“ಗ್ರಾಮಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಗಳನ್ನು ನಡೆಸಬೇಕು. ನೀರು ಮತ್ತು ನೈರ್ಮಲ್ಯ ಸಮಿತಿಯ ಸಭೆಯಲ್ಲಿ ಗ್ರಾಮ ಪಂಚಾಯಿತಿಗಳು ನೀರಿನ ಕಾರ್ಯಚರಣೆ ಹಾಗೂ ನಿರ್ವಹಣೆ ನೀತಿಯನ್ನು ಸೂಕ್ತವಾಗಿ ಅಳವಡಿಸಿಕೊಳ್ಳಬೇಕು” ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಸೂಚಿಸಿದರು.

ಚಿತ್ರದುರ್ಗ ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್) ಸಹಯೋಗದಲ್ಲಿ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ (ಕೆ.ಎಸ್.ಆರ್.ಡಬ್ಲ್ಯೂ,ಎಸ್.ಪಿ) ಕುರಿತು ಆಯೋಜಿಸಿದ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಸೂಚನೆ ನೀಡಿದರು.

“ಸಮಿತಿ ಸಭೆಯಲ್ಲಿ 2025-26ನೇ ಸಾಲಿನ ನೀರಿನ ಬಜಟ್ ತಯಾರಿಸುವುದರೊಂದಿಗೆ ಈಗಾಗಲೇ ಘೋಷಣೆ ಮಾಡಿರುವ 24×7 ನೀರು ಸರಬರಾಜು ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಆಗುವಂತೆ ಕ್ರಮ ವಹಿಸಬೇಕು. ಸಭೆಯ ನಡಾವಳಿಯನ್ನು ತಪ್ಪದೇ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಭಿವೃದ್ಧಿ ಪತ್ರಿಕೋದ್ಯಮದ ಜನಕ, ಶ್ರೇಷ್ಠ ಪತ್ರಕರ್ತ ಅಂಬೇಡ್ಕರ್: ಟೆಲೆಕ್ಸ್ ರವಿಕುಮಾರ್
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಯಾನಂದಸ್ವಾಮಿ, ಲಿಂಗರಾಜು, ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ.ಎಸ್.ನಾಡರ್, ಜಿಲ್ಲಾ ಐ.ಇ.ಸಿ.ಸಮಾಲೋಚಕರಾದ ಬಿ.ಸಿ.ನಾಗರಾಜು ಕೆ.ಎಸ್.ಆರ್.ಡಬ್ಲ್ಯೂ,ಎಸ್.ಪಿ ಸಮಾಲೋಚಕ ಕಿರಣ್ ಕುಮಾರ್, ಚಂದ್ರಕಾಂತ್, ಪ್ರವೀಣ್, ಯಲಪ್ಪ, ಗೀತಾ ಲಕ್ಷ್ಮಿ, ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್) ತಂಡದ ನಾಯಕರಾದ ನಾಗರಾಜ್, ಪ್ರತಾಪ್ ಸೇರಿದಂತೆ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ಸ್ ಉಪಸ್ಥಿತರಿದ್ದರು.