ಉತ್ತರ ಪ್ರದೇಶದ ಬುಲಂದ್ಶಹರ್ನ ಸಣ್ಣ ದಿನಸಿ ಅಂಗಡಿಯ ಮಾಲೀಕರೊಬ್ಬರಿಗೆ ಬರೋಬ್ಬರಿ 141 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ತೆರಿಗೆ ನೋಟಿಸ್ ಬಂದಿದೆ. ಖುರ್ಜಾದ ನಯಗಂಜ್ ಪ್ರದೇಶದ ನಿವಾಸಿ ಸುಧೀರ್ ತಮ್ಮ ಮನೆಯ ಒಂದು ಭಾಗದಲ್ಲಿ ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದು, ಕೋಟ್ಯಾಂತರ ರೂಪಾಯಿ ತೆರಿಗೆ ನೋಟಿಸ್ ನೋಡಿ ದಂಗಾಗಿದ್ದಾರೆ.
ದೆಹಲಿಯಲ್ಲಿ ಆರು ಕಂಪನಿಗಳನ್ನು ಸ್ಥಾಪಿಸಲು ತಮ್ಮ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು ಇದರಿಂದಾಗಿ ನೋಟಿಸ್ ಬಂದಿದೆ ಎಂದು ಸುಧೀರ್ ಆರೋಪಿಸಿದ್ದಾರೆ. ಹಾಗೆಯೇ 2022ರಲ್ಲಿ ತಮಗೆ ಮೊದಲು ನೋಟಿಸ್ ನೀಡಲಾಗಿತ್ತು. ಈ ವೇಳೆ ತನಗೂ ಕಂಪನಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ತೆರಿಗೆ ಅಧಿಕಾರಿಗಳಿಗೆ ವಿವರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾರ್ಮಿಕನಿಗೆ 232 ಕೋಟಿ ರೂ. ತೆರಿಗೆ ನೋಟಿಸ್!
“ಈ ವರ್ಷದ ಜುಲೈ 10ರಂದು ನಾನು 1,41,38,47,126 ರೂ.ಗಳ ಮಾರಾಟವನ್ನು ಮಾಡಿದ್ದೇನೆ ಎಂದು ಹೇಳುವ ಮತ್ತೊಂದು ನೋಟಿಸ್ ಬಂದಿದ್ದು ಅದನ್ನು ನೋಡಿ ನನಗೆ ಆಘಾತವಾಯಿತು. ದೆಹಲಿಯಲ್ಲಿ ಬಹು ಸಂಸ್ಥೆಗಳಿಗೆ ನನ್ನ ಪ್ಯಾನ್ ಅನ್ನು ವಂಚನೆಯಿಂದ ಬಳಸಿರುವುದೇ ಇದಕ್ಕೆ ಕಾರಣ” ಎಂದು ಸುಧೀರ್ ಹೇಳಿದ್ದಾರೆ.
ಸದ್ಯ ಖುರ್ಜಾ ಪೊಲೀಸ್ ಠಾಣೆಯ ಉಸ್ತುವಾರಿ ಪಂಕಜ್ ರೈ ಅವರು ಪ್ರಕರಣ ದಾಖಲಿಸಿ, ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಬ್ಯಾಂಕ್ ಖಾತೆಗಳನ್ನು ತೆರೆಯಲು, ನಕಲಿ ಕಂಪನಿಗಳನ್ನು ರಚಿಸಲು, ಸಾಲಗಳನ್ನು ಪಡೆಯಲು ಅಥವಾ ತೆರಿಗೆಗಳನ್ನು ತಪ್ಪಿಸಲು ಈ ವ್ಯಕ್ತಿಯ ಪ್ಯಾನ್ ವಿವರಗಳನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಸುಧೀರ್ಗೆ ಅನಿರೀಕ್ಷಿತವಾಗಿ ತೆರಿಗೆ ನೋಟಿಸ್ ಬಂದಾಗಲೇ ಈ ವಂಚನೆಗಳ ಬಗ್ಗೆ ತಿಳಿದುಬಂದಿದೆ ಎನ್ನಲಾಗಿದೆ.
