ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ.
ಹೆಸರು ಕಟಾವು ಯಂತ್ರಗಳು ಪಟ್ಟಣ ಹಾಗೂ ಎಲ್ಲ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ. ಕೆಲವೆಡೆ ಹೆಸರು ಕಟಾವು ನಡೆಯುತ್ತಿದೆ. ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಎಕರೆಗೆ ಎರಡು ₹2200 ಇದ್ದು, ತಾಸಿಗೆ ₹1600 ಇದೆ. ಕೂಲಿಗೆ ದಿನಕ್ಕೆ ಒಬ್ಬರಿಗೆ ₹400. ಅಲ್ಪ ಸ್ವಲ್ಪ ಬಂದ ಹೆಸರು ಇದಕ್ಕೆಲ್ಲ ಖರ್ಚು ಆಗಿ, ಏನು ಉಳಿಯುತ್ತಿಲ್ಲ ಎಂದು ರೈತರು ಹೇಳುತ್ತಾರೆ. ಇನ್ನು ಬಹುತೇಕ ಭಾಗಗಳಲ್ಲಿ ಕಟಾವಿಗೆ ಬಂದ ಬೆಳೆ ನಾಶವಾಗಿ ಹಣವೂ ಇಲ್ಲ, ಬೆಳೆಯೂ ಇಲ್ಲ ಎನ್ನುವಂತಾಗಿದೆ.
ಸದ್ಯ ಆರಂಭದ ಮಾರುಕಟ್ಟೆಯಲ್ಲಿ ಹೆಸರು ಕಾಳು ಕ್ಲಿಂಟಲ್‌ಗೆ ₹10 ಸಾವಿರಕ್ಕೂ ಹೆಚ್ಚು ಬೆಲೆ ಇತ್ತು. ಅತಿಯಾದ ಮಳೆಯಿಂದ ಹೆಸರು ಕಾಳು ಹಾಳಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದೆ. 7 ರಿಂದ 8 ಸಾವಿರಕ್ಕೆ ಮಾರಾಟವಾದರೆ ಅದೇ ಹೆಚ್ಚು. ಹೆಸರು ಬೆಳೆಗೆ ಖರ್ಚು ಮಾಡಿದಷ್ಟು ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ ಎಂದು ರೈತರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿರಂತರ ಸುರಿದ ಮಳೆಗೆ ಕಟಾವು ಮಾಡಲು ಅವಕಾಶ ಸಿಗದಂತಾಗಿದೆ. ಕಟಾವು ಯಂತ್ರ ಹೊಲ ಪ್ರವೇಶಿಸಿದರೆ ಹೆಸರು ಕಾಳು ಸಿಡಿದು ಅರ್ಧ ನೆಲದ ಪಾಲು ಆಗುವ ಭೀತಿ ಹೆಚ್ಚಾಗಿದೆ. ಇನ್ನು ಕೂಲಿಕಾರರಿಂದ ಹೆಸರು ಬಿಡಿಸಬೇಕೆಂದರೆ ಸಾಧ್ಯವಾಗುತ್ತಿಲ್ಲ. ಹೆಸರು ಬೆಳೆ ಜಲಾವೃತಗೊಂಡು ಒಣಗಿದ ಹೆಸರು ಮಳೆಯ ಪರಿಣಾಮ ಮೊಳಕೆ ಒಡೆಯುವ ಹಂತಕ್ಕೆ ತಲುಪಿವೆ.

ಗದಗ ತಾಲೂಕಿನ ಬಿಂಕದಕಟ್ಟಿ ರೈತ ಶ್ರೀನಿವಾಸ್ ಇಟಗಿ ಅವರ 10 ಎಕರೆಯ ಹೊಲದಲ್ಲಿನ ಹೆಸರು ಬೆಳೆ ಸಂಪೂರ್ಣ ಹಾನಿಗೊಳಗಿದ್ದು, ಇತ್ತ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ ಎನ್ನುವಂತಾಗಿದೆ. ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿ ಬರೀಗೈಯಲ್ಲಿದ್ದೇವೆ ಎಂದು ಅಸಹಾಯಕತೆಯಿಂದ ಹೇಳುತ್ತಾರೆ ಶ್ರೀನಿವಾಸ್.
ಇದನ್ನೂ ಓದಿ: ಗದಗ | ಸಿಇಓ ಭರತ್ ಎಸ್ ವರ್ಗಾವಣೆ
ಈ ಕುರಿತು ಈದಿನ.ಕಾಮ್ ಜೊತೆಗೆ ರೈತ ಸಂಘದ ಮುಖಂಡ ಮೇಘರಾಜ ಬಾವಿ ಮಾತನಾಡಿ, “ಅತಿಯಾದ ಮಳೆ ಆಗಿದ್ದರಿಂದ ಜಿಲ್ಲೆಯಲ್ಲಿ ಹೆಸರು ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿಯೂ ಬೆಲೆ ಕುಸಿತಗೊಳ್ಳುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಪ್ರತಿ ಎಕರೆಗೆ 50 ಸಾವಿರ ಬೆಳೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ್ ಅವರು ಹಾನಿಗೋಳಗಾದ ಜಮೀನಿಗೆ ಭೇಟಿ ನೀಡಿ, “ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಅಧಿಕಾರಿಗಳಿಗೆ ನಿಖರ ಸಮೀಕ್ಷೆ ನಡೆಸಿ ಹಾನಿಗೊಳಗಾದ ಪ್ರತಿ ಎಕರೆಯ ಲೆಕ್ಕವನ್ನು ದಾಖಲಿಸುವಂತೆ ಸೂಚನೆ ನೀಡಿದರು. ರೈತರ ಕಷ್ಟವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಅವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ದೊರೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.