“ರಾಜ್ಯದಲ್ಲಿ ಈಗಾಗಲೇ ಯಾವುದೇ ರೀತಿಯ ಸಾರ್ವಜನಿಕರ ಮತ್ತು ಸಚಿವರ ಸಂಪುಟದಲ್ಲಿ ಚರ್ಚೆ ಮಾಡದೆ, ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೆ ರಾತ್ರೋ ರಾತ್ರಿ ನೋಂದಣಿ ಶುಲ್ಕ ಹೆಚ್ಚಿಸಿರುವುದು ಸಾರ್ವಜನಿಕ ವಲಯದಲ್ಲಿ ಬರಸಿಡಿಲು ಬಡಿದಂತಾಗಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಹಣಮಂತಪ್ಪ ಕಬ್ಬಾರ ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ರಾಜ್ಯದಲ್ಲಿ ನೋಂದಣಿ ಶುಲ್ಕ ಹೆಚ್ಚಿಸಿರುವದನ್ನು ವಾಪಸ್ ಪಡೆಯುವಂತೆ ಉಪನೋಂದಣಾಧಿಕಾರಿಗಳು ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಈಗಾಗಲೇ ರಾಜ್ಯದಲ್ಲಿ ಮಳೆರಾಯನ ಅಬ್ಬರಕ್ಕೆ ರೈತಾಪಿ ವರ್ಗ ಮತ್ತು ಸಾರ್ವಜನಿಕರು, ಉದ್ಯಮಿಗಳು ಕಷ್ಟದಲ್ಲಿ ಸಿಲುಕಿದ್ದಾರೆ. ಅದರ ಮದ್ಯೆ ತಾವುಗಳು ಬೇರೆ ರಾಜ್ಯದಲ್ಲಿ ಈ ರೀತಿಯಾದ ವ್ಯವಸ್ಥೆ ಎಲ್ಲಿದೆ. ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದು ಪತ್ರಿಕಾ ಹೇಳಿಕೆ ಕೊಟ್ಟಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದ ಜನರ ಹಿತದೃಷ್ಟಿಯಿಂದ ತಾವುಗಳು ಈ ನಿರ್ಧಾರ ತೆಗೆದುಕೊಂಡಿರುವುದು ತತ್‌ಕ್ಷಣವೇ ಜಾರಿಗೆ ಬರುವಂತೆ ನಿರ್ದೇಶನ ನೀಡಿರುವುದು ಖಂಡನೀಯ. ಕೂಡಲೇ ತಾವುಗಳು ನೋಂದಣಿ ಶುಲ್ಕವನ್ನು ಮೊದಲಿನಂತೆಯೇ ಯಥಾಸ್ಥಿತಿಯಲ್ಲಿ ಕಡಿಮೆಗೊಳಿಸಬೇಕು” ಎಂದು ಒತ್ತಾಯಿಸಿದರು.
“ಈಗಾಗಲೇ ರಾಜ್ಯ ಸರ್ಕಾರವು ಒಂದರ ಮೇಲೊಂದು ಬೆಲೆಗಳು ಏರಿಕೆ ಮಾಡುತ್ತಿದ್ದು, ಅದರೊಂದಿಗೆ ಈಗ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಲ್ಲಿ ಕಡುಬಡವರು ಯಾವ ರೀತಿಯಾಗಿ ಆಸ್ತಿಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕೆಂದು ಚಿಂತಿಸುತ್ತಿದ್ದಾರೆ” ಎಂದರು.
“ಒಂದು ವೇಳೆ ತಾವುಗಳು ಕಡಿಮೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮತ್ತು ಮುಂಬರುವ ಚುನಾವಣೆಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ
ಮನವಿ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ಮಂಜುನಾಥ ಗುಂಡಣ್ಣನವರ ಇನ್ನೂ ಅನೇಕರು ಉಪಸ್ಥಿತರಿದ್ದರು.