ಹಳ್ಳ ದಾಟಲು ಸೇತುವೆ ಇಲ್ಲ. ಜನರು ಒಂದೂರಿಂದ ಮತ್ತೊಂದು ಊರಿಗೆ ತೆರಳಲು ದಿನನಿತ್ಯ ಮರದ ದಿಮ್ಮಿ ಅಳವಡಿಸಿದ್ದ, ಕಾಲು ಸಂಕದಲ್ಲಿಯೇ ಓಡಾಡಬೇಕಾಗಿತ್ತು. ಹಾಗೆಯೇ, ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಆದರೆ ಆ ಗ್ರಾಮಕ್ಕೆ ಈಗ ಸೇತುವೆ ಭಾಗ್ಯ ಲಭಿಸಿದೆ. ಹೌದು ಇದಕ್ಕೆ ಕಾರಣವಾದದ್ದು ಈ ದಿನ.ಕಾಮ್ ವರದಿ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊರಲೇ ಗ್ರಾಮವು ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಜನರು ವಾಸುತ್ತಿದ್ದಾರೆ.

ಬೇಸಿಗೆಯಲ್ಲಿ ಹಳ್ಳದಲ್ಲಿ ನೀರು ಕಡಿಮೆ ಇರುವುದರಿಂದ ಜೀವನ ಹೇಗೂ ಸಾಗುತ್ತದೆ. ಆದರೆ, ಮಳೆಗಾಲದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಆಗ, ಪಕ್ಕದೂರಿಗೆ ಹೋಗಲೂ ಕಷ್ಟ ಪಡಬೇಕಾಗಿತ್ತು. ಸೇತುವೆ ಇಲ್ಲದೆ ದಿನಸಿ ಹಾಗೂ ಹಲವು ಸಾಮಗ್ರಿಗಳನ್ನು, ಕೃಷಿ ಯಂತ್ರೋಪಕರಣಗಳನ್ನು ಸಹ ಹೊತ್ತೊಯ್ಯಲು ಹರಸಾಹಸ ಪುಡುವಂತಾಗಿತ್ತು. ಈ ಕುರಿತು 12 ಸೆಪ್ಟಂಬರ್ 2023ರಲ್ಲಿ ಈ ದಿನ.ಕಾಮ್ ವರದಿ ಮತ್ತು ವಿಡಿಯೋ ವರದಿ ಪ್ರಕಟಿಸಿತ್ತು. ಈ ದಿನ ವರದಿಯಿಂದ ಕ್ಷೇತ್ರದ ಶಾಸಕರಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗಮನಕ್ಕೆ ತಂದಿದ್ದ ಬೆನ್ನಲ್ಲೇ ಈಗ ಸೇತುವೆ ನಿರ್ಮಾಣವಾಗಿರುವುದರಿಂದ ಆ ಸಮಸ್ಯೆ ಬಗೆಹರಿದಿದೆ ಎಂದು ಗ್ರಾಮಸ್ಥರು ಈ ದಿನ. ಕಾಮ್ ಗೆ ಧನ್ಯವಾದ ತಿಳಿಸಿದ್ದಾರೆ.

ಪುಟ್ಟ ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಪೋಷಕರು ಭಯ ಪಡುವಂತಾಗಿತ್ತು. ಗರ್ಭಿಣಿಯರು, ಬಾಣಂತಿಯರು ಹಳ್ಳ ದಾಟಲಾಗದೆ ಸಂಕಷ್ಟ ಎದುರಿಸಬೇಕಾಗಿತ್ತು. ವಿದ್ಯಾರ್ಥಿಗಳು ಹಾಗೂ ಗ್ರಾಮದ ಜನರು ಹಳ್ಳ ದಾಟುವಾಗ ಬಿದ್ದು, ಗಾಯಗಳಾಗಿವೆ. ಆದರೂ, ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ ಎಂದು ಈ ದಿನ.ಕಾಮ್ ವರದಿ ಪ್ರಕಟಿಸಿದ ನಂತರ ಸಂಬಂಧಪಟ್ಟ ಶಾಸಕರು ಹಾಗೂ ಪಂಚಾಯಿತಿಗೆ ಸೇರಿದ ಸದಸ್ಯರು ಗಮನವಹಿಸಿ ಸೇತುವೆ ಮಾಡಿಕೊಟ್ಟಿದ್ದಾರೆ ಎಂದು ಸುರೇಶ್ ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.
ಹೊರಲೇ ಗ್ರಾಮದ ಸಮಸ್ಯೆ ಬಗ್ಗೆ ಸೆಪ್ಟಂಬರ್ 2023ರಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಾಸು ಅವರು ಈದಿನ.ಕಾಮ್ ಜೊತೆ ಮಾತನಾಡಿಸಿದಾಗ “ ಅನುದಾನ ಬಿಡುಗಡೆ ಮಾಡುತ್ತೇವೆಂದು ಕ್ಷೇತ್ರದ ಶಾಸಕರು ತಿಳಿಸಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕೆಲಸ ಆರಂಭಿಸುತ್ತೇವೆ” ಎಂದು ಹೇಳಿದ್ದರು. ಈಗ ಹಂತ ಹಂತವಾಗಿ ಒಂದುವರೆ ವರ್ಷದಲ್ಲಿ ಮಳೆಗಾಲದ ಬಿಡುವು ನೋಡಿಕೊಂಡು ಸೇತುವೆ ನಿರ್ಮಾಣ ಮಾಡಿ 2025 ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಕೆಲಸ ಮುಗಿಸಿ, ಅದೇ ತಿಂಗಳಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡರನ್ನು ಆಹ್ವಾನಿಸಿ ಸೇತುವೆ ಉದ್ಘಾಟನೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹಳ್ಳಕ್ಕಿಲ್ಲ ಸೇತುವೆ; ಗ್ರಾಮಸ್ಥರ ಸಂಕಷ್ಟಕ್ಕಿಲ್ಲ ಪರಿಹಾರ
ಹಾಗೆಯೇ ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿದ ಈ ಕ್ಷೇತ್ರದ ಶಾಸಕರಿಗೂ ಹಾಗೂ ಈ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿದ್ದ ಈ ದಿನ. ಕಾಮ್ ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ವಾಸು ಅಭಿನಂದನೆ ತಿಳಿಸಿದ್ದಾರೆ.