ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆ (ಎಸ್‌ಎಸ್‌ಎ) ನಿಧಿಯಲ್ಲಿ ತಮಿಳುನಾಡಿಗೆ ಸಿಗಬೇಕಾದ ನ್ಯಾಯಯುತ ಪಾಲನ್ನು ನೀಡುವಂತೆ ಒತ್ತಾಯಿಸಿ ಸಂಸದ ಸಸಿಕಾಂತ್ ಸೆಂಥಿಲ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಮ್ಮ ಸತ್ಯಾಗ್ರಹವು ಅನಿರ್ಧಿಷ್ಟಾವಧಿಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ತಮಿಳುನಾಡಿ ತಿರುವಳ್ಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್, ಎಸ್‌ಎಸ್‌ಎ ಯೋಜನೆಯಡಿ ತಮಿಳುನಾಡಿಗೆ ದೊರೆಯಬೇಕಿದ್ದ 2,152 ಕೋಟಿ ರೂ. ನಿಧಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವುದನ್ನು ಖಂಡಿಸಿದ್ದಾರೆ. ಶುಕ್ರವಾರದಿಂದ ತಿರುವಳ್ಳೂರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹದ 2ನೇ ದಿನವಾದ ಶನಿವಾರ ರಾತ್ರಿ ಅವರು ಅಧಿಕ ರಕ್ತದೊತ್ತಡದಿಂದ ತೊಂದರೆ ಅನುಭವಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಆಸ್ಪತ್ರೆಯಿಂದ ‘ಡಿಸ್ಚಾರ್ಜ್’ ಆಗಿರುವ ಸೆಂಥಿಲ್, ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವು ತಮಿಳುನಾಡಿನ 43 ಲಕ್ಷ ವಿದ್ಯಾರ್ಥಿಗಳು ಮತ್ತು 2.2 ಲಕ್ಷ ಶಿಕ್ಷಕರ ಭವಿಷ್ಯವನ್ನು ಅಭದ್ರಗೊಳಿಸಿದೆ ಎಂದು ಸೆಂಥಿಲ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಕೈಬಿಡುವಂತೆ ಸೆಂಥಿಲ್ ಅವರಿಗೆ ತಮಿಳುನಾಡು ಕಾಂಗ್ಎರಸ್ ಅಧ್ಯಕ್ಷ ಕೆ ಸೆಲ್ವಪೆರುಂಥಗೈ ಮನವಿ ಮಾಡಿದ್ದಾರೆ. ಆದರೆ, ಸತ್ಯಾಗ್ರಹವನ್ನು ಕೈಬಿಡಲು ಸೆಂಧಿಲ್ ನಿರಾಕರಿಸಿದ್ದಾರೆ.
“ಶನಿವಾರ ನನಗೆ ಸ್ವಲ್ಪ ರಕ್ತದೊತ್ತಡ ಹೆಚ್ಚಾಗಿತ್ತು. ಅದನ್ನು ನಿಯಂತ್ರಣಕ್ಕೆ ತರಲು ಆಸ್ಪತ್ರೆಗೆ ದಾಖಲಾಗಿದ್ದೆ. ರಕ್ತದೊತ್ತಡದ ಹೊರತಾಗಿಯೂ ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಚೆನ್ನಾಗಿದ್ದೇನೆ. ತಮಿಳುನಾಡು ಮತ್ತು ದೇಶದ ಇತರ ಭಾಗಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ದುಃಸ್ಥಿತಿಯನ್ನು ಬೆಳಕಿಗೆ ತರಲು ನಾನು ದೃಢನಿಶ್ಚಯದಿಂದ ಇದ್ದೇನೆ. ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ” ಎಂದು ಹೇಳಿದ್ದಾರೆ.