ಚಿತ್ರದುರ್ಗದ ವಿವೇಕಾನಂದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ.ಬಿ.ದೇವರಾಜ ಕ್ರೀಡಾ ಸಾಂಸ್ಕೃತಿಕ ಟ್ರಸ್ಟ್, ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪಠ್ಯಾಧಾರಿತ ಸಾಂಸ್ಕೃತಿಕ ಓದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಆರ್ಥಿಕ ಯುವಚಿಂತಕ ಡಿ.ಬಸವರಾಜ್ ಮಾತನಾಡಿ “ಹಿರಿಯರ ಮಾರ್ಗದರ್ಶನಗಳು ಮನುಕುಲದ ಭವಿಷ್ಯಕ್ಕೆ ಉತ್ತಮ ಅಡಿಪಾಯವಾಗಿದೆ. ಅವರು ನೆರವೇರಿಸಿಕೊಂಡು ಬಂದ ಆಚಾರ ವಿಚಾರಗಳನ್ನು ನಾವೆಂದಿಗೂ ಮರೆಯಬಾರದು. ಪ್ರಬುದ್ಧಮಾನಕ್ಕೆ ಬಂದ ಇಂದಿನ ಯುವಪೀಳಿಗೆ ಬಹುತೇಕ ಸರ್ಕಾರಿ ಶಾಲೆಗಳಿಂದ ಬಂದವರೇ ಆಗಿದ್ದಾರೆ. ಅಂಥವರು ಸಮಾಜದ ಯಾವುದೇ ಸ್ಥಾನದಲ್ಲಿದ್ದರೂ ಸರ್ಕಾರಿ ಶಾಲಾ ಮಕ್ಕಳ ಮೂಲಸೌಕರ್ಯಗಳತ್ತ ಗಮನಹರಿಸಬೇಕು. ಸರ್ಕಾರಿ ಶಾಲಾಮಕ್ಕಳ ಪೋಷಕರು ಕೂಲಿನಾಲಿ ಮಾಡಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಶ್ರಮಿಸುತ್ತಾರೆ. ಆ ಪೋಷಕರ ಶ್ರಮಕ್ಕೆ ಮಕ್ಕಳೂ ಸಹ ತಕ್ಕ ಪ್ರತಿಫಲವನ್ನು ನೀಡಬೇಕು” ಎಂದು ಕರೆ ನೀಡಿದರು.

“ಇಂದಿಗೂ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಕಾಂಪೌಂಡು, ಪಾಠೋಪಕರಣಗಳು ಮತ್ತು ಪೀಠೋಪಕರಣಗಳ ಅವಶ್ಯಕತೆಯಿದೆ. ಮುಗ್ಧ ಮಕ್ಕಳ ಅವಶ್ಯಕತೆಗಳನ್ನು ಪೂರೈಸಬೇಕು. ದೊಡ್ಡಪೇಟೆಯ ಗಲ್ಲಿಯೊಂದಕ್ಕೆ ನಮ್ಮ ತಂದೆಯವರ ಬಿ.ದೇವರಾಜ ರಸ್ತೆ ಎಂದು ಹೆಸರಿಟ್ಟಿದ್ದಾರೆ. ಅವರ ಹೆಸರಲ್ಲಿ ನಗರದಲ್ಲಿ ನಿರಂತರವಾಗಿ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಉತ್ಸುಕರಾಗಿದ್ದೇವೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ “ಅವರು ಕನ್ನಡನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಮಕ್ಕಳಿಗೆ ತಿಳಿಸಬೇಕು. ಶಾಲಾ ಮಕ್ಕಳ ಪಠ್ಯಗಳನ್ನು ಆಧರಿಸಿ ಗದ್ಯ ಮತ್ತು ಪದ್ಯಗಳನ್ನು ಸಾಂಸ್ಕೃತಿಕವಾಗಿ ಪರಿಚಯಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಈ ಕಾರ್ಯಕ್ರಮದ ರೂಪುರೇಷೆಗಳು ಪ್ರತಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯಗತವಾಗಬೇಕು” ಎಂದರು.

ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿ “ನಗರದ ಬಹುತೇಕ ರಸ್ತೆಗಳಿಗೆ ಗಣ್ಯವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಅವರ ಆದರ್ಶ ಮತ್ತು ಆಶೋತ್ತರಗಳನ್ನು ದೇಶ ಕಟ್ಟುವ ಭವಿಷ್ಯದ ಪೀಳಿಗೆಗೆ ಪಠ್ಯದ ಜೊತೆಗೆ ಪರಿಚಯಿಸಿದರೆ ಬೋಧನೆ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಂಬೇಡ್ಕರರ ದಲಿತರ ಮಹಾಡ್ ಹೋರಾಟವನ್ನು ಪತ್ರಿಕೆಗಳು ದ್ರೋಹ ಎಂದಿದ್ಧವು; ಡಿ ಉಮಾಪತಿ
ಮುಖ್ಯ ಅತಿಥಿಗಳಾಗಿ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಟಿ.ಷಣ್ಮುಖಪ್ಪ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಬಿ.ವಿಮಲಾಕ್ಷಿ, ಯೋಗ ಚಿಕಿತ್ಸಕ ಎಂ.ಬಿ.ಮುರುಳಿ, ಆಯುರ್ವೇದ ತಜ್ಞವೈದ್ಯ ಡಾ.ಲಿಂಗದೊರೆ, ಜಿ.ಎಂ.ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವರುಣ್, ಉದ್ಯಮಿ ಜಿ.ಎಂ.ಮಂಜುನಾಥ್, ಸಹಶಿಕ್ಷಕರಾದ ಪಿ.ಬಿ.ಅನುಸೂಯ, ಟಿ.ಎನ್.ಶೋಭ ಸೇರಿದಂತೆ ಶಾಲಾ ಮಕ್ಕಳು ಸಮಾಜದಲ್ಲಿ ಉಪಸ್ಥಿತರಿದ್ದರು.