ಉತ್ತರ ಕರ್ನಾಟಕದ ಜಾನಪದ ಸಂಸ್ಕೃತಿ ಭಾರತದ ಜನಪರ ಪರಂಪರೆಯ ಅನನ್ಯ ಸಂಪತ್ತು. ಇಲ್ಲಿನ ಹಬ್ಬಗಳು, ಆಚರಣೆಗಳು ಮತ್ತು ನಂಬಿಕೆಗಳು ಜನರ ಜೀವನದೊಂದಿಗೆ ಬೆಸೆದುಕೊಂಡಿವೆ. ಕೃಷಿ, ಮಣ್ಣು, ಮಳೆ, ಬೆಳೆ ಇವೆಲ್ಲವೂ ಉತ್ತರ ಕರ್ನಾಟಕದ ಸಂಸ್ಕೃತಿಯ ಹೃದಯ. ಈ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಹಬ್ಬವೆಂದರೆ ಜೋಕುಮಾರ ಹಬ್ಬ.
ಜೋಕುಮಾರನ ರೂಪ ಮತ್ತು ತಯಾರಿ
ಗಣೇಶ ಚತುರ್ಥಿಯ ನಂತರ ಅಷ್ಟಮಿಯಂದು ಜೋಕುಮಾರನನ್ನು ತಯಾರಿಸುತ್ತಾರೆ. ರೈತರ ಹೊಲದ ಕಪ್ಪು ಮಣ್ಣಿನಿಂದ ರೂಪಿಸುವ ಜೋಕುಮಾರನ ಮುಖ ಅಗಲವಾಗಿದ್ದು, ಕಣ್ಣು ದೊಡ್ಡದಾಗಿರುತ್ತದೆ. ಬಾಯಿ ತೆರೆದಿರುತ್ತದೆ ಹಾಗೂ ಹುರಿ ಬಿಟ್ಟ ಮೀಸೆಯುಳ್ಳವನಾಗಿರುತ್ತಾನೆ ಜೋಕುಮಾರ. ಈ ರೂಪವು ರೈತರ ಬದುಕಿನ ಶಕ್ತಿಯ ಪ್ರತೀಕ ಎನ್ನುವುದು ನಂಬಿಕೆ.
ಹಬ್ಬದ ಆಚರಣೆ ಹೇಗೆ?
ಜೋಕುಮಾರನನ್ನು ಬೇವಿನ ಎಲೆಗಳಲ್ಲಿ ಬುಟ್ಟಿಯಲ್ಲಿ ಇಟ್ಟು, ಮಹಿಳೆಯು ಮನೆ ಮನೆಗೆ ಹೊತ್ತು ತಿರುಗಿಸುತ್ತಾರೆ. ಮೊದಲು ಊರಿನ ಗೌಡರ ಮನೆಯಲ್ಲಿ ಪೂಜೆ ನಡೆಯುವುದು ಪದ್ಧತಿ. ನಂತರ ಓಣಿಯ ಮಧ್ಯದಲ್ಲಿ ಜೋಕುಮಾರನ ಬುಟ್ಟಿಯನ್ನು ಇಡುತ್ತಾರೆ. ಮನೆಮನೆಗೆ ಹೋಗುವಾಗ ಜನರು ಜೋಳ, ಮೆಣಸಿನಕಾಯಿ, ಉಪ್ಪು ಹಾಗೂ ಎಣ್ಣೆಯನ್ನು ದೇಣಿಗೆಯಾಗಿ ನೀಡುತ್ತಾರೆ. ಜೋಕುಮಾರನ ಬಾಯಿಗೆ ಬೆಣ್ಣೆ ಒರೆಸುವ ಪದ್ಧತಿಗೂ ವಿಶೇಷ ಮಹತ್ವವಿದೆ.
ಕೃಷಿ ನಂಬಿಕೆಗೂ ಜೋಕುಮಾರ ಹಬ್ಬಕ್ಕೂ ಇರುವ ನಂಟು:
ಜೋಕುಮಾರ ಹಬ್ಬ ಕೃಷಿಯೊಂದಿಗೆ ನೇರ ಸಂಬಂಧ ಹೊಂದಿದೆ. ಜೋಕುಮಾರನನ್ನು ಹೊತ್ತು ತಿರುಗುವ ಮಹಿಳೆಯರು ನೀಡುವ ಜೋಳದ ನುಚ್ಚನ್ನು ರೈತಾಪಿ ಮಹಿಳೆಯರು ಹೊಲದಲ್ಲಿ ಚರಗ ಚೆಲ್ಲುತ್ತಾರೆ. ಇದರಿಂದ ಮಳೆ ಸರಿಯಾಗಿ ಬಂದು ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈಗಲೂ ಮುಂದುವರೆಯುತ್ತಿರುವ ಸಂಸ್ಕೃತಿಯ ಭಾಗ. ಮನೆಯಲ್ಲಿನ ತಿಗಣೆ (ಹುಳು) ಕಾಟ ಕಡಿಮೆಯಾಗಲೆಂದು ತಿಗಣೆ ಹುಳುಗಳನ್ನು ಜೋಕುಮಾರನ ಮೇಲೆ ಹಾಕುವ ಪದ್ಧತಿಯೂ ಇದೆ.
ಜಾನಪದ ಹಾಡುಗಳ ವೈಶಿಷ್ಟ್ಯ:
ಜೋಕುಮಾರನನ್ನು ಹೊತ್ತು ತಿರುಗುವ ಮಹಿಳೆಯರು ಜಾನಪದ ಗೀತೆಗಳನ್ನು ಹಾಡಿ ಜನರನ್ನು ಕರೆಯುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆ ವಿಶೇಷ ಜಾನಪದ ಗೀತೆಗಳು ಹೀಗಿರುತ್ತವೆ..
ಬಲ ಬಂದ ನಿಮ್ಮ ಬಾಗಿಲಾಗ
ನಿಂತಾನ ಬೇಗ ನೀಡವ್ವ ಕೊಡುರವ್ವ ಜೋಕುಮಾರ|
ಬೇಗ ನೀಡವ್ವ ಕೋಡುರವ್ವ ಕುಮಾರಯ್ಯ
ಬಾಗಿಲಗ್ ಹರಕಿ ಕೋಡುತಾನ ಜೋಕುಮಾರ|
ಕೆಂಚಿ ನನ್ನ ಕುವರ ಮಿಂಚಿ ನೋಡಲ್ಲಿ
ಹೋಗ್ಯಾನ ಮಿಂಚೌ ಮಗ್ಗಿ ಮಳೆಗಾಲ ಜೋಕುಮಾರ|
ಮಿಂಚೌ ಮಗ್ಗಿ ಮಳೆಗಾಲ ಕುಮುರಯ್ಯ
ಕೆಂಪ ಶಲ್ಯ ಹೋಚ್ಯಾನ ಜೋಕುಮಾರ|
ಕರಿ ನನ ಕುಮರಯ್ಯ ಕೆರೆ ನೋಡಲ್ಲಿ
ಹೋಗ್ಯಾನ ಕರದೌ ಮಗ್ಗಿ ಮಳೆಗಾಲ ಜೋಕುಮಾರ|
ಕರದೌ ಮಗ್ಗಿ ಮಳೆಗಾಲ ಕುಮುರಯ್ಯ
ಕರಿಯ ಶಲ್ಯ ಹೊಚ್ಯಾನ ಜೋಕುಮಾರ|
ಅಡ್ಡಡ್ ಮಳೆ ಬಂದು ದೊಡ್ ದೊಡ್ಡ ಹನಿಯಾಗಿ
ಗೊಡ್ಡು ಗೋಳೆಲ್ಲ ಹೈನಾಗಿ ಜೋಕುಮಾರ||
ʼಜೋಕುಮಾರನು ಹೊಲಗಳಲ್ಲಿ ಆಟವಾಡಿದಾಗ ಮಳೆ ಸುರಿಯುತ್ತದೆ, ಬೆಳೆ ಸಮೃದ್ಧಿಯಾಗುತ್ತದೆʼ ಎಂಬ ಅರ್ಥದ ಜಾನಪದ ಹಾಡುಗಳು ರೈತರ ಬದುಕಿನ ಆಶಾಭಾವನೆ ಮತ್ತು ಪ್ರಕೃತಿ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ.
ಜೋಕುಮಾರನನ್ನು ಗಣಪತಿಯು ನೋಡಬಾರದು ಎಂಬ ಸಂಪ್ರದಾಯವಿದೆ. ಹಾಗಾಗಿ ಜೋಕುಮಾರನ ಮೆರವಣಿಗೆ ನಡೆಯುವ ವೇಳೆ ಗಣಪತಿಯನ್ನು ಮುಚ್ಚಿ ಇಡಲಾಗುತ್ತದೆ.
ಜೋಕುಮಾರನು ಏಳು ದಿನಗಳ ಕಾಲ ಇದ್ದರೂ ಪುಂಡಾಟ ಮೆರೆಯುತ್ತಾನೆ ಎಂದು ಜಾನಪದರು ನಂಬುತ್ತಾರೆ. ಈ ಕುರಿತು ಅವರು ಹೀಗೆ ಹಾಡುತ್ತಾರೆ..
ಚನ್ನಯ್ಯನ ಮಗಳ ನೋಡ ಹೋದರ ಜೋಕುಮಾರ
ಕಣ್ಣಿಟ್ಟ ಕಾಲ ಅಡ್ಡಿಟ್ಟ ಜೋಕುಮಾರ|
ಕಣ್ಣಿಟ್ಟ ಕಾಲ ಅಡ್ಡಿಟ್ಟ ಕೇಳ್ಯಾನ ಹೆಣ್ಣ
ನೀನ್ಯಾರ ಮಗಳಂದ ಜೋಕುಮಾರ|
ನನ್ನ ಕುಲ ಕೇಳಾಕ ನೀನ್ಯಾರ ಮಗನಯ್ಯ
ಕಣ್ಣ ಗುಡ್ಡಿಗೋಳ ತಗಸೇನ ಜೋಕುಮಾರ|
ಕಣ್ಣ ಗುಡ್ಡಿಗೋಳು ತೆಗಸೇನ ಜೋಕುಮಾರ
ಅಗಸರ ಬಂಡಿಗಿ ಬಡಿಸೇನ ಜೋಕುಮಾರ||
ಎಂದು ಜೋಕುಮಾರನ ಪುಂಡಾಟದ ಕುರಿತು ಹಾಡುತ್ತಾರೆ.

ಜೋಕುಮಾರನು ಏಳು ದಿನಗಳ ನಂತರ ಮರಣ ಹೊಂದುತ್ತಾನೆ ಈ ಸಂದರ್ಭದಲ್ಲಿ ಅಗಸರು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಇಟ್ಟು ಜೋಕುಮಾರನ ತಲೆ ಒಡೆಯುತ್ತಾರೆ.
ಕೊನೆಯ ದಿನ, ಜೋಕುಮಾರನನ್ನು ಹೊತ್ತುಕೊಂಡು ಗ್ರಾಮದಿಂದ ಹೊರಗೆ ಕರೆದೊಯ್ಯಲಾಗುತ್ತದೆ. ಈ ಯಾತ್ರೆ ರಾತ್ರಿ ವೇಳೆ ನಡೆಯುತ್ತದೆ. ಯಾಕೆಂದರೆ, ಜೋಕುಮಾರನನ್ನು ಯಾರೂ ನೋಡಬಾರದು ಎಂಬ ನಂಬಿಕೆ ಇದೆ. ಯಾರಾದರೂ ನೋಡಿದರೆ ಅವರಿಗೆ ತೊಂದರೆಗಳು, ಅಪಶಕುನಗಳು ಸಂಭವಿಸುತ್ತವೆ ಎಂದು ಹಿರಿಯರು ಎಚ್ಚರಿಸುತ್ತಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ರಂಗಪ್ಪ ಬಾರಕೇರ ಕುಟುಂಬವು ವಂಶ ಪಾರಂಪರ್ಯವಾಗಿ ಜೋಕುಮಾರ ಹಬ್ಬವನ್ನು ಕಾಪಾಡಿಕೊಂಡು ಬಂದಿದೆ. ಈ ಹಬ್ಬದ ಕೇಂದ್ರಬಿಂದು ಎಂದರೆ ರಂಗಪ್ಪ ಬಾರಕೇರ ಅವರ ಕುಟುಂಬ. ತಲೆಮಾರುಗಳಿಂದಲೂ ಈ ಕುಟುಂಬವು ಜೋಕುಮಾರನನ್ನು ತಲೆಯ ಮೇಲೆ ಹೊತ್ತುಕೊಂಡು ಗ್ರಾಮದಲ್ಲಿ ತಿರುಗುವ ಆಚರಣೆಯನ್ನು ನಿರಂತರವಾಗಿ ಮುಂದುವರೆಸುತ್ತಿದೆ.
ಗ್ರಾಮದ ಬೀದಿಗಳಲ್ಲಿ ತಲೆಯ ಮೇಲೆ ಜೋಕುಮಾರನನ್ನು ಹೊತ್ತುಕೊಂಡು ತಿರುಗುವ ಈ ದೃಶ್ಯವು ಜನರನ್ನು ಭಕ್ತಿಯಿಂದ ಒಟ್ಟುಗೂಡಿಸುತ್ತದೆ. ಬಾರಕೇರ ಕುಟುಂಬದವರು ಈ ಸಂಪ್ರದಾಯವನ್ನು ಕೇವಲ ಆಚರಣೆ ಎಂದಲ್ಲದೆ ತಮ್ಮ ಪೂರ್ವಜರಿಂದ ಬಂದ ವಂಶಪಾರಂಪರ್ಯದ ಹೊಣೆಗಾರಿಕೆ ಎಂದು ನೋಡುತ್ತಾರೆ.
ಈ ಹಬ್ಬದಲ್ಲಿ ರೈತ ಸಮುದಾಯದ ನಂಬಿಕೆ, ಕೃಷಿ ಜೀವನದ ಕಷ್ಟ-ಸುಖಗಳು, ಮಳೆಗಾಗಿ ಮಾಡಿರುವ ಹಾರೈಕೆಗಳು ಎಲ್ಲವೂ ಒಂದಾಗಿ ಬೆಸೆದುಕೊಂಡಿವೆ. ಗ್ರಾಮೀಣ ಜನರು ಈ ಹಬ್ಬವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಆಚರಿಸುತ್ತಿದ್ದಾರೆ. ಹೀಗಾಗಿ, ಜೋಕುಮಾರ ಹಬ್ಬವು ಇಂದಿಗೂ ಗ್ರಾಮೀಣ ಜನಜೀವನದಲ್ಲಿ ಜೀವಂತವಾಗಿಯೇ ಉಳಿದಿದೆ.
ಜೋಕುಮಾರ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆ ಅಲ್ಲ. ಇದು ರೈತರ ಕೃಷಿ ನಂಬಿಕೆ, ಪ್ರಕೃತಿಯ ಮೇಲಿನ ಗೌರವ ಮತ್ತು ಮಹಿಳೆಯರ ಸಾಂಸ್ಕೃತಿಕ ಪಾತ್ರವನ್ನು ಹೊರಹಾಕುವ ಮಹತ್ವದ ಜಾನಪದ ಸಂಪ್ರದಾಯ. ಉತ್ತರ ಕರ್ನಾಟಕ ಭಾಗವು ಇಂದಿಗೂ ತನ್ನ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದಕ್ಕೆ ಜೋಕುಮಾರ ಹಬ್ಬವು ಜೀವಂತ ಸಾಕ್ಷಿಯಾಗಿದೆ.
ಇದನ್ನೂ ಓದಿ: ಬೆಳಗಾವಿ | ಗ್ರಾಮ ಪಂಚಾಯತಿ ಅಧ್ಯಕ್ಷನ ವಿರುದ್ಧ 15 ವರ್ಷದ ಅಪ್ರಾಪ್ತೆಯನ್ನು ಬಾಲ್ಯವಿವಾಹವಾದ ಆರೋಪ
ಇಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ, ಬರಗಾಲ, ನೀರಿನ ಕೊರತೆ ರೈತರ ಬದುಕನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜೋಕುಮಾರ ಹಬ್ಬವು ಕೇವಲ ಸಂಸ್ಕೃತಿಯ ಆಚರಣೆ ಅಲ್ಲ, ಅದು ರೈತ ಸಮುದಾಯದ ನಿರಾಳ ಧ್ವನಿ. ಮಳೆ ಬರಲಿ, ಹೊಲ ಹಸುರಾಗಲಿ, ಮಕ್ಕಳ ಬಾಯಿಗೆ ಅನ್ನ ತಲುಪಲಿ ಎಂಬ ರೈತರ ಆಳದ ಹಂಬಲವೇ ಈ ಹಬ್ಬದ ಹೃದಯ.
ಆದುದರಿಂದ ಜೋಕುಮಾರ ಹಬ್ಬವನ್ನು ಉಳಿಸುವುದು ಕೇವಲ ಪರಂಪರೆಯನ್ನು ಉಳಿಸುವುದಲ್ಲ, ಅದು ರೈತರ ನೋವು ನಲಿವುಗಳಿಗೆ ಸ್ಪಂದಿಸುವ ಒಂದು ಮಾನವೀಯ ಕಾಯಕ. ಜೋಕುಮಾರ ಮಣ್ಣಿನ ಮೂರ್ತಿಯಾಗಿರಬಹುದು, ಆದರೆ ಆತನಲ್ಲಿ ಮಣ್ಣಿನ ವಾಸನೆಯ ಜೊತೆಗೆ ರೈತರ ಬದುಕಿನ ಕೃಷಿಯನ್ನು ಉಳಿಸಿದೆ ಎಂಬ ನಂಬಿಕೆ ಇದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು