ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯಗಳನ್ನು ದಲಿತರು ಎಂದು ಕರೆಯುತ್ತಾರೆ. ದಲಿತ ಪ್ರಜ್ಞೆ ಎಲ್ಲ ಸಮುದಾಯಗಳ ಅನುಭವಗಳ ಜೀವ ಪ್ರಜ್ಞೆಯಾಗಿದೆ ಎಂದು ಮಂಡ್ಯ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹುರಗಲವಾಡಿ ರಾಮಯ್ಯ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನೆ, ಸಾಮಾಜಿಕ ಕ್ರಾಂತಿ ಹರಿಕಾರ ನಾರಾಯಣ ಗೌಡ ಜನ್ಮದಿನಾಚರಣೆ ಮತ್ತು ದಲಿತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಮ ಫಲಕ ಅನಾವರಣ ಮಾಡಿ ಅವರು ಮಾತನಾಡಿದರು.
“ಶೋಷಿತ ಸಮುದಾಯಗಳ ಅನುಭವ ಕಥನಗಳನ್ನು ಹಾಗೂ ಸಂವೇದನೆಗಳನ್ನು ರಚನೆ ಮಾಡುವುದರ ದಲಿತ ಸಾಹಿತ್ಯ. ಜೊತೆಗೆ ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ. ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ. ದಲಿತ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ಯಾವುದೇ ಸಂಘಟನೆಗೆ ಪರ್ಯಾಯ ಸಂಘಟನೆ ಅಲ್ಲ. ದಲಿತರ ಪರವಾಗಿ ಯಾರು ಚಿಂತನೆವುಳ್ಳವರು ಈ ಪರಿಷತ್ತಿನ ಒಡನಾಡಿಗಳು, ಬಂಧುಗಳಾಗಿದ್ದಾರೆ ಎಂದು ಹೇಳಿದರು. ದಲಿತ ಕೇವಲ ಜಾತಿ ಸೂಚಕ ಪದವಲ್ಲ. ತುಳಿತಕ್ಕೊಳ್ಳಗಾದ, ದೌರ್ಜನ್ಯಕ್ಕೊಳಗಾದ, ನೊಂದವರೆಲ್ಲರೂ ದಲಿತರಾಗಿದ್ದಾರೆ. ತಮಗಾಗುತ್ತಿರುವ ದೌರ್ಜನ್ಯದ ವಿರುದ್ದ ದನಿ ಎತ್ತುವುದೇ ದಲಿತ ಸಾಹಿತ್ಯದ ತಿರುಳಾಗಿದೆ” ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಸಾಹಿತಿ ಬಿ.ವಿ. ಹಳ್ಳಿ ನಾರಾಯಣ ಮಾತನಾಡಿ, “ನಾರಾಯಣ ಗುರು ಅವರು ಅಸ್ಪೃಶ್ಯತೆಗೆ ಒಳಗಾಗಿದ್ದ ಈಳವ ಸಮುದಾಯದ ವಿಮೋಚನೆಗಾಗಿ ದುಡಿದ ಮಹನೀಯ. ಜಾತಿ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ದೇಶಕ್ಕಂಚಿದ ದಾರ್ಶನಿಕ” ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಡಯಟ್ ನ ನಿವೃತ್ತ ಶಿಕ್ಷಕ ಗುರುಮೂರ್ತಿ ಅವರು, “ದಲಿತ ಸಾಹಿತ್ಯ ಹೋರಾಟದ ಹಾಡುಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯವಾಗಿದೆ. ವ್ಯವಸ್ಥೆಯ ವಿರುದ್ದ ಪ್ರಶ್ನೆ ಮಾಡುವುದೆ ಮೂಲಕ ದಲಿತ ಪ್ರಜ್ಞೆ ಹುಟ್ಟಿಕೊಂಡಿತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್. ಸತೀಶ್, ದಲಿತ ಸಾಹಿತ್ಯ ಸಂವೇದನೆಯ ಲೇಖಕರಾದ ಡಾ.ಹೊಂಬಯ್ಯ ಹೊನ್ನಲಗೆರೆ, ಬಿ.ಎಲ್.ಮಧುಸೂದನ್ ಮತ್ತು ಸರೋಜಮ್ಮ ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಇದನ್ನೂ ಓದಿ: ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ
ಸಮಾರಂಭದಲ್ಲಿ ದಸಾಪ ತಾಲ್ಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಗೌರವ ಅಧ್ಯಕ್ಷೆ ಸುಶೀಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ದಸಾಪ ತಾಲ್ಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಬಿಇಒ ಧನಂಜಯ, ಡಿ.ಸಿ. ಮಹೇಂದ್ರ, ಬಿ ಎಂ, ಸತ್ಯ, ಶಶಿ ಕುಮಾರ್ ಪಿ. ಕೆ,ಜೆ,ಗೋವಿಂದ ರಾಜ್ ,ರಾಚಯ್ಯ, ಶ್ರೀನಿವಾಸ, ಚಂದ್ರಶೇಖರ್ ಮದ್ದೂರು ಉಪಸ್ಥಿತರಿದ್ದರು. ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಕೆಟಿ ಶಿವಕುಮಾರ್, ಡಾ. ಹೆಚ್ ಹೆಚ್ ಮಲ್ಲೀಕೇಶ್, ಉಪಾಧ್ಯಕ್ಷ ಕಾರ್ಕಳ್ಳಿ ಬಸವರಾಜು, ಕಸಬಾ ಹೋಬಳಿ ಅಧ್ಯಕ್ಷ ಡಾ.ಬಿ.ಕೆ.ಪ್ರಕಾಶ್ ಹಾಗೂ ಮತ್ತಿತರರು ಇದ್ದರು.