ಸಾಗರ, ಹಿಂದುಳಿದ ವರ್ಗದವರ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಪತ್ರ ಬರೆದಿದ್ದ ಯಡಿಯೂರಪ್ಪ, ವಿಜಯೇಂದ್ರ, ಹರತಾಳು ಹಾಲಪ್ಪ ಅವರಿಗೆ ಧರ್ಮಸ್ಥಳ ಯಾತ್ರೆ ಮಾಡುವ ನೈತಿಕತೆ ಇಲ್ಲ. ವೋಟ್ ಬ್ಯಾಂಕ್‌ಗಾಗಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಸಿಗಂದೂರು ದೇವಸ್ಥಾನವನ್ನು ಮುಳುಗಿಸಲು ಪ್ರಯತ್ನ ಮಾಡಿದವರು ಈಗ ಧರ್ಮಸ್ಥಳ ಉಳಿಸಿ ಯಾತ್ರೆ ಮಾಡುತ್ತಿದ್ದಾರೆ.
ಎಸ್‌ಐಟಿ ರಚನೆಯಾದಾಗ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರು ಸ್ವಾಗತಿಸಿದ್ದರು. ಈಗ ಎನ್‌ಐಎ ತನಿಖೆಗೆ ವಹಿಸಿ ಎಂದು ಆಗ್ರಹಿಸುತ್ತಿದ್ದಾರೆ. ಇದು ಬಿಜೆಪಿಯ ಇಬ್ಬಗೆಯ ನೀತಿ ತೋರಿಸುತ್ತದೆ.ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದರಿಂದ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಬಯಲಿಗೆ ಬಂದಿದೆ. ಪಿತೂರಿ ನಡೆಸಿದವರು ಒಬ್ಬೊಬ್ಬರಾಗಿ ಜೈಲುಗೆ ಹೋಗತ್ತಿದ್ದಾರೆ.
ಇನ್ನಷ್ಟು ಪ್ರಮುಖರ ಮುಖವಾಡ ಬಯಲಿಗೆ ಬರಲಿದೆ ಎಂದ ಅವರು, ಭಾರಿ ಮಳೆಯಿಂದಾಗಿ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ತೀವ್ರ ಸಮಸ್ಯೆಯಾಗಿದೆ. ಬೆಳೆಗಾರರಿಗೆ ನೆರವಾಗಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಮಲೆನಾಡು ಭಾಗದ ಶಾಸಕರು ಮುಖ್ಯಮಂತ್ರಿ ಭೇಟಿಯಾಗಿ ವಿಶೇಷ ಅನುದಾನಕ್ಕೆ ಮನವಿ ಮಾಡಲಿದ್ದೇವೆ ಎಂದರು.