ಬಾಗೇಪಲ್ಲಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಾರಥ್ಯದಲ್ಲಿ ಚಳುವಳಿ ಡಾ.ಚಲಪತಿ ಗೌಡರ ಬಣದ ತಾಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದ 6 ಮತ್ತು 7ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ರಸ್ತೆಯನ್ನು ಸರಿಪಡಿಸಲು ಒತ್ತಾಯಿಸಿ, ರಸ್ತೆಯಲ್ಲಿನ ಗುಂಡಿಗಳಲ್ಲಿ ಪೈರು ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ರಸ್ತೆಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಬಿ.ಎ.ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ಪಟ್ಟಣದ ಕೇಂದ್ರದಲ್ಲಿ 6 ಮತ್ತು 7 ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯಲ್ಲಿ ಒಂದು ಎರಡು ಅಡಿಗಳ ಅಳದ ಗುಂಡಿಗಳಿವೆ. ಈ ರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಮುಖ್ಯವಾಗಿ ಈ ರಸ್ತೆಯಲ್ಲಿ ಎರಡು ಶಾಲೆಗಳು, ಎರಡು ಕುಡಿಯುವ ನೀರಿನ ಮಾರಾಟ ಕೇಂದ್ರಗಳು, ಕೊತ್ತಪಲ್ಲಿ ಗ್ರಾಮ, ಕೊತ್ತಪಲ್ಲಿ ಸರ್ಕಾರಿ ಶಾಲೆ ,ಮಸೀದಿ ಜೊತೆಗೆ ರಸ್ತೆ ಅಕ್ಕಪಕ್ಕ ನೂರಾರು ಕುಟಂಬಗಳು ಪ್ರತಿನಿತ್ಯವೂ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚರಿಸಬೇಕಾಗಿದೆ ಎಂದರು.
ಈ ರಸ್ತೆ ಹಾಳಾಗಿ 10 ವರ್ಷಗಳು ಕಳೆದರೂ ಸಹ ಸಂಬಂಧಪಟ್ಟ ಇಲಾಖೆಯವರೂ ಆಗಲೀ, ಅಧಿಕಾರಿಗಳಾಗಲೀ ಸುಗಮ ಸಂಚಾರಕ್ಕೆ ಉತ್ತಮ ರಸ್ತೆಯನ್ನು ನಿರ್ಮಿಸುತ್ತಿಲ್ಲ. ಇದರಿಂದ ಪ್ರತಿನಿತ್ಯವೂ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೆಟ್ಟು ಹೋದ ರಸ್ತೆಯಲ್ಲಿ ಇದುವರೆಗೂ ಹಲವಾರು ಅಪಘಾತಗಳಾಗಿವೆ. ಮಳೆ ಬಂತೆಂದರೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಜೊತೆಗೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಚರಡಿ ನೀರು ರಸ್ತೆಗೆ ಬರುತ್ತಿದೆ. ಇದರಿಂದ ಈ ರಸ್ತೆಯಲ್ಲಿರುವ ಶಾಲೆಗೆ ಹೋಗುವ ಪುಟ್ಡ ಪುಟ್ಟ ಮಕ್ಕಳು ಚರಂಡಿ ನೀರಿನ ಮೇಲೆ ಸಂಚರಿಸಿ ಹಲವಾರು ರೋಗಗಳು ಬರುತ್ತಿವೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ ಎಂದು ತಿಳಿಸಿದರು.

ಇಷ್ಟೆಲ್ಲಾ ಸಮಸ್ಯೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ. ಆದ್ದರಿಂದ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದು, ಬಾಗೇಪಲ್ಲಿ ಪಟ್ಟಣದಿಂದ ಕೊತ್ತಪಲ್ಲಿ ಗ್ರಾಮಕ್ಕೆ ಸಂಪರ್ಕದ ರಸ್ತೆಯು ಕೆಟ್ಟು ಹೋಗಿದು ಒಂದು ತಿಂಗಳ ಕಾಲಾವಧಿಯಲ್ಲಿ ಉತ್ತಮ ರಸ್ತೆಯನ್ನು ನಿರ್ಮಿಸಬೇಕು. ಇಲ್ಲವಾದಲ್ಲಿ ಕರವೇಯಿಂದ ಸಂಬಂಧಪಟ್ಟ ಇಲಾಖೆಯ ಕಚೇರಿಗಳ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಸಾಕ್ಷಿ ದೂರುದಾರ ಚಿನ್ನಯ್ಯ ಮತ್ತೆ ಎಸ್ಐಟಿ ಕಸ್ಟಡಿಗೆ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ, ಕರವೇ ಮುಖಂಡರಾದ ಷೇಕ್ ಹಿದಾಯತುಲ್ಲಾ, .ವೆಂಕಟಶಿವಪ್ಪ, ರಿಯಾಜ್ ಅಹಮದ್, ಸಲೀಂ, ಮಂಜುನಾಥ್, ಇದ್ರೀಸುಲ್ಲಾ, ಸುಹೇಲ್, ವಿಷ್ಣು, ಮುಬಾರಕ್, ಫಕ್ರುದ್ದೀನ್, ಮಧುಸೂಧನ್, ಚರಣ್, ಸಾದಿಕ್, , ಮತ್ತಿತರರು ಹಾಜರಿದ್ದರು.
