ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ಜಿಲ್ಲೆಗಳಿಂದ ಹಿಡಿದು ಒಳನಾಡಿನ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಇರುವಂತೆ ಇಲಾಖೆ ತಿಳಿಸಿದೆ. ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಮೋಡಕವಿದ ವಾತಾವರಣ ಮುಂದುವರೆಯಲಿದೆ.
ಬಂಗಾಳ ಉಪಸಾಗರದ ಒಡಿಶಾ ಕರಾವಳಿಯಲ್ಲಿ ರೂಪುಗೊಂಡಿರುವ ಚಂಡಮಾರುತದ ಪರಿಣಾಮವಾಗಿ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6 ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
ವಿಶೇಷವಾಗಿ ಉತ್ತರ ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಬೇಕೆಂದು ಇಲಾಖೆ ಎಚ್ಚರಿಸಿದೆ. ಚೆನ್ನೈ ಮೇಘಸ್ಪೋಟದ ಕಾರಣ ಬೆಂಗಳೂರಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಈ ವಾರ ಪೂರ್ತಿ ಯೆಲ್ಲೋ ಅಲರ್ಟ್ ಇದ್ದು, ಸೆ,3 ಹಾಗೂ 4 ಮಳೆ ಆರ್ಭಟ ಹೆಚ್ಚು ಇರುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಸೆಪ್ಟೆಂಬರ್ 4 ರವರೆಗೆ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸಂಚಾರ ದಟ್ಟಣೆ ಮತ್ತು ನೀರಿನ ತೊರೆವು ಉಂಟಾಗುವ ಸಾಧ್ಯತೆ ಇರುವುದರಿಂದ ನಗರ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.