ಕೋಲಾರ ಜಿಲ್ಲೆಯ ಬೇತಮಂಗಲ ಹೋಬಳಿಯ ಪಾರಂಡಹಳ್ಳಿಯಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಮರ್ಪಕ ಕಸ ವಿಲೇವಾರಿ ಮಾಡದಿರಲು ಅಧಿಕಾರಿಗಳ ಕರ್ತವ್ಯ ನಿರ್ವಹಣೆ ವೈಫಲ್ಯವೇ ಕಾರಣವಾಗಿದ್ದು, ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಶಾಸಕಿ ರೂಪಕಲಾ ಶಶಿಧರ್ ಹೇಳಿದರು.
ಪಾರಂಡಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂಟೆ ಹಾಗೂ ಗರುಡರಾಜಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, “40-50 ವರ್ಷಗಳ ಹಿಂದೆ ಯುಜಿಡಿ ಸಂಪರ್ಕ ಇರಲಿಲ್ಲ. ಆದರೆ ಇಂದು ಯುಜಿಡಿ ಯೋಜನೆ ಜಾರಿಯಾಗಿದ್ದರೂ ಅಧಿಕಾರಿಗಳ ಅಸಮರ್ಪಕ ಕರ್ತವ್ಯದಿಂದ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸದಿಂದ ಪಾರಂಡಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರು ಕೆಟ್ಟ ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಪ್ರತಿ ಮನೆಗೂ ಸರಿಯಾಗಿ ಯುಜಿಡಿ ಸಂಪರ್ಕ ಕಲ್ಪಿಸುವ ಮೂಲಕ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು” ಎಂದು ಹೇಳಿದರು.

“ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದು ಇದೀಗ ಪ್ರತಿಯೊಂದು ವಾರ್ಡ್‌ನಲ್ಲಿ 2 ರಿಂದ 3 ಘಟಕ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ಕೋಲಾರ | ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆ: ಚೆಲುವನಹಳ್ಳಿ ನಾಗರಾಜ್
ಸಿಸಿ ರಸ್ತೆ ಅಭಿವೃದ್ಧಿಗಾಗಿ 100 ಕೋಟಿ, ಪಾರಂಡಹಳ್ಳಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ 100 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೇಕಡ 75 ರಷ್ಟು ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ಉಳಿಕೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಪಾರಂಡಹಳ್ಳಿ ಪಂಚಾಯಿತಿ ಅಧ್ಯಕ್ಷೆ ವಾಣಿ ಶ್ರೀನಿವಾಸ, ಸದಸ್ಯ ಕುಮಾರ್, ಪ್ರಕಾಶ್, ರವೀಂದ್ರ ರೆಡ್ಡಿ, ಬೇತಮಂಗಲ ಪಂಚಾಯಿತಿ ಅಧ್ಯಕ್ಷ ವೀನುಕಾರ್ತಿಕ್, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಸದಸ್ಯ ದಶಲಕ್ಷ ರೆಡ್ಡಿ , ಮಾಜಿ ಅಧ್ಯಕ್ಷ ಸುಬ್ಬರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಗೋಪಿನಾಥ್ ಹಾಗೂ ಇತರರು ಹಾಜರಿದ್ದರು.