“ಸರ್ಕಾರ ಚುನಾಯಿತವಾಗುವುದು ಜನರಿಂದ. ಹಾಗಾಗಿ ಸರ್ಕಾರಗಳಲ್ಲಿ ಸಮಾಜದ ಎಲ್ಲಾ ಲಿಂಗ ವರ್ಗ ಜಾತಿಗಳ ಪ್ರಾತಿನಿಧ್ಯ ಇರಬೇಕು. ಅದರಂತೆ ಮಾಧ್ಯಮ ಸಂಸ್ಥೆಗಳು ಕೂಡ ಸಮಾಜದ ಎಲ್ಲ ವರ್ಗಗಳ ಪ್ರತಿರೂಪಗೊಳಿಸುತ್ತಿರಬೇಕು. ಅಲ್ಲಿ ಲಿಂಗ ಸಮಾನತೆ ಸಾಮಾಜಿಕ ಸಮಾನತೆಯನ್ನು ಕಾಯ್ದುಕೊಳ್ಳಬೇಕು. ಇದನ್ನು ಅಂಬೇಡ್ಕರ್ ಬಯಸಿದ್ದರು” ಎಂದು ಚಿತ್ರದುರ್ಗದಲ್ಲಿ “ದಿ ಹಿಂದೂ” ಪತ್ರಿಕೆಯ ಸಹಸಂಪಾದಕರಾದ ರಿಷಿಕೇಶ್ ಬಹದ್ದೂರ್ ದೇಸಾಯಿ ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ”ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ವಿಚಾರ ಸಂಕಿರಣದಲ್ಲಿ ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಕುರಿತು ಮಾತನಾಡಿ “ಪತ್ರಕರ್ತರು ಹೆಚ್ಚು ಹೊಗಳುವವರ ಬಗ್ಗೆ ಜಾಗೃತರಾಗಿರಬೇಕು. ಅಂಬೇಡ್ಕರ್ ವಿಚಾರಧಾರೆಗಳನ್ನು ‘ಸ್ಕೂಲ್ ಆಫ್ ಥಾಟ್ಸ್’ ಎಂದು ಕರೆಯುತ್ತೇವೆ. ಮೀಸಲಾತಿಯ ಬಗ್ಗೆ ಕುರುಡರು ಯಾವುದಾದರೂ ಒಂದು ವಸ್ತುವಿನ ಬಗ್ಗೆ ವಿವರಿಸಿದಂತೆ ನಾವು ಮಾತನಾಡುವುದನ್ನು ಕಾಣುತ್ತೇವೆ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಇದೆಯೋ ಅಲ್ಲೆಲ್ಲಾ ಮೀಸಲಾತಿ ಇದೆ. ಆದರೆ ಅದರ ಬಗ್ಗೆ ಭಾರತದಲ್ಲಿ ನಕಾರಾತ್ಮಕ ಭಾವನೆಯನ್ನು ರಾಜಕಾರಣಿಗಳು ಮತ್ತು ಕೆಲ ಮೇಲ್ವರ್ಗದವರು ಬೆಳೆಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಭಾರತಕ್ಕೆ ನೀಡಿದ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಈ ಮೂರು ಮುಖ್ಯ ಅಂಶಗಳು. ಅದರಲ್ಲಿ ಸಹೋದರತ್ವ ಇಲ್ಲದಿದ್ದರೆ ಇನ್ನೆರಡು ನಿಷ್ಪ್ರಯೋಜಕ ಎಂದು ಅಂಬೇಡ್ಕರ್ ತಿಳಿಸಿದ್ದರು. ಎಲ್ಲಾ ವರ್ಗದ ಜನರು ಸಹೋದರತ್ವ ಮತ್ತು ಸಮಾನತೆಯನ್ನು ಬೆಳೆಸಿಕೊಂಡರೆ ಸಾಮಾಜಿಕ ನ್ಯಾಯ ಮತ್ತು ಸಮಾಜದ ಸಮಾನತೆಯನ್ನು ಕಾಯ್ದುಕೊಳ್ಳುವ ಸಾಧ್ಯವಾಗುತ್ತದೆ. ಇದು ಮಾಧ್ಯಮ ಸಂಸ್ಥೆಯಲ್ಲಿ ಇರುವವರಿಗೆ ಅತಿ ಹೆಚ್ಚು ಅನ್ವಯಿಸುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾರತದ ಜಾತಿಗಳು ಹೋಮೋಜೀನಿಯಸ್ ಅಲ್ಲ, ರೆಟ್ರೋ ಜೀನಿಯಸ್; ಚಿಂತಕ ವಿ ಎಲ್ ನರಸಿಂಹಮೂರ್ತಿ
ವಿಚಾರ ಸಂಕಿರಣದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಸದಸ್ಯರಾದ ಅಹೋಬಲಪತಿ, ಮಂಜುನಾಥ್, ನಿಂಗಜ್ಜ, ಶಿವಕುಮಾರ್ ಕಣಸೋಗಿ, ಕಾರ್ಯದರ್ಶಿ ಸಹನಾ, ಟೆಲೆಕ್ಸ್ ಪತ್ರಿಕೆಯ ಸಂಪಾದಕ ರವಿಕುಮಾರ್, ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ, ಡಾ.ಭಾರತೀದೇವಿ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಮಂಜು ಜಡೇಕುಂಟೆ, ಷಣ್ಮುಖಪ್ಪ, ಗೌನಳ್ಳಿ ಗೋವಿಂದಪ್ಪ, ವೀರೇಶ್, ಶ್ರೀನಿವಾಸ್ ದೊಡ್ಡೇರಿ, ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.