ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ತತ್ವ, ಸಂದೇಶ ಕುರಿತು ಇಸ್ಲಾಂ ಧರ್ಮೀಯರಿಗೆ ಹಾಗೂ ಅನ್ಯ ಧರ್ಮೀಯರಿಗೆ ತಿಳಿವಳಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ.3 ರಿಂದ 14ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ ಅಲಿ ಬಳಗಾನೂರ ತಿಳಿಸಿದರು.
ವಿಜಯಪುರ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಜಮಾಅತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ʼನ್ಯಾಯದ ಹರಿಕಾರ ಮಹಮ್ಮದ್ ಪೈಗಂಬರ್ʼ ಶೀರ್ಷಿಕೆ ಅಡಿಯಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಪ್ರವಾದಿ ಪೈಗಂಬರ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಗಳು ನಿವಾರಣೆಯಾಗಬೇಕಿದೆ. ಧರ್ಮ, ಧರ್ಮಗಳ ನಡುವೆ ಶಾಂತಿ, ಸೌಹಾರ್ದ, ಸಹೋದರತೆ, ಸಹಾನುಭೂತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದರು.
“ಈ ಅಭಿಯಾನದ ಅಂಗವಾಗಿ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಹಾಗೂ ಅನಾಥ ಆಶ್ರಯಕ್ಕೆ ಭೇಟಿ ಅವರರೊಂದಿಗೆ ಸಂವಾದ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮ ಆಯೋಜನೆ ಮಾಡಿ, ಜನರಿಗೆ ಪ್ರವಾದಿ ಸಂದೇಶಗಳನ್ನು ತಲುಪಿಸಲಾಗುತ್ತಿದೆ” ಎಂದರು.
“ಪ್ರವಾದಿ ಪೈಗಂಬರ್ ಅವರು ಸಾಮಾಜಿಕ ಸಮಾನತೆಗೆ ಆದ್ಯತೆ ನೀಡಿದ್ದರು. ಶಿಕ್ಷಣದಲ್ಲಿ ಜ್ಞಾನದ ಜೊತೆ ವೈಚಾರಿಕತೆ ಇರಬೇಕು ಎಂದು ಪ್ರತಿಪಾದಿಸಿದ್ದರು. ಮಹಿಳಾ ವಿಮೋಚಕರಾಗಿದ್ದರು. ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು. ಪರಧರ್ಮ ಸಹಿಷ್ಣುತೆಗೆ ಆದ್ಯತೆ ನೀಡಿದ್ದರು” ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯ ವಿವಿಧ ಪಿಜಿ ಕೋರ್ಸ್‌ಗಳಿಗೆ ಸೆ.2ರಂದು ಕೌನ್ಸೆಲಿಂಗ್
ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನದಿಂದ ಪ್ರವಾದಿ ಜೀವನ ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳು ಅಭಿಯಾನದಲ್ಲಿ ಬಿಡುಗಡೆಯಾಗಲಿವೆ ಎಂದು ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಎಂ. ಡಿ ಅಬ್ದುಲ್ ಕದೀರ್, ಯೂಸುಫ್ ಖಾಝಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಅಧ್ಯಕ್ಷ ಅಬ್ದುಲ್ ಹಮೀದ್ ಜಾವೀದ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾ ಉಪಾಧ್ಯಕ್ಷ ಉಬೈದೂರ ರಹೇಮನ್ ಶೈಖ್ ಮುಂತಾದವರು ಇದ್ದರು.