ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಬುಧವಾರ ಆಹ್ವಾನಿಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು, ಇಂದು ಹಾಸನ ನಗರದ ಅಮೀರ್ ಮೊಹಲ್ಲಾದಲ್ಲಿರುವ ಸಾಹಿತಿ ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿದರು.

ದಸರಾ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿದ ಬಾನು ಮುಷ್ತಾಕ್ ಅವರು, ದಸರಾ ಆರಂಭಕ್ಕೂ ಮುನ್ನ ವಿದೇಶದಲ್ಲಿ ಕೆಲವೊಂದು ಕನ್ನಡಪರ ಕಾರ್ಯಕ್ರಮಗಳಿವೆ. ಅದನ್ನು ಮುಗಿಸಿಕೊಂಡು ಬರುತ್ತೇವೆ. ಆ ಬಳಿಕ ದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ತೆರಳುವ ದಿನಾಂಕವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಇದೇ ವೇಳೆ ಮೈಸೂರು ಅಪರ ಜಿಲ್ಲಾಧಿಕಾರಿ ಶಿವರಾಜ್, ಚಾಮುಂಡಿ ದೆವಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಅಯುಕ್ತರಾದ ತನ್ವಿರ್ ಆಶಿಫ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಸಾಕ್ಷಿ ದೂರುದಾರ ಚಿನ್ನಯ್ಯ ಮತ್ತೆ ಎಸ್ಐಟಿ ಕಸ್ಟಡಿಗೆ
ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ-ಸಂಘಪರಿವಾರ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿತ್ತು. ಬಾನು ಮುಷ್ತಾಕ್ ಅವರು ‘ಮುಸ್ಲಿಂ’ ಎಂಬ ಕಾರಣಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರ ವಿರೋಧ ವ್ಯಕ್ತಪಡಿಸುವ ಮೂಲಕ ಇದನ್ನು ವಿವಾದವನ್ನಾಗಿ ಸೃಷ್ಟಿಸಲು ಪ್ರಯತ್ನಿಸಿತ್ತು. ಆದರೆ, ಇದ್ಯಾವುದಕ್ಕೂ ಜಗ್ಗದ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ, ಅಧಿಕೃತವಾಗಿ ಮೈಸೂರು ಜಿಲ್ಲಾಡಳಿತದ ಮೂಲಕ ಬುಧವಾರ ಆಹ್ವಾನ ನೀಡಿದೆ.