ಪೈಗಂಬರ್ ಮುಹಮ್ಮದ್ ಅವರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಸೆಪ್ಟೆಂಬರ್ 3ರಿಂದ 14ರವರೆಗೆ ರಾಜ್ಯಾದ್ಯಂತ ಪ್ರವಾದಿಯವರ ಜೀವನ ಸಂದೇಶ(ಸೀರತ್) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ತಿಳಿಸಿದರು.
ಬೆಂಗಳೂರು ನಗರದ ಕ್ವೀನ್ಸ್ ರಸ್ತೆಯ ಬಿಫ್ಟ್ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ರಾಜ್ಯಾದ್ಯಂತ ಸೀರತ್ (ಪ್ರವಾದಿ ಜೀವನ ಸಂದೇಶ) ಅಭಿಯಾನದ ಭಾಗವಾಗಿ ನಡೆಯಲಿರುವ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಸೆಪ್ಟೆಂಬರ್ 3 ರಿಂದ 14ರವರೆಗೆ ರಾಜ್ಯಾದ್ಯಂತ ಪ್ರವಾದಿಯವರ ಜೀವನ ಸಂದೇಶ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಸಂದರ್ಭದಲ್ಲಿ ವಿವಿಧ ಧರ್ಮೀಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದಲೂ ನಾನಾ ಕಾರ್ಯಕ್ರಮಗಳನ್ನು ರಾಜ್ಯದ ಹಲವೆಡೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದವರು. ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ಶೀರ್ಷಿಕೆಯಡಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸಬೇಕಿದೆ. ಸಮಾಜದಲ್ಲಿ ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಕೂಡ ಈ ಅಭಿಯಾನದ ಉದ್ದೇಶವಾಗಿದೆ ಎಂದು ಮುಹಮ್ಮದ್ ಕುಂಞಿ ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಸಿಟಿ ಬಸ್ ಚಾಲಕನ ಸಮಯಪ್ರಜ್ಞೆ; ಉಳಿಯಿತು ಬೈಕ್ ಸವಾರನ ಜೀವ!
ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಈ ಅಭಿಯಾನದ ಭಾಗವಾಗಿ ಸೆಪ್ಟೆಂಬರ್ 13ರ ಶನಿವಾರದಂದು ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ಈ ಸಮಾವೇಶಕ್ಕೆ ನಾಡಿನ ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಹಾಗೂ ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕದ ಮಾಧ್ಯಮ ಘಟಕದ ಕಾರ್ಯದರ್ಶಿ ಲಬೀದ್ ಶಾಫಿ, ಬೆಂಗಳೂರು ನಗರದ ಅಧ್ಯಕ್ಷರಾದ ಶೇಖ್ ಹಾರೂನ್ ಹಾಗೂ ರಾಜ್ಯ ಜನಸಂಪರ್ಕ ಸಹಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ ಉಪಸ್ಥಿತರಿದ್ದರು.
