ಮರಾಠಿಗರಿಗೆ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಮನೋಜ್ ಜರಾಂಗೆ ಅವರು ಸರ್ಕಾರದ ಜೊತೆ ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ.
ದಕ್ಷಿಣ ಮುಂಬೈಯ ಆಜಾದ್ ಮೈದಾನದಲ್ಲಿ ಮರಾಠಿಗರಿಗೆ ಮೀಸಲಾತಿ ಒತ್ತಾಯಿಸಿ ಮನೋಜ್ ಜರಾಂಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಅವರಿಗೆ ಆಜಾದ್ ಮೈದಾನವನ್ನು ಖಾಲಿ ಮಾಡುವಂತೆ ಮುಂಬೈ ಪೊಲೀಸರು ಮಂಗಳವಾರ ನೋಟಿಸ್ ಜಾರಿಗೊಳಿಸಿದ್ದಾರೆ.
ಮರಾಠಿಗರಿಗೆ ಮೀಸಲಾತಿ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವವರು ಬಾಂಬೆ ಹೈಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಪೊಲೀಸರು ವಿಧಿಸಿದ್ದ ಪ್ರತಿಭಟನೆ ಪೂರ್ವ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜರಾಂಗೆ ಅವರಿಗೆ ನೋಟಿಸ್ ನೀಡಲಾಗಿದೆ.
ಮನೋಜ್ ಜರಾಂಗೆ ಅಪಾರ ಬೆಂಬಲಿಗರು ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಮೀಸಲಾತಿ ಆಂದೋಲನದಿಂದಾಗಿ ಇಡೀ ಮುಂಬೈ ನಗರ ಸ್ತಬ್ಧಗೊಂಡಿದೆ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜರಾಂಗೆ ಅವರ ಪ್ರತಿಭಟನೆಯು ಶಾಂತಿಯುತವಾಗಿಲ್ಲ ಮತ್ತು ಅವರ ಆಂದೋಲನವು ಎಲ್ಲ ಷರತ್ತುಗಳನ್ನು ಉಲ್ಲಂಘಿಸಿದೆ ಎಂದೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ತಮ್ಮ ಹೋರಾಟಕ್ಕೆ ಯಾವುದೇ ಪರಿಹಾರ ಸಿಗದೇ ಇರುವುದರಿಂದ ಜರಾಂಗೆ ಪಾಟೀಲ್ ಹೋರಾಟದ ಹಿನ್ನೆಲೆ ಇಂದಿನಿಂದ ನೀರು ಕೂಡ ತ್ಯಜಿಸಿದ್ದರು.