ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಹಾಗೂ ಸಮಸ್ಯೆಯನ್ನು ಬಗೆಹರಿಸುವಂತೆ ರೈತರು ಹಾಗೂ ರೈತ ಸಂಘ ಪುರಸಭೆ ಮುಖ್ಯಾಧಿಕಾರಿ ಎಚ್ ಇಮಾಮ್ ಸಾಬ್ ಅವರಿಗೆ ಮನವಿ ಸಲ್ಲಿಸಿದರು.
“ಹೂವಿನಹಡಗಲಿ ಪಟ್ಟಣದಲ್ಲಿ ಇದು ದೊಡ್ಡ ಮಾರುಕಟ್ಟೆಯಾಗಿದ್ದು, ಪ್ರತಿ ಶನಿವಾರ ಸಂತೆ ನಡೆಯುತ್ತದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಆದ್ದರಿಂದ, ಸಮಸ್ಯೆಗಳನ್ನು ಬಗೆಹರಿಸಿ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು” ಎಂದು ರೈತ ಸಂಘ ಹಾಗೂ ತರಕಾರಿ ಬೆಳೆಗಾರರು ಒತ್ತಾಯಿಸಿದರು.
“ಪಟ್ಟಣದ ತರಕಾರಿ ಮಾರುಕಟ್ಟೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ತರಕಾರಿ ಮಾರಾಟ ಮಾಡಲು ಬರುವ ನೂರಾರು ರೈತರಿಗೆ ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು” ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅದ್ಯಕ್ಷ ಸಿದ್ಧಪ್ಪ ಹೊಸಮನಿ ಮಾತನಾಡಿ, “ಪ್ರತಿ ವಾರ ತರಕಾರಿ ಕೊಂಡುಕೊಳ್ಳಲು, ತರಕಾರಿ ಬೆಳದ ರೈತರು ಹಾಗೂ ವ್ಯಾಪಾರಸ್ಥರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಇದೇ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ. ಸಾವಿರಾರು ಜನಸಂದಣಿ ಸೇರುವ ತರಕಾರಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯಾಗಿದೆ. ಮಳೆಗಾಲದಲ್ಲಿ ಬಜಾರು ನೀರಿನಿಂದ ತುಂಬಿ ಕೆಸರಾಗಿರುತ್ತದೆ. ಕುಳಿತುಕೊಂಡು ಸಂತೆ ಮಾಡುವುದು ದುಸ್ತರವಾಗಿದೆ. ಸರಿಯಾದ ದಾರಿಯೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೆಸರು ಗದ್ದೆಯಂತಾದ ಮಾರುಕಟ್ಟೆಯಲ್ಲಿ ವೃದ್ಧರು ಕಾಲು ಜಾರಿ ಬಿದ್ದ ಬಹುತೇಕ ಪ್ರಸಂಗಗಳು ನಡೆದಿವೆ. ಸುತ್ತಮುತ್ತಲಿನ ತರಕಾರಿ ಬೆಳೆಯುವ ರೈತರಿಗೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿರುವ ಮಾರುಕಟ್ಟೆಯಾಗಿದೆ. ಇಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿರುವುದರಿಂದ ಮುಖ್ಯರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರಕರಿಗೆ ತುಂಬಾ ತೊಂದರೆಯಾಗುತ್ತಿದೆ. ಮಧ್ಯವರ್ತಿಗಳು ಜಕಾತಿ ವಸೂಲಿ ಮಾಡುವುದರಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಇದರಿಂದ ಮುಕ್ತಗೊಳಿಸಬೇಕು. ಅಲ್ಲದೆ ಬಜಾರನ್ನು ಸ್ವಚ್ಚಗೊಳಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರಶ್ನೆ ಮಾಡಿದವರನ್ನು ರೌಡಿ ಪಟ್ಟಿಗೆ ಸೇರಿಸಲಾಗುತ್ತಿದೆ: ಕೋಡಿಗಲ್ ರಮೇಶ್ ಆರೋಪ
ಕಾರ್ಯದರ್ಶಿ ಶಿವರಾಜ್ ಎಂ ಹೊಳಗುಂದಿ, ಉಪಾಧ್ಯಕ್ಷರು ವಿಠಲ ನಾಯಕ್, ವಿ ಬಿ ಚನ್ನಬಸಪ್ಪ, ಗಿರೀಶ್, ದುರ್ಗಪ್ಪ ದವಲ ಸಾಬ್, ಮಂಜುನಾಥಪುರ ಭೋಜ ನಾಯಕ್, ಸುನೀಲ್ ನಾಯಕ್, ಸಂತೋಷ ನಾಯಕ್ ಹಾಗೂ ತರಕಾರಿ ಬೆಳೆಗಾರರು ಇದ್ದರು.