‘ನ್ಯಾಯ ಸಿಗದೆ ಬೆಂಗಳೂರು ತೊರೆಯುವುದಿಲ್ಲ’: ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟ ಘೋಷಣೆ

Date:

Advertisements
"ಶೇ. 1% ಪ್ರತ್ಯೇಕ ಮೀಸಲಾತಿ ನೀಡಲು ಪ್ರಕ್ರಿಯೆಯನ್ನು ಆರಂಭಿಸದಿದ್ದರೆ ಚಳಿಗಾಲದ ಅಧಿವೇಶ ನಡೆಯಲು ಬಿಡುವುದಿಲ್ಲ. ಮಕ್ಕಳು, ಮರಿ ಸಮೇತ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕುತ್ತೇವೆ" ಎಂದು ಅಲೆಮಾರಿಗಳ ಬೆಂಗಳೂರು ಚಲೋ ನಿರ್ಧರಿಸಿದೆ.

“ನಮಗೆ (ಅಸ್ಪೃಶ್ಯ ಅಲೆಮಾರಿಗಳಿಗೆ) ದಕ್ಕಬೇಕಾದ ಶೇ. 1 ಮೀಸಲಾತಿ ಪಡೆಯದೆ ನಾವು ಬೆಂಗಳೂರು ತೊರೆಯುವ ಮಾತೇ ಇಲ್ಲ. ಫ್ರೀಡಂ ಪಾರ್ಕಿನಲ್ಲಿ ಅಲೆಮಾರಿಗಳ ಶಾಶ್ವತ ಬಿಡಾರವನ್ನು ಸ್ಥಾಪಿಸುತ್ತೇವೆ. ಮುಂದಿನ ಚಳಿಗಾಲದ ಅಧಿವೇಶನದವರೆಗೂ ಹೋರಾಟ ಮಾಡಿ, ಬೆಳಗಾವಿ ಚಲೋ ನಡೆಸುತ್ತೇವೆ” ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ‘ಬೆಂಗಳೂರು ಚಲೋ’ ನಿರ್ಣಯ ಕೈಗೊಂಡಿದೆ.

ಇಂದು (ಬುಧವಾರ) ಸಾಗರೋಪಾದಿಯಲ್ಲಿ ಬೆಂಗಳೂರಿಗೆ ಹರಿದು ಬಂದಿದ್ದ ಅಲೆಮಾರಿಗಳು ತಮ್ಮ ಅನ್ನದ ಬಟ್ಟಲಿಗಾಗಿ ಪಟ್ಟು ಹಿಡಿದಿದ್ದಾರೆ. “ನಾವು ಇಷ್ಟು ವರ್ಷಗಳ ಕಾಲ ಎಲ್ಲರಿಗೂ ಹೆದರುತ್ತಾ, ಬೇಡುತ್ತಾ ಬದುಕಿದ್ದೇವೆ. ಆದರೆ ನಾವು ಇಂದು ಎಚ್ಚೆತ್ತಿದ್ದೇವೆ. ಈ ಅನ್ಯಾಯವನ್ನು ಸಹಿಸಲು ನಾವು ಸಿದ್ಧರಿಲ್ಲ” ಎಂದು ತಮ್ಮ ಮುಂದಿನ ಹೋರಾಟದ ಹೆಜ್ಜೆಗಳನ್ನು ಘೋಷಿಸಿದ್ದಾರೆ.

“ಕರ್ನಾಟಕ ಸರ್ಕಾರ ಮುಂದಿನ ಕ್ಯಾಬಿನೆಟ್‌ನಲ್ಲೇ ನಮ್ಮ ಸಮಸ್ಯೆ ಕುರಿತು ಚರ್ಚಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸಬೇಕು. ಒಂದುವೇಳೆ ಕರ್ನಾಟಕ ಸರಕಾರವು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ A ಎಂದು ಪರಿಗಣಿಸಿ, ಶೇ. 1% ಪ್ರತ್ಯೇಕ ಮೀಸಲಾತಿ ನೀಡಲು ಪ್ರಕ್ರಿಯೆಯನ್ನು ಆರಂಭಿಸದಿದ್ದರೆ ಮುಂದೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶವನ್ನು ನಡೆಯಲು ಬಿಡುವುದಿಲ್ಲ. ಈ ವೇದಿಕೆಯ ಮೂಲಕ ಬೆಳಗಾವಿ ಚಲೋಗೆ ಕರೆ ನೀಡುತ್ತಿದ್ದೇವೆ. ‘ನ್ಯಾಯ ಅಥವಾ ಜೈಲು’ ಎಂಬ ಘೋಷಣೆ ಜೊತೆ ಮಕ್ಕಳು, ಮರಿ ಸಮೇತ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಮಹಾ ಒಕ್ಕೂಟ ನಿರ್ಧರಿಸಿದೆ.

WhatsApp Image 2025 09 03 at 12.19.23

ಬೃಹತ್ ಪ್ರತಿಭಟನಾ ಸಮಾವೇಶ 9 ನಿರ್ಣಯಗಳನ್ನು ಕೈಗೊಂಡಿದೆ. ಅವುಗಳು ಹೀಗಿವೆ:

  1. ಕರ್ನಾಟಕ ಸರಕಾರವು ಕಳೆದ 35 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮನ್ನಣೆ ನೀಡಿ ಒಳಮೀಸಲಾತಿ ಜಾರಿಮಾಡುವ ನಿರ್ಧಾರ ಕೈಗೊಂಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ; ಆದರೆ ಅಸ್ಪೃಶ್ಯ ಅಲೆಮಾರಿಗಳ ವಿಚಾರದಲ್ಲಿ ಸರಕಾರ ತೆಗೆದುಕೊಂಡಿರುವ ತೀರ್ಮಾನವನ್ನು ತೀವ್ರವಾಗಿ ಖಂಡಿಸುತ್ತೇವೆ.
  2. ಅಲೆಮಾರಿಗಳ ವಿಚಾರದಲ್ಲಿ ಕರ್ನಾಟಕ ಸರಕಾರದ ತೀರ್ಮಾನವು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಇದಲ್ಲದೆ, ಮಾಡಲು ಭಾರತದ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ದಿ: 01.08.2024ರಂದು ಮೀಸಲಾತಿಯ ಒಳವರ್ಗೀಕರಣ ಕುರಿತು ನೀಡಿದ ಮಹತ್ವದ ತೀರ್ಪಿಗೆ ಹಾಗೂ ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್‌ ಅವರು ಮಾಡಿರುವ ಸಲಹೆಗೆ ವ್ಯತಿರಿಕ್ತವಾಗಿದೆ.
  3. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನೀಡಿದ ತೀರ್ಪಿನ ಅನ್ವಯ ಕರ್ನಾಟಕದಲ್ಲಿ ಒಳಮೀಸಲಾತಿಯ ಪ್ರಮಾಣವನ್ನು ನಿಗದಿ ಮಾಡಬೇಕು. ಮೀಸಲಾತಿಯ ಒಳವರ್ಗೀಕರಣ ಮಾಡುವಾಗ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯೇ ಪ್ರಮುಖ ಮಾನದಂಡವಾಗಬೇಕು. ಯಾವ ಯಾವ ಸಮುದಾಯಗಳಿಗೆ ಸಾರ್ವಜನಿಕ ವಲಯಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲವೋ ಅಂತಹ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಹೆಚ್ಚಿನ ಪ್ರಮಾಣವನ್ನು ನಿಗದಿ ಮಾಡಬೇಕು. ‘ಸಾಕಷ್ಟು ಪ್ರಾತಿನಿಧ್ಯ ಪಡೆಯದ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಹೆಚ್ಚಿನ ಅವಕಾಶಗಳು ಲಭಿಸುವಂತಾಗಬೇಕು’ ಎಂಬುದು ಮೀಸಲಾತಿಯ ಒಳವರ್ಗೀಕರಣದ ಮುಖ್ಯ ಆಶಯವಾಗಿದೆ. ಇದರ ಅನ್ವಯ ಕರ್ನಾಟಕ ಸರಕಾರವು ಈಗ ಮಾಡಿರುವ ಒಳಮೀಸಲಾತಿಯ ವರ್ಗೀಕರಣವನ್ನು ಪುನರ್ ಪರಿಶೀಲಿಸಬೇಕು. ಕಳೆದ 75 ವರ್ಷಗಳಿಂದ ಮೀಸಲಾತಿಯ ಮೂಲಕ ಪ್ರಾತಿನಿಧ್ಯ ಪಡೆಯದ ಅಲೆಮಾರಿಗಳಂತಹ ಸೂಕ್ಷ್ಮ ಮತ್ತು ಅಲಕ್ಷಿತ ಸಮುದಾಯಗಳಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಬೇಕು.
  4. ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಕಾರ: ಪ್ರವರ್ಗ A:  ಆಡಿಯನ್, ಅಜಿಲಾ, ಬುಡ್ಗ ಜಂಗಮ, ಸುಡುಗಾಡು ಸಿದ್ದ, ಹಂದಿಜೋಗಿ, ದಕ್ಕಲ, ಡೊಂಬರ, ಸಿಳ್ಳೇಕ್ಯಾತ, ಸಿಂಧೋಳ ಸೇರಿದಂತೆ 49 ಅಲೆಮಾರಿ ಸಮುದಾಯಗಳು ಮತ್ತು 10 ಅತಿಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಒಳಗೊಂಡಂತೆ 59 ಸಮುದಾಯಗಳಿಗೆ ಶೇ. 1% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ B: ಮಾದಿಗರನ್ನೂ ಒಳಗೊಂಡಂತೆ ಭಾಂಬಿ, ಚಮಾರ, ಮೋಚಿಗಾರ್ ಸಮುದಾಯವನ್ನೂ ಒಳಗೊಂಡಂತೆ ಎಡಗೈ ಗುಂಪಿನ 18 ಸಮುದಾಯಗಳಿಗೆ ಶೇ. 6% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ C: ಹೊಲೆಯ ಸಮುದಾಯವನ್ನೂ ಒಳಗೊಂಡಂತೆ ಬಲಗೈ ಗುಂಪಿನ ಅನಮುಕ್, ಛಲವಾದಿ, ಮಹರ್ ಸಮುದಾಯಗಳನ್ನೂ ಒಳಗೊಂಡ 17 ಸಮುದಾಯಗಳಿಗೆ ಶೇ. 5% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ D: ಲಂಬಾಣಿ, ಭೋವಿ, ಕೊರಚ ಕೊರಮರನ್ನೂ ಒಳಗೊಂಡಂತೆ 4 ಸ್ಪೃಶ್ಯ ಸಮುದಾಯಗಳಿಗೆ ಶೇ. 4% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ E: ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳಿಗೆ ಶೇ. 1% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಈ ವರ್ಗೀಕರಣವು ವಸ್ತುನಿಷ್ಠವೂ ಮತ್ತು ವೈಜ್ಞಾನಿಕವೂ ಆಗಿದೆ. ಇಲ್ಲಿ ಗಮನಿಸಲೇಬೇಕಾದ ವಿಚಾರವೆಂದರೆ ಮೀಸಲಾತಿಯ ಹಂಚಿಕೆ ಮಾಡುವಾಗ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ A ಎಂದು ಆದ್ಯತೆಯಲ್ಲಿ ಪರಿಗಣಿಸಿದೆ. ಸರ್ಕಾರ ತೆಗೆದುಕೊಂಡಿರುವ ತೀರ್ಮಾನವು ನಮ್ಮನ್ನು ಪ್ರವರ್ಗದಿಂದ ತೆಗೆದು ಸಾಪೇಕ್ಷವಾಗಿ ಮುಂದುವರೆದಿರುವ ಪ್ರವರ್ಗ D ಜೊತೆ ಸೇರಿಸಿದೆ. ಈ ಮೂಲಕ ವಾಸ್ತವದಲ್ಲಿ ಅಲೆಮಾರಿ ಸಮುದಾಯಕ್ಕೆ ಮೀಸಲಾತಿಯನ್ನೇ ನಿರಾಕರಿಸಲಾಗಿದೆ.
  5. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಈ ವರದಿಯ ಅನುಸಾರ 49 ಅಲೆಮಾರಿ ಸಮುದಾಯಗಳನ್ನು ಮತ್ತು 10 ಅತಿ ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ A ಅಡಿಯಲ್ಲಿ ಗುರುತಿಸಿ, ಈ 59 ಸಮುದಾಯಗಳಿಗೆ ಶೇ. 1% ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಈ ಸಮಾವೇಶವು ಒತ್ತಾಯಿಸುತ್ತದೆ. ಇದಲ್ಲದೆ ತೆಲಂಗಾಣ ಮತ್ತು ತಮಿಳುನಾಡಿನ ಸರಕಾರಗಳು ಅಲೆಮಾರಿ ಮತ್ತು ಅರುಂಧತಿಯಾರ್ ಸಮುದಾಯಗಳಿಗೆ ಮೀಸಲಾತಿಯಲ್ಲಿ ಪ್ರಥಮ ಪ್ರಾಶಸ್ತ್ಯದ ಸ್ಥಾನಮಾನವನ್ನು ನೀಡಿವೆ. ಇದನ್ನು ಗಮನಿಸಬೇಕು. (ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎಂ.ಎಸ್. ಜನಾರ್ಥನಂ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ, ಪರಿಶಿಷ್ಟ ಜಾತಿಗಳಲ್ಲಿ ಅರುಂಧತಿಯಾರ್‌ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ತಮಿಳುನಾಡು ಸರ್ಕಾರವು 2008ರಲ್ಲಿ ಪರಿಶಿಷ್ಟ ಜಾತಿಯ 18% ಕೋಟಾದೊಳಗೆ ಅರುಂಧತಿಯಾರ್‌ಗಳಿಗೆ 3% ಆಂತರಿಕ ಮೀಸಲಾತಿಯನ್ನು ಜಾರಿಗೆ ತಂದಿರುವ ಮಾದರಿಯನ್ನು ಪರಿಗಣಿಸಬೇಕು.)
  6. ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿಗಳಿಗೆ ತನ್ನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆಯಲ್ಲಿ (Special Component Plan) ಕಾನೂನಿನ್ವಯ ಹಣವನ್ನು ಮೀಸಲಾಗಿರಿಸುತ್ತದೆ. ಆಯವ್ಯಯದಲ್ಲಿ ತೆಗೆದಿರಿಸುವ ಒಟ್ಟು ಮೊತ್ತದಲ್ಲಿ ಶೇ1% ರಷ್ಟು ಹಣವನ್ನು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ಮೀಸಲಾಗಿಡಬೇಕು.
  7. ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಬೇಕು. (ಇದರಲ್ಲಿ ಕೊರಮ, ಕೊರಚ ಸಮುದಾಯಗಳನ್ನು ಹೊರಗಿಡಬೇಕು) ಇದರ ಮೂಲಕ ಅಲೆಮಾರಿಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಕೈಗೊಳ್ಳಲು ವಿಶೇಷ ಅನುದಾನವನ್ನು ನೀಡಬೇಕು.
  8. ನಮ್ಮದು ಪಕ್ಷಾತೀತ ಹೋರಾಟವಾಗಿದೆ. ನಮ್ಮ ಹೋರಾಟವನ್ನು ದುರಪಯೋಗಪಡಿಸಿಕೊಳ್ಳಲು ಯಾವುದೇ ಪಕ್ಷಕ್ಕೂ ಅವಕಾಶ ನೀಡುವುದಿಲ್ಲ. ಅದೇ ಸಂದರ್ಭದಲ್ಲಿ ನಮಗೆ ನಮ್ಮ ಪಾಲು ದಕ್ಕದೇಹೋದಲ್ಲಿ ಯಾವ ರಾಜಕೀಯ ಪಕ್ಷವನ್ನೂ ನಾವು ಕ್ಷಮಿಸುವುದಿಲ್ಲ ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಎಚ್ಚರಿಸಲು ಬಯಸುತ್ತೇವೆ.
  9. ಕೊನೆಯದಾಗಿ ಮತ್ತು ಅತಿಮುಖ್ಯವಾಗಿ ನಾವಿಂದು ನಮ್ಮ ಮುಂದಿನ ಹೋರಾಟದ ಹೆಜ್ಜೆಗಳನ್ನು ಘೋಷಿಸುತ್ತಿದ್ದೇವೆ. ನಾವು ಇಷ್ಟು ವರ್ಷಗಳ ಕಾಲ ಎಲ್ಲರಿಗೂ ಹೆದರುತ್ತಾ, ಬೇಡುತ್ತಾ ಬದುಕಿದ್ದೇವೆ. ಆದರೆ ನಾವು ಇಂದು ಎಚ್ಚೆತ್ತಿದ್ದೇವೆ. ಈ ಅನ್ಯಾಯವನ್ನು ಸಹಿಸಲು ನಾವು ಸಿದ್ಧರಿಲ್ಲ. ನಮಗೆ ದಕ್ಕಬೇಕಾದ ಶೇ. 1 ಮೀಸಲಾತಿ ಪಡೆಯದೆ ನಾವು ಬೆಂಗಳೂರು ತೊರೆಯುವ ಮಾತೇ ಇಲ್ಲ. ಹಾಗಾಗಿ ಫ್ರೀಡಂ ಪಾರ್ಕಿನಲ್ಲಿ ಅಲೆಮಾರಿಗಳ ಶಾಶ್ವತ ಬಿಡಾರವನ್ನು ಸ್ಥಾಪಿಸುವ ಘೋಷಣೆಯನ್ನು ಇಂದು ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಮುಂದಿನ ಕ್ಯಾಬಿನೆಟ್ಟಿನಲ್ಲೇ ನಮ್ಮ ಸಮಸ್ಯೆ ಕುರಿತು ಚರ್ಚಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸುತ್ತೇವೆ. ಒಂದುವೇಳೆ ಕರ್ನಾಟಕ ಸರಕಾರವು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ A ಎಂದು ಪರಿಗಣಿಸಿ, ಶೇ 1% ಪ್ರತ್ಯೇಕ ಮೀಸಲಾತಿ ನೀಡಲು ಪ್ರಕ್ರಿಯೆಯನ್ನು ಆರಂಭಿಸದಿದ್ದರೆ ಮುಂದೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶವನ್ನು ನಡೆಯಲು ಬಿಡುವುದಿಲ್ಲ ಎಂದು ಈಗಲೇ ಹೇಳಬಯಸುತ್ತೇವೆ. ಈ ವೇದಿಕೆಯ ಮೂಲಕ ಬೆಳಗಾವಿ ಚಲೋಗೆ ಕರೆ ನೀಡುತ್ತಿದ್ದೇವೆ. “ ನ್ಯಾಯ ಅಥವಾ ಜೈಲು” ಎಂಬ ಘೋಷಣೆ ಜೊತೆ ಮಕ್ಕಳು, ಮರಿ ಸಮೇತ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕುತ್ತೇವೆ. 
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿಕಾರ ಹಂಚಿಕೆ ಕುರಿತು ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ: ಡಿ ಕೆ ಶಿವಕುಮಾರ್

ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ....

ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು...

ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಎಂದಿಗೂ ಆದರ್ಶಪ್ರಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕ್ಟೋಬರ್ 2ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ...

Download Eedina App Android / iOS

X