ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಐವರು ಉದ್ಯಮಿಗಳು ಸಾವನ್ನಪ್ಪಿರುವ ಘಟನೆ ಬಿಹಾರದ ಪಾರ್ಸಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಯಾ ಮೋರ್ ಬಳಿ ನಡೆದಿದೆ. ಗುರುವಾರ ಬೆಳಗಿನ ಜಾವ 12.45ರ ಸುಮಾರಿಗೆ ಪಟನಾ-ಗಯಾ-ದೋಭಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 83ರಲ್ಲಿ ವೇಗವಾಗಿ ಬಂದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಜೋರಾದ ಡಿಕ್ಕಿಯ ಶಬ್ದ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಗ್ಯಾಸ್ ಕಟ್ಟರ್‌ಗಳು ಮತ್ತು ಕ್ರೇನ್ ಸಹಾಯದಿಂದ ಸುಮಾರು ಎರಡು ಗಂಟೆಗಳು ಪ್ರಯತ್ನ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಐವರ ದಾರುಣ ಸಾವು
ಮೃತರನ್ನು ಪಟನಾದ ಕುರ್ಜಿ ಚಶ್ಮಾ ಗಾಲಿಯ ನಿವಾಸಿ ರಾಜೇಶ್ ಕುಮಾರ್ (50), ಪಟನಾದ ಪಟೇಲ್ ನಗರದ ನಿವಾಸಿ ಸಂಜಯ್ ಕುಮಾರ್ ಸಿನ್ಹಾ (55), ಪಟನಾದ ನಿವಾಸಿ ಕಮಲ್ ಕಿಶೋರ್ (38), ಪಟನಾದಲ್ಲಿ ವಾಸಿಸುತ್ತಿದ್ದ ಸಮಷ್ಟಿಪುರ ನಿವಾಸಿ ಪ್ರಕಾಶ್ ಚೌರಾಸಿಯಾ (35) ಮತ್ತು ಮುಜಫರ್‌ಪುರ ನಿವಾಸಿ ಸುನಿಲ್ ಕುಮಾರ್ (38) ಎಂದು ಗುರುತಿಸಲಾಗಿದೆ.
ಮೃತ ಐವರೂ ಪಟನಾ ಮತ್ತು ಹತ್ತಿರದ ಜಿಲ್ಲೆಗಳ ನಿವಾಸಿಗಳಾಗಿದ್ದು ಕೀಟನಾಶಕ ಮತ್ತು ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ತೊಡಗಿದ್ದರು. ಉದ್ಯಮಿಗಳು ಒಂದು ವ್ಯಾಪಾರಕ್ಕಾಗಿ ಫತುಹಾಗೆ ಹೋಗಿದ್ದು ತಡರಾತ್ರಿ ಪಟನಾಕ್ಕೆ ಹಿಂದಿರುತ್ತಿದ್ದರು.
ಕಾರು ಅತಿ ವೇಗದಲ್ಲಿ ಚಲಾಯಿಸಲಾಗುತ್ತಿತ್ತು. ಟ್ರಕ್ ನಿಧಾನವಾಗಿ ಚಲಿಸುತ್ತಿತ್ತು ಅಥವಾ ಸರಿಯಾದ ಸಿಗ್ನಲ್ ಹಾಕದೆ ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು. ಕಾರಿನ ಚಾಲಕನಿಗೆ ಬ್ರೇಕ್ ಹಾಕುವಷ್ಟೂ ಸಮಯ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪಟನಾ ಪೊಲೀಸರು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಟನಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ಕಳುಹಿಸಲಾಗಿದೆ. ಮೊಬೈಲ್ ಫೋನ್‌ಗಳಿಗೆ ಬಂದ ಕರೆಗಳ ಮೂಲಕ ಪೊಲೀಸರು ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ.
ಟ್ರಕ್ ಚಾಲಕ ಪರಾರಿಯಾಗಿದ್ದು ಆತನ ವಿರುದ್ಧ ಪರ್ಸಾ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
