ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಹಠಾತ್ ಪ್ರವಾಹ ಸಂಭವಿಸಿದೆ. ಇದರಿಂದಾಗಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 822 ರಸ್ತೆಗಳು ಮುಚ್ಚಲ್ಪಟ್ಟಿವೆ. ಈ ನಡುವೆ ಬಿಲಾಪ್ಸುರ್, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ರೆಡ್ ಅರ್ಲಟ್ ಘೋಷಿಸಿದೆ.
ಮಾನ್ಸೂನ್ ಆರಂಭವಾದಾಗಿನಿಂದ ಅಂದರೆ ಜೂನ್ 20ರಿಂದ ಆಗಸ್ಟ್ 30ರವರೆಗೆ ಹಿಮಾಚಲ ಪ್ರದೇಶದಲ್ಲಿ 91 ಹಠಾತ್ ಪ್ರವಾಹಗಳು, 45 ಮೇಘಸ್ಫೋಟಗಳು ಮತ್ತು 93 ಭೂಕುಸಿತಗಳು ಸಂಭವಿಸಿವೆ. ಸದ್ಯ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಾದ ಓಲ್ಡ್ ಹಿಂದೂಸ್ತಾನ್ ಟಿಬೆಟ್ ರಸ್ತೆ, ಮಂಡಿ-ಧರಂಪುರ ರಸ್ತೆ ಮತ್ತು ಔತ್-ಸೈಂಜ್ ರಸ್ತೆ ಸೇರಿದಂತೆ ಒಟ್ಟು 822 ರಸ್ತೆಗಳು ಮುಚ್ಚಲ್ಪಟ್ಟಿವೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ, ಹಿಮಾಚಲದಲ್ಲಿ ಭಾರೀ ಮಳೆ; ಪ್ರವಾಹಕ್ಕೆ 55 ಮಂದಿ ಬಲಿ
ನೈತಾರ್ ಮತ್ತು ಭಾಗ್ ಹೊಳೆಗಳಲ್ಲಿ ಹಠಾತ್ ಪ್ರವಾಹದ ನಂತರ ಮನಾಲಿ-ನಗ್ಗರ್-ಕುಲ್ಲು ರಸ್ತೆಯಲ್ಲಿ ಸಂಚಾರ ಅಡಚಣೆಯಾಗಿದೆ. ಶಿಮ್ಲಾ ನಗರದ ಹೊರವಲಯದಲ್ಲಿ ಎರಡು ವಾಹನಗಳು ಹೂತುಹೋಗಿವೆ. ಸುಮಾರು 1,236 ವಿದ್ಯುತ್ ಪರಿವರ್ತಕಗಳು ಮತ್ತು 424 ನೀರು ಸರಬರಾಜು ಯೋಜನೆಗಳು ಸಹ ಸ್ಥಗಿತಗೊಂಡಿವೆ. ಭರ್ಮೌರ್ ಮತ್ತು ಚಂಬಾದಲ್ಲಿ ಸಿಲುಕಿರುವ ಮಣಿನಹೇಶ್ ಯಾತ್ರಿಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಳೆಗಾಲದಲ್ಲಿ ಹಿಮಾಚಲ ಪ್ರದೇಶದಲ್ಲಿ 3,042 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 320 ಜನರು ಸಾವನ್ನಪ್ಪಿದ್ದಾರೆ. ಸುಮಾರು 4,041 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ.
