ಶೋಷಿತರು ಹಾಗೂ ಬಡವರ ಪರ ಯಾರೇ ಪ್ರಶ್ನೆ ಮಾಡಿದರೂ ರೌಡಿ ಪಟ್ಟಿಯಲ್ಲಿ ಸೇರಿಸುವ ಜತೆಗೆ ಗಡಿಪಾರು ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಕೆಲ ಪೊಲೀಸ್ ಅಧಿಕಾರಿಗಳು ದರ್ಪ ತೋರುತ್ತಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೋಡಿಗಲ್ ರಮೇಶ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಚಿಂತಾಮಣಿಯ ಸರ್ಕಾರಿ ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ತೆರುವು ಮಾಡದಂತೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ನಾಲ್ವರ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ. ಅಲ್ಲದೆ ತಾವು ಯಾವುದೇ ಕೊಲೆ, ಸುಲಿಗೆ, ಮಾನಭಂಗದಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ವಿನಾಕಾರಣ ನನ್ನ ಗಡಿಪಾರಿಗೆ ಕುತಂತ್ರ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.
“ಕಳೆದ 13ರಂದು ಜಿಲ್ಲಾಡಳಿತ ಭವನದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ 10 ದಿನಗಳ ಒಳಗಾಗಿ ಎಲ್ಲ ಸಮಸ್ಯೆಗಳ ಬಗ್ಗೆ ಸಭೆ ಕರೆದು ಚರ್ಚೆ ನಡೆಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರದ ಕಾರಣ ಮತ್ತೆ ಒತ್ತಾಯಿಸಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೇತಮಂಗಲ | ಅನಧಿಕೃತ ಬಾರ್ ತೆರೆಯಲು ಅನುಮತಿ ನೀಡಿದರೆ ಅಹೋರಾತ್ರಿ ಧರಣಿ ಎಚ್ಚರಿಕೆ
ಮುಖಂಡ ವಿಜಯ ನರಸಿಂಹ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ವಿನಾಕಾರಣ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದನ್ನು ಖಂಡಿಸಿ ಕಳೆದ 13ರಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿಗಳು ನೀಡಿದ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಹಾಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ವಹಿಸನೇಕು” ಎಂದು ಆಗ್ರಹಿಸಿದರು.