ಜಪಾನ್ ಪ್ರವಾಸಿಯೊಬ್ಬರು ಹೆಲ್ಮೆಟ್ ಧರಸದೆ ಬೈಕ್ ಸವಾರಿ ಮಾಡಿದ ಕಾರಣಕ್ಕಾಗಿ ಅವರು ಬಳಿ ಲಂಚ ಪಡೆದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದ ಗುರುಗ್ರಾಮ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಅಮಾನತುಗೊಂಡಿದ್ದಾರೆ.
ಗುರುಗ್ರಾಮದ ಗ್ಯಾಲೇರಿಯಾ ಮಾರುಕಟ್ಟೆಯ ಬಳಿ ಜಪಾನ್ ಪ್ರವಾಸಿಯೊಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು. ಅವರು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕಾಗಿ, ಅವರನ್ನು ತಡೆದು ಪೊಲೀಸರು ದಂಡ ವಿಧಿಸದೇ, ಬಿಟ್ಟುಕಳಿಸುತ್ತೇವೆಂದು ಲಂಚ ಪಡೆದಿದ್ದಾರೆ. ಘಟನೆಯನ್ನು ಜಪಾನ್ ಪ್ರವಾಸಿ ಗೌಪ್ಯವಾಗಿ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಬೆಳಕಿಗೆ ಬಂದ ಬಳಿಕ, ಗುರುಗ್ರಾಮ ಸಂಚಾರ ಪೊಲೀಸ್ ಠಾಣೆಯ ವಲಯ ಅಧಿಕಾರಿ, ಕಾನ್‌ಸ್ಟೆಬಲ್ ಮತ್ತು ಗೃಹರಕ್ಷಕ ಅಧಿಕಾರಿಯನ್ನು ಅಮಾನತು ಮಾಡಿ ಸಂಚಾರ ವಿಭಾಗದ ಡಿಸಿಪಿ ರಾಜೇಶ್ ಮೋಹನ್ ಆದೇಶಿಸಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಸಂಚಾರ ಸಿಬ್ಬಂದಿಯ ದುಷ್ಕೃತ್ಯವನ್ನು ಬಯಲಿಗೆಳೆದಿದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆ ನಾವು ಬದ್ದರಾಗಿದ್ದೇವೆ. ತಪ್ಪಿತಸ್ಥ ಆರೋಪಿಗಳಾದ ವಲಯ ಅಧಿಕಾರಿ ಕರಣ್ ಸಿಂಗ್, ಕಾನ್‌ಸ್ಟೆಬಲ್ ಶುಭಮ್ ಹಾಗೂ ಗೃಹರಕ್ಷಕ ಅಧಿಕಾರಿ ಭೂಪೇಂದರ್ ಅವರನ್ನು ಡಿಸಿಪಿ ಅಮಾನತುಗೊಳಿಸಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಮಟ್ಟದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಭ್ರಷ್ಟಾಚಾರದ ವಿಚಾರದಲ್ಲಿ ನಾವು ಸಹಿಷ್ಣುತೆ ತೋರುವುದಿಲ್ಲ” ಎಂದು ಗುರುಗ್ರಾಮ ಸಂಚಾರ ಪೊಲೀಸರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ
ವೈರಲ್ ಆಗಿರುವ ವಿಡಿಯೋದಲ್ಲಿ, ಪೊಲೀಸರಲ್ಲಿ ಒಬ್ಬರು ಜಪಾನ್ ಮಹಿಳೆಯ ಗುರುತಿನ ಚೀಟಿ ಕೇಳಿದ್ದಾರೆ. ಬಳಿಕ, 1,000 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ, ಕೋರ್ಟ್‌ಗೆ ಬರಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.
ಪ್ರವಾಸಿ ಮಹಿಳೆಯು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವುದಾಗಿ ಪ್ರಸ್ತಾಪಿಸಿದ್ದಾರೆ. ಆದರೆ, ಪೊಲೀಸರು ನಗದು ರೂಪದಲ್ಲಿಯೇ ಹಣ ಕೊಡಬೇಕೆಂದು ಕೇಳಿದ್ದಾರೆ. ಬಳಿಕ, ಪ್ರವಾಸಿ ಮಹಿಳೆ ಪೊಲೀಸರಲ್ಲಿ ಒಬ್ಬರಿಗೆ 500 ರೂ. ಮುಖಬೆಲೆಯ ಎರಡು ನೋಟುಗಳನ್ನು ನೀಡಿದ್ದಾರೆ. ಅವರು ಹಣ ನೀಡಿದ್ದರೆ, ಪೊಲೀಸರು ಯಾವುದೇ ರಶೀದಿಯನ್ನೂ ನೀಡದೆ ಕಳಿಸಿದ್ದಾರೆ.
“ಇಡೀ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಪಿ ಮೋಹನ್ ತಿಳಿಸಿದ್ದಾರೆ.