ವಿಜಯಪುರ ಜಿಲ್ಲೆಯ ಭೀಮಾತೀರದ ಮಹಾದೇವ ಸಾಹುಕಾರ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ದೇವರನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಮೇಲೆ ಗುಂಡಿನ ದಾಳಿ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ಇರುವ ಕ್ಷೌರದಂಗಡಿಯಲ್ಲಿ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಭೀಮನಗೌಡ ಬಿರಾದಾರ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದು, ಐದು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಭೀಮನಗೌಡನ ತಲೆಗೆ ಗುಂಡು ತಗುಲಿದ್ದು, ಕಣ್ಣಿಗೆ ಕಾರದ ಪುಡಿ ಎರಚಿ ರಾಡ್ ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಭೀಮನಗೌಡ ರಸ್ತೆ ಮಧ್ಯದಲ್ಲಿ ಅಸುನೀಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಭೀಮಾತೀರದ ಭಾಗಪ್ಪ ಹರಿಜನ ಅವರ ಬರ್ಬರ ಹತ್ಯೆ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೆ ಭೀಮಾತೀರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ.
ಆರೋಪಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು 24 ಗಂಟೆಯೊಳಗಾಗಿ ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳನ್ನು ರಜಿಯುಲ್ಲಾ ಮಕಾನದಾರ, ವಸೀಮ್ ಮನಿಯಾರ, ಫೀರೋಜ್ ಶೇಖ್, ಮೌಲಾಲಿ ಲಾಡಲೇಸಾಬ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡು | ಮಹಿಳೆ ನಾಪತ್ತೆ: ಕಂಡುಬಂದಲ್ಲಿ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ
ಆರೋಪಿಗಳ ವಿಚಾರಣೆ ಮಾಡಲಾಗಿ ಹಣಕಾಸು ವಿಷಯ ಹಾಗೂ ಆಶ್ರಯ ಮನೆ ಹಂಚಿಕೆಗೆ ಸಂಬಂಧಿಸಿದ ವಿವಾದವೇ ಕಾರಣ ಎಂಬುದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನಲೆ?
ಘಟನೆಗೆ ಸಂಬಂಧಿಸಿದಂತೆ ಕೊಲೆಗೀಡಾಗಿರುವ ಭೀಮನಗೌಡ ಅವರ ಪತ್ನಿ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ವಿಶ್ಲೇಷಿಸಿದಾಗ ಘಟನೆಗೆ ಹಳೆಯ ವೈಷಮ್ಯವೇ ಕಾರಣವೆಂದು ತಿಳಿದುಬಂದಿದೆ. ದೇವರನಿಂಬರಗಿ ಗ್ರಾಮದಲ್ಲಿ ಜಾಕೀರ್ ಮನಿಯಾರ ಅವರು ಪಿಡಿಒ ರಾಠೋಡ ಅವರ ನಡುವೆ ಸರ್ಕಾರಿ ಕೆಲಸದ ವಿಷಯವಾಗಿ ಜಗಳ ನಡೆದಿದ್ದು, ಈ ವಿಷಯವಾಗಿ ರಾಠೋಡ ಅವರು ಜಾತಿನಿಂದನೆ ಕೇಸು ದಾಖಲಿಸಿದ ಪರಿಣಾಮ ಜಾಕೀರ್ ಮನಿಯಾರ ಕಾರಾಗೃಹಕ್ಕೆ ಹೋಗುವಂತಾಗಿತ್ತು. ಇದರಿಂದಾಗಿ ಇವರ ತಮ್ಮಂದಿರು ಈ ಎಲ್ಲ ಘಟನೆಗೆ ಭೀಮನಗೌಡರೇ ಕಾರಣ, ಅವರೇ ಮುಂದೆನಿಂತು ಕೇಸ್ ದಾಖಲಿಸುವಂತೆ ಮಾಡಿದ್ದಾರೆಂಬ ದ್ವೇಷದಿಂದ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ.