ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅವಶ್ಯಕತೆ ತುಂಬಾ ಇದೆ. ಆದರೆ, ಸರ್ಕಾರ ಜಿಲ್ಲೆಯಲ್ಲಿ ಪಿಪಿಪಿ (ಪಬ್ಲಿಕ್, ಪ್ರೈವೇಟ್, ಪಾರ್ಟ್‌ನರ್‌ಶಿಪ್) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರದಲ್ಲಿದೆ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಳಿಕೋಟಿ ಅಧ್ಯಕ್ಷ ಗುರುಪ್ರಸಾದ್ ಬಿಜಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಆಗಬೇಕೆಂದು ಹಲವಾರು ವಿದ್ಯಾರ್ಥಿ ಸಂಘಟನೆಗಳು ಕಳೆದ 15 ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿವೆ. ಇದರ ಫಲವಾಗಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು ಸ್ವಾಗತಾರ್ಹ. ಆದರೆ, ಪಿಪಿಪಿ ಮಾದರಿಯನ್ನು ಕೈಬಿಟ್ಟು ಸಂಪೂರ್ಣ ಸರ್ಕಾರಿ ಮಾದರಿಯ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಹಾಗೂ ಆರೋಗ್ಯ ಸೇವಾ ವಲಯದಲ್ಲಿ ಇರಬೇಕಾಗಿತ್ತು. ಆದರೆ ಖಾಸಗೀಕರಣದ ಮೂಲಕ ಎರಡು ಕ್ಷೇತ್ರಗಳನ್ನು ಮಾರಾಟಮಾಡುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು, ಇದಕ್ಕೆ ಲಕ್ಷಾಂತರ ಶುಲ್ಕ ಕಟ್ಟಲು ಸಾಧ್ಯವಾಗದೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ತೊರೆದಿದ್ದಾರೆ. ಶಿಕ್ಷಣ ಎಂಬುದು ಕೆಲವೇ ಜನರ ಸ್ವತ್ತಾಗದೆ ಎಲ್ಲರ ಸ್ವತ್ತಾಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಿಗಬೇಕಾದರೆ ಸರ್ಕಾರವೇ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಬಡವರ, ಕಾರ್ಮಿಕರ, ರೈತರ ಮಕ್ಕಳಿಗೆ ಶಿಕ್ಷಣ ಸಿಗುತ್ತದೆ. ಆದ್ದರಿಂದ ಸರ್ಕಾರ ಪಿಪಿಪಿ ಹೆಸರಿನಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸದೇ ಸರ್ಕಾರಿ ಕಾಲೇಜು ಸ್ಥಾಪಿಸಬೇಕು. ಶಿಕ್ಷಣವನ್ನು ರಾಜಕಾರಣಿಗಳು, ಉದ್ಯಮಿಗಳು ಅಪಹರಿಸುವುದನ್ನು ದಲಿತ ವಿದ್ಯಾರ್ಥಿ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹ