ಐಟಿ ಮಹಿಳಾ ಉದ್ಯೋಗಿಯೊಬ್ಬರು ತಾವು ಮದುವೆಯಾದ 15 ದಿನಗಳ ಬಳಿಕ, ಕೆಲಸ ಕಳೆದುಕೊಂಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಕಂಪನಿ ಅವರನ್ನು ಉದ್ಯೋಗದಿಂದ ವಜಾಗೊಳಿಸಿದೆ. ವಜಾಗೊಂಡ ರೋಶ್ನಿ ಚೆಲ್ಲಾನಿ ಅವರು ತಮ್ಮನ್ನು ಕೆಲಸದಿಂದ ತೆಗೆದುಹಾಕುವುದಕ್ಕೂ ಮೊದಲು ಘಟಿಸುವ ಹಲವು ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಮದುವೆಯಾಗುವ ಉದ್ಯೋಗಸ್ಥ ಮಹಿಳೆಯರು ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ ‘ಕ್ವಾಲ್ಕಾಮ್’ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮನ್ನು ಕಂಪನಿಯ ಆಡಳಿತವು ವಜಾಗೊಳಿಸಿದೆ. ಮದುವೆಯಾಗಿ, ಕೆಲಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಇದು ಘಟಿಸಿದೆ. ಇದೊಂದು ‘ಅತ್ಯಂತ ಕ್ರೂರ’ ನಡೆ/ದೌರ್ಜನ್ಯ ಎಂದು ರೋಶ್ನಿ ಚೆಲ್ಲಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರೋಶ್ನಿ, “ನನ್ನನ್ನು ಏಕಾಏಕಿ, ಯಾವುದೇ ನಿರ್ದಿಷ್ಟ ಕಾರಣ ನೀಡದೆ ಕೆಲಸದಿಂದ ಕಿತ್ತುಹಾಕಲಾಯಿತು. ಕೆಲಸ ಕಳೆದುಕೊಳ್ಳುವುದು ಕಷ್ಟಕರ ವಿಷಯವಲ್ಲ. ಆದರೆ, ವಜಾಗೊಂಡ ನಂತರ ಎದುರಾಗುವ ಗೊಂದಲಗಳೇ ಕಷ್ಟಕರವಾಗಿವೆ. ಕಂಪನಿಗಳು ಉದ್ಯೋಗಿಯನ್ನು ತೆಗೆದುಹಾಕಲು ನಿರ್ಧರಿಸಿದಾಗ ನಮ್ಮ ಉದ್ಯೋಗ ನಿಷ್ಠೆಗೆ ಯಾವುದೇ ಮೌಲ್ಯವಿರುವುದಿಲ್ಲ” ಎಂದು ಹೇಳಿದ್ದಾರೆ.
“ನನ್ನನ್ನು ಯಾಕಾಗಿ ಕೆಲಸದಿಂದ ತೆಗೆದರು ಎಂಬ ಬಗ್ಗೆ ಅವಲೋಕಿಸಿದೆ. ಆಗ, ಉದ್ಯೋಗಿ ಮಹಿಳೆಯು ಮದುವೆಯಾದ ನಂತರ, ಅವರನ್ನು ಉದ್ಯೋಗದಾರರು ವಜಾಗೊಳಿಸುವ ಕುರಿತು 9 ಸಂಭಾವ್ಯ ಸೂಚನೆಗಳು ವಜಾಗೊಳಿಸುವುದಕ್ಕೂ ಮುನ್ನ ಕಾಣಿಸುತ್ತವೆ. ಅವು ನನ್ನ ಅರಿವಿಗೆ ಬಂದವು” ಎಂದು ಅವರು ಹೇಳಿದ್ದಾರೆ.
ರೋಶ್ನಿ ಹೇಳುವ ಗಮನಿಸಬೇಕಾದ ಸಂಭಾವ್ಯ ಸೂಚನೆಗಳು:
- ಅತಿಯಾಗಿ ಕೆಲಸ: ಒತ್ತಡವಾಗುವಷ್ಟು ಕೆಲಸಗಳು ಒಮ್ಮಿಂದೊಮ್ಮೆಲೇ ಬರುತ್ತವೆ. ಇದು ವಿರೋಧಾತ್ಮಕವಾಗಿ ಕಾಣಬಹುದು. ‘ನಮ್ಮನ್ನು ಕೆಲಸದಿಂದ ತೆಗೆಯುವುದಾದರೆ, ಯಾಕೆ ಹೆಚ್ಚು ಕೆಲಸ ಕೊಡುತ್ತಾರೆ?’ ಎನ್ನಿಸಬಹುದು. ಆದರೆ, ಅವರು ನಿಮ್ಮ ಮೇಲಿನ ಭರವಸೆಯಿಂದ ಹೆಚ್ಚು ಕೆಲಸ ಕೊಡುವುದಿಲ್ಲ. ಬದಲಾಗಿ, ನಿಮ್ಮನ್ನು ಕೆಲಸದಿಂದ ತೆಗೆಯುವುದಕ್ಕೂ ಮುನ್ನ, ನಿಮ್ಮ ಮೇಲೆ ಅವಲಂಬಿತವಾದ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳುವುದಾಗಿತ್ತದೆ.
- ಸಮಯ ಹೊಂದಿಸುವಿಕೆ: ಮದುವೆಯಾದ ಮಹಿಳೆಯರಿಗೆ ಹೊಸ ರೀತಿಯ ಜೀವನ ತೆರೆದುಕೊಳ್ಳುತ್ತದೆ. ಅವರು ಮನೆ, ಕುಟುಂಬ, ಮಗು, ಸಾಲ- ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಹೆಚ್ಚಿನ ಸಮಯವನ್ನು ಕಂಪನಿಗೆ ಪಡೆದುಕೊಳ್ಳಲು ಆಗುವುದಿಲ್ಲವೆಂಬ ಭಾವ ಕಂಪನಿಗಳದ್ದು. ಹೀಗಾಗಿ, ಅವರು ಕಂಪನಿಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಮುಂದಾಗುತ್ತಾರೆ.
- ಎಚ್ಆರ್ಗಿಂತ ಮೊದಲೇ ಗಾಸಿಪ್ ನಮ್ಮನ್ನು ತಲುಪುತ್ತದೆ: ಮಂಗಳವಾರ ಒಬ್ಬ ಸಹೋದ್ಯೋಗಿ ನನ್ನ ಬಳಿ ಬಂದು, ‘ಬುಧವಾರ ನಿನ್ನನ್ನು ವಜಾಗೊಳಿಸುತ್ತಾರೆ’ ಎಂದರು. ನಾನು ಅದನ್ನು ನಂಬಲಿಲ್ಲ. ಆದರೆ, ಬುಧವಾರ ಅವರು ಹೇಳಿದಂತೆಯೇ ಘಟಿಸಿತು.
- ಸಭೆಗಳಲ್ಲಿ ವಿಚಿತ್ರ ಭಾವ: ಕಂಪನಿಯು ಅಂತಿಮ ದಿನದವರೆಗೂ ವಿಷಯವನ್ನು ಮರೆ ಮಾಡಿ, ಗೌಪ್ಯವಾಗಿಡಲು ಯತ್ನಿಸುತ್ತದೆ. ಆದರೆ, ನಡೆಗಳು ಅಸ್ಪಷ್ಟವಾಗಿರುತ್ತವೆ, ಗೊಂದಲ ಹುಟ್ಟಿಸುತ್ತವೆ. ಕಂಪನಿಯ ಸಭೆಗಳಿಗೆ ಆಹ್ವಾನಿಸುತ್ತಾರೆ. ಆದರೆ, ‘ಕಡ್ಡಾಯ’ವಲ್ಲ ಎನ್ನುತ್ತಾರೆ. ಕೆಲವೊಮ್ಮೆ ಸಭೆಯಲ್ಲಿ ಹಾಜರಾದರೆ, ಯಾವುದೋ ಸಂದರ್ಭದಲ್ಲಿ ಸಭೆಯಿಂದ ಹೊರಹೋಗುವಂತೆ ಸೂಚಿಸುತ್ತಾರೆ.
- ಸೌಲಭ್ಯಗಳು ಅಲಭ್ಯವಾಗುತ್ತವೆ: ಕೆಲಸದ ವಿಚಾರದಲ್ಲಿ ಮತ್ತು ಅದಕ್ಕಾಗಿ ಬೇಕಾದ ಪೂರಕ ಕೆಲಸಗಳಲ್ಲಿ ಸೌಲಭ್ಯಗಳನ್ನು ಕಡಿತಗೊಳಿಸಲಾಗಿರುತ್ತದೆ. ಇದೊಂದು ರೀತಿಯ ಎಚ್ಚರಿಕೆ ಮತ್ತು ಸೂಚನೆ.
- ಮೇಲಧಿಕಾರಿಯ ವರ್ತನೆ ಬದಲಾಗುತ್ತದೆ: ನಮಗಿಂತ ಉನ್ನತ ಹುದ್ದೆಯಲ್ಲಿರುವವರು ನಮ್ಮೊಂದಿಗೆ ಮುಖನೋಡಿ ಮಾತನಾಡುವುದು ಕಡಿಮೆಯಾಗುತ್ತದೆ. ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಅಥವಾ ಮಾತುಗಳು ಸಂಕ್ಷಿಪ್ತವಾಗಿರುತ್ತವೆ. ಅವರ ಧ್ವನಿಯು ರಕ್ಷಣಾತ್ಮಕ ಸ್ವರದಲ್ಲಿರುತ್ತದೆ.
- ಜವಾಬ್ದಾರಿಗಳ ಅತಿಕ್ರಮಣ: ಇಬ್ಬರು ಒಂದೇ ವಿಭಾಗ ಅಥವಾ ಒಂದು ವಿಷಯದ ಮೇಲೆ ಕೆಲಸ ಮಾಡುತ್ತಿದ್ದರೆ? ಸರಳ ಗಣಿತದಲ್ಲಿ ಹೇಳುವಂತೆ, ಇಬ್ಬರು ಯಾಕೆ? ಒಬ್ಬರೇ ಸಾಕು ಎಂಬ ಸಾಮಾನ್ಯ ಹೇಳಿಕೆಯೊಂದಿಗೆ ಹೊರಹಾಕಲಾಗುತ್ತದೆ.
- ಶೀಘ್ರ ಕಡೆಗಣನೆ: ಮದುವೆಯಾದ ನಂತರ, ಆಕೆಯ ಜೊತೆಗಿನ ಒಡನಾಟ, ಕೆಲಸದಲ್ಲಿ ಒಳಗೊಳ್ಳುವಿಕೆಗಳು ಶೀಘ್ರವಾಗಿ ಕಡಿಮೆಯಾಗುತ್ತವೆ. ಇದರ ಹಿಂದೆ, ಆಕೆಯನ್ನು ಹೊರಹಾಕುವ ಉದ್ದೇಶವೇ ಇರುತ್ತದೆ. ಗಮನಾರ್ಹವಾಗಿ, ಮದುವೆ ಬಳಿಕ, ಮಹಿಳೆ ಮಕ್ಕಳು ಮಾಡಿಕೊಂಡರೆ, ದೀರ್ಘಾವಧಿಯ ಸಂಬಳ ಸಹಿತ ರಜೆ ನೀಡಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಕೆಲವು ಕಂಪನಿಗಳು ಹೊರಹಾಕುವ ಕುತಂತ್ರ ಅನುಸರಿಸುತ್ತವೆ.
- ಆರ್ಥಿಕ ಕಥೆ: ಆದಾಯ ಕಡಿಮೆಯಾಗಿದೆ. ವೆಚ್ಚಗಳು ಹೆಚ್ಚಾಗಿವೆ. ಹೆಚ್ಚು ಮಂದಿಗೆ ಸಂಬಳ ನೀಡುವ ಪರಿಸ್ಥಿತಿ ಇಲ್ಲ, ನೀವು ಆ ಬಗ್ಗೆ ತಿಳಿಯ ಬಯಸಿದರೆ ಎಲ್ಲವೂ ಲಭ್ಯವಿದೆ ಎಂದು ಕಥೆ ಹೇಳಲಾಗುತ್ತದೆ.
ರೋಶ್ನಿ ಅವರ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಮಗೂ ಹೀಗೆಯೇ ಆಯಿತೆಂದು ಹಲವರು ಹೇಳಿಕೊಂಡಿದ್ದಾರೆ. ನೆಟ್ಟಿಗ ಮಹಿಳೆಯೊಬ್ಬರು, “ನನಗೂ ಎರಡು ತಿಂಗಳ ಹಿಂದೆ ಇದೇ ರೀತಿ ಮಾಡಲಾಯಿತು. ಈಗ ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ. ಕಾರ್ಪೊರೇಟ್ ನಿಷ್ಠೆ ಒಂದು ಭ್ರಮೆಯಷ್ಟೇ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ದುಷ್ಟ ಅಮೆರಿಕ ಪುಟ್ಟ ವೆನೆಜುವೆಲಾ ಮೇಲೆ ಬಿದ್ದಿರುವುದೇಕೆ?
ಮತ್ತೊಬ್ಬರು, “ಇದು ಪ್ರಬಲವಾಗಿ ಬೆಳೆಯುತ್ತಿರುವ ಧೋರಣೆ. ನಾನು ಮಗು ಮಾಡಿಕೊಳ್ಳುವುದು ನಮ್ಮ ಖಾಸಗಿ ವಿಚಾರ. ಆದರೆ, ಅದೇ ಕಾರಣಕ್ಕೆ ನಾನು ಕೆಲಸ ಕಳೆದುಕೊಳ್ಳಬೇಕಾಯಿತು. ಈಗ, ಮರಳಿ ಉದ್ಯೋಗಕ್ಕೆ ಸೇರುವುದು ಸುಲಭವಿಲ್ಲ” ಎಂದು ಹೇಳಿಕೊಂಡಿದ್ದಾರೆ.
“ಕಂಪನಿಗಳು ರಾತ್ರೋರಾತ್ರಿ ಬದಲಾಗಬಹುದು. ಆದರೆ, ನಿಮ್ಮ ಕೌಶಲ್ಯಗಳು, ಕೆಲಸದ ಬದ್ಧತೆ ಮತ್ತು ಗುಣಮಟ್ಟ ಹಾಗೂ ಕೆಲಸದ ನೀತಿಗಳು ನಿಮ್ಮೊಂದಿಗೆ ಉಳಿಯುತ್ತವೆ. ಚಿಂತಿಸಬೇಡಿ” ಎಂದು ಓರ್ವ ನೆಟ್ಟಿಗರು ಸಮಾಧಾನಿಸುವ ಮಾತನಾಡಿದ್ದಾರೆ.