ಮೊಬೈಲ್ ಪೋನ್‌ಗೆ ಎಸ್‌ಎಂಎಸ್ ಮೂಲಕ ಬಂದ ಒಟಿಪಿ ಯಾರಿಗೂ ಹೇಳದಿದ್ದರೂ ಕಾರ್ಮಿಕರೊಬ್ಬರ ಬ್ಯಾಂಕ್ ಖಾತೆಯಿಂದ ₹8 ಲಕ್ಷ ಹಣ ವರ್ಗಾವಣೆಯಾಗಿದೆ.
ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿವೆ. ಅಪರಿಚಿತ ನಂಬರ್‌ದಿಂದ ಲಿಂಕ್ ಕಳುಹಿಸಿ ವಂಚಿಸುವುದು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ಹಣ ಪೀಕುವುದು ಪ್ರಕರಣಗಳು ಹೆಚ್ಚಾಗಿದ್ದವು. ಈಗ ಮೊಬೈಲ್‌ಗೆ ಒಟಿಪಿ ಬಂದರೂ ಅದನ್ನು ಯಾರೊಂದಿಗೆ ಹಂಚಿಕೊಳ್ಳದವರ ಖಾತೆಯಿಂದಲೂ ಹಣ ಕಡಿತವಾಗುತ್ತಿದೆ.
ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದ ನೀಲಕಂಠ ಸಂಗಪ್ಪಾ ಎಂಬುವವರು ಹಣ ₹8 ಲಕ್ಷ ಕಳೆದುಕೊಂಡಿದ್ದಾರೆ. ಸದ್ಯ ಅವರು ಬೆಳಗಾವಿಯಲ್ಲಿ ಪೇಂಟರ್ ಕೆಲಸ ಮಾಡಿಕೊಂಡಿದ್ದಾರೆ.
ಆಗಸ್ಟ್ 20ರಂದು ಮಧ್ಯಾಹ್ನ 3.27 ಗಂಟೆಗೆ ನೀಲಕಂಠ ಅವರ ಮೊಬೈಲ್ ಫೋನ್‌ಗೆ ಮೆಸೇಜ್ ಮೂಲಕ ಓಟಿಪಿ ಬಂದಿತ್ತು. ಅದನ್ನು ನೋಡಿ ಗಾಬರಿಗೊಂಡ ಅವರು ಕೂಡಲೇ ಬ್ಯಾಂಕ್ ವ್ಯವಸ್ಥಾಪಕರಿಗೆ ಕರೆ ಮಾಡಿ ನಿರಂತರ ಓಟಿಪಿ ಬರುತ್ತಿದ್ದು, ನನ್ನ ಬ್ಯಾಂಕ್ ಖಾತೆ ಬ್ಲಾಕ್ ಮಾಡಿ ಅಥವಾ ಖಾತೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ತೆಗೆಯುವಂತೆ ತಿಳಿಸಿದರು. ನೀಲಕಂಠ ಅವರು ಇಮೇಲ್ ಮೂಲಕ ಮನವಿ ಕಳಿಸಿದಾಗ ಮ್ಯಾನೇಜರ್ ಅವರು ನೀಲಕಂಠ ಅವರ ಹೆಸರಿನ ಖಾತೆ ಬ್ಲಾಕ್ ಮಾಡಿದ್ದರು.
ʼಆ.22ರಂದು ನೀಲಕಂಠ ಅವರು ಪತ್ನಿಯೊಂದಿಗೆ ಬ್ಯಾಂಕ್‌ಗೆ ತೆರಳಿ ಇಬ್ಬರ ಖಾತೆಗೆ ತಲಾ ₹9 ಲಕ್ಷ ಎಫ್‌ಡಿ ಮಾಡಿಸಿದ್ದರು. ಆ.28 ರಂದು ನೀಲಕಂಠ ಅವರು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ʼನನ್ನ ಬ್ಯಾಂಕ್ ಖಾತೆಗೆ ಇರುವ ಮೊಬೈಲ್ ಸಂಖ್ಯೆ ಬದಲಾಯಿಸಿದ್ದೀರಾ?ʼ ಅಂತ ಕೇಳಿದ್ದರು. ಅದಕ್ಕೆ ʼನಿಮ್ಮ ಖಾತೆಗೆ ಇರುವ ಮೊಬೈಲ್ ಸಂಖ್ಯೆ ಬದಲಾವಣೆ ಆಗಿಲ್ಲ. ಆದರೆ, ನಿಮ್ಮ ಖಾತೆಯಿಂದ ಲೋನ್ ಹಾಗೂ ಬೇರೆ-ಬೇರೆ ಕಡೆ ಹಣ ವರ್ಗಾವಣೆಯಾಗಿದೆʼ ಅಂತ ಅವರು ಖಾತೆಯ ವಿವರ ಕಳುಹಿಸಿದ್ದರುʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ʼಯಾರೋ ಅಪರಿಚಿತರು ನನ್ನ ಖಾತೆಯಿಂದ ₹8 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದ ಕೂಡಲೇ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿದ್ದೇನೆ. ಆ.25 ರಂದು ₹3 ಲಕ್ಷ, ಆ.26ರಂದು ₹2 ಲಕ್ಷ, ಆ.27ರಂದು ₹3 ಲಕ್ಷ ಹೀಗೆ 9 ಬಾರಿ ಒಟ್ಟು ₹8 ಲಕ್ಷ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ನನಗೆ ಮಾಹಿತಿ ಇಲ್ಲದೆ ಅಪರಿಚಿತರು ನನ್ನ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆʼ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ : ಕೃಷಿ ರಂಗ | ಕೃಷಿಗೆ ಬೆನ್ನೆಲುಬಾದ ಮೈಸೂರಿನ ನೇಗಿಲು
ವಂಚಕರನ್ನು ಪತ್ತೆ ಹಚ್ಚಿ, ಹಣ ವಾಪಸ್ ಕೊಡಿಸುವಂತೆ ನೀಲಕಂಠ ಸಂಗಪ್ಪಾ ಅವರು ಬೀದರ್ ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.