ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯನ್ನು ರಕ್ಷಣೆ ಮಾಡಬೇಕಾದ ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯೇ (ಸಿಡಬ್ಲ್ಯೂಸಿ) ಆಕೆಯ ಮೇಲೆ ಮತ್ತೊಮ್ಮೆ ದೌರ್ಜನ್ಯ ಎಸಗಲು ಆರೋಪಿಗೆ ಸಹರಿಸಿದೆ. ಸಿಡಬ್ಲ್ಯೂಸಿ ಸದಸ್ಯರು ಸಂತ್ರಸ್ತೆಯನ್ನು ಆರೋಪಿಯ ಮನೆಗೆ ಕಳುಹಿಸಿದ್ದು, ಅಲ್ಲಿ ಆರೋಪಿ ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯು ಮಧ್ಯಪ್ರದೇಶದ ಪನ್ನಾ ಛತ್ತರ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಡಬ್ಲ್ಯೂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ 10 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2025ರ ಜನವರಿ 16ರಂದು ಶಾಲೆಗೆ ತೆರಳಿದ್ದ ಸಂತ್ರಸ್ತ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯನ್ನು ಆರೋಪಿಯು ಅಪಹರಿಸಿದ್ದನೆಂದು ಆರೋಪಿಸಲಾಗಿದೆ. ಆಕೆಯ ಪೋಷಕರು ಮಗಳ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬರೋಬ್ಬರಿ ಒಂದು ತಿಂಗಳ ನಂತರ, ಫೆಬ್ರವರಿ 17ರಂದು ಹರಿಯಾಣದ ಗುರುಗ್ರಾಮದಲ್ಲಿ ಆರೋಪಿ ಮತ್ತು ಸಂತ್ರಸ್ತೆಯನ್ನು ಪೊಲೀಸರು ಪತ್ತೆ ಹಚ್ಚಿಸಿದ್ದರು. ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದರು. ಸಂತ್ರಸ್ತೆಗೆ ಆರೋಪಿ ಸಂಬಂಧಿಯೇ ಆಗಿದ್ದನೆಂದು ಹೇಳಲಾಗಿದೆ.
ಆರೋಪಿ ವಿರುದ್ಧ ಅಪಹರಣ, ಅತ್ಯಾಚಾರ ಆರೋಪದ ಮೇಲೆ ಬಿಎನ್‌ಎಸ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪನ್ನಾ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕೆಲ ದಿನಗಳ ಬಳಿಕ, ಛತ್ತರ್‌ಪುರ ಜಿಲ್ಲೆಯ ಜುಜಾರ್ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಸಂತ್ರಸ್ತ ಬಾಲಕಿಯನ್ನು ಪನರ್ವಸತಿಗಾಗಿ ಪನ್ನಾ ಸಿಡಬ್ಲ್ಯೂಸಿ ಕೇಂದ್ರದಲ್ಲಿ ಇರಿಸಲಾಗಿತ್ತು. ಆದಾಗ್ಯೂ, ಸಮಿತಿಯು ನಿಯಮಗಳನ್ನು ಉಲ್ಲಂಘಿಸಿ ಸಂತ್ರಸ್ತೆಯನ್ನು ಆರೋಪಿಯ ಅತ್ತಿಗೆ ಮನೆಗೆ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿಯು ತನ್ನ ಅತ್ತಿಗೆಯ ಮನೆಯಲ್ಲಿ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ, ಆರೋಪಿಯ ಜಾಮೀನನ್ನು ರದ್ದುಗೊಳಿಸಿ, ಆತನನ್ನು ಬಂಧಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?
ಸಂತ್ರಸ್ತೆಯನ್ನು ಆರೋಪಿಯ ಸಂಬಂಧಿಯ ಮನೆಗೆ ಕಳಿಸುವಾಗ ಆಕೆಯ ಸುರಕ್ಷತೆಯ ಬಗ್ಗೆ ನಿರ್ಣಯಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಡಬ್ಲ್ಯೂಸಿ ಸಾಮಾಜಿಕ ತನಿಖಾ ವರದಿಯನ್ನು ಪಡೆದಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯವು ಬಾಲಕಿಯ ಹಿತಾಸಕ್ತಿ ಮತ್ತು ರಕ್ಷಣೆಗೆ ಅಪಾಯವೊಡ್ಡುತ್ತದೆ ಎಂದು ವರದಿಯಾಗಿದೆ.
“ಅಪ್ರಾಪ್ತ ಸಂತ್ರಸ್ತೆಯನ್ನು ಆರೋಪಿಯ ಮನೆಗೆ ಕಳುಹಿಸುವ ತಪ್ಪು ನಿರ್ಧಾರ ತೆಗೆದುಕೊಂಡವರು, ನಿರ್ಧಾರವನ್ನು ಇಲಾಖೆಯ ಗಮನಕ್ಕೆ ಬಾರದಂತೆ ಮುಚ್ಚಿಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದಾರೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಗಳ ವಿರುದ್ಧವೂ ಪೋಕ್ಸೋ ಕಾಯ್ದೆಯ ಸೆಕ್ಷನ್ 21, SC/ST ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 4 ಹಾಗೂ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 199 ಮತ್ತು 239ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.