ಚುನಾಯಿತ ಪ್ರತಿನಿಧಿಗಳು ಕ್ಷೇತ್ರದಲ್ಲಿಯೇ ವಾಸವಿದ್ದು, ಜನರ ಕಷ್ಟ-ಸುಖಗಳಿಗೆ ಆಗಬೇಕು. ಅವರ ಮನೆಯ ಹೆಣ್ಣುಮಕ್ಕಳು- ಗರ್ಭಿಣಿ ಸ್ತ್ರೀಯರು- ಅದೇ ಗುಂಡಿ ರಸ್ತೆಗಳಲ್ಲಿ ಓಡಾಡಬೇಕು. ಜನರ ಕಷ್ಟಗಳನ್ನು ಅವರೂ ಅನುಭವಿಸುವಂತಾಗಬೇಕು. ಆಗ, ಶಾಸಕರು ಬುದ್ಧಿ ಕಲಿಯುತ್ತಾರೆ.
ಪಶ್ಚಿಮ ಘಟ್ಟ ಮತ್ತು ಅರಬ್ಬಿ ಸಮುದ್ರದ ಅಂಚಿನಲ್ಲಿರುವ ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯವನ್ನು, ದಟ್ಟ ಕಾಡುಗಳನ್ನು, ಜಲಪಾತಗಳನ್ನು ತನ್ನ ಒಡಲಲ್ಲಿಟ್ಟುಕೊಂಡ ಶ್ರೀಮಂತ ಜಿಲ್ಲೆ. ಆದರೆ, ಇಲ್ಲಿಂದ ಆಯ್ಕೆಯಾದ ಶಾಸಕರು, ಸಂಸದರು- ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾದರೂ; ಅವರ ಬದುಕು ಹಸನಾಯಿತೇ ಹೊರತು, ಜಿಲ್ಲೆಯ ಜನರ ಬದುಕು ಬದಲಾಗಲಿಲ್ಲ. ಪಕ್ಷಗಳು, ನಾಯಕರು, ಸರ್ಕಾರಗಳು ಬಂದುಹೋದರೂ; ಸರ್ಕಾರದಿಂದ ಆಗಬೇಕಾದ ಮೂಲಭೂತ ಸೌಕರ್ಯಗಳು ಆಗಲಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ.
ಈಗ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ, ಜಲಪಾತಗಳು ಭರ್ತಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಜನ ಮಳೆಯೊಂದಿಗೇ ಹೊಂದಿಕೊಂಡು ಬದುಕುತ್ತಿದ್ದಾರೆ. ಇಲ್ಲಿನ ಜನರ ಬಹುದಿನದ ಬೇಡಿಕೆಯಾದ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು- ಕಳೆದ ಚುನಾವಣೆಯ ಸಂದರ್ಭದಲ್ಲಿ ಕೇಳಿಬಂದಿತ್ತು. ಆಡಳಿತದಲ್ಲಿದ್ದ ಬಿಜೆಪಿ ಕ್ರಿಮ್ಸ್ ಆವರಣದಲ್ಲಿ 300 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು 210 ಕೋಟಿ ರೂ. ಯೋಜನೆಯ ಮಾತನಾಡಿತ್ತು. ಕಾಂಗ್ರೆಸ್, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಎರಡು ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಮೇಲಾಯಿತು. ಉತ್ತರ ಕನ್ನಡ ಜಿಲ್ಲೆಯಿಂದ ಮಂಕಾಳ ವೈದ್ಯ ಸಚಿವರಾಗಿದ್ದೂ ಆಯಿತು. ಆದರೆ ಆಸ್ಪತ್ರೆ ಬರಲಿಲ್ಲ. ಇಲ್ಲಿನ ಜನರ ಕೂಗು ಯಾವ ಸರ್ಕಾರಕ್ಕೂ ಕೇಳಿಸುತ್ತಿಲ್ಲ. ಇಲ್ಲಿಂದ ಚುನಾಯಿತರಾದ ಜನಪ್ರತಿನಿಧಿಗಳು ಜನರ ಕೈಗೇ ಸಿಗುವುದಿಲ್ಲ.
ಇದನ್ನು ಓದಿದ್ದೀರಾ?: ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕೆಂದ ಉಮರ್ ಪರಮ ಪಾತಕಿಯೇ?
ಅದರಲ್ಲೂ 1983ರಿಂದ ಇಲ್ಲಿಯವರೆಗೆ ಒಂದಲ್ಲ ಎರಡಲ್ಲ, ಒಂಭತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ. ದೇಶಪಾಂಡೆಯವರು, ಜನತಾ ಪಕ್ಷ, ಜನತಾ ದಳ, ಕಾಂಗ್ರೆಸ್ ಪಕ್ಷಗಳ ಸರ್ಕಾರಗಳಲ್ಲಿ ಭಾರೀ ಕೈಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹತ್ತಾರು ತಲೆಮಾರು ಕೂತು ತಿಂದರೂ ಕರಗದಷ್ಟು ಹಣ, ಆಸ್ತಿ, ಕಾರ್ಪೊರೇಟ್ ಸಂಸ್ಥೆಗಳ ಶೇರು ಸಂಪಾದಿಸಿದ್ದಾರೆ. ದೇಶ-ವಿದೇಶಗಳಲ್ಲಿ ಭಾರೀ ಬಂಡವಾಳದ ಉದ್ದಿಮೆಗಳನ್ನು ಹೊಂದಿದ್ದಾರೆ.
ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ದೇಶಪಾಂಡೆಯವರು, ಬಿಜೆಪಿಯ ಅನಂತಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಜಾತಿಗೆ ಸೇರಿದ ದೇಶಪಾಂಡೆಯವರು, ಹಳಿಯಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು. ಆದರೆ ಬಹುಸಂಖ್ಯಾತ ಮರಾಠರನ್ನು ಹಿಡಿತದಲ್ಲಿಟ್ಟುಕೊಂಡು, ಕಾಂಗ್ರೆಸ್ಸಿನ ಮಾರ್ಗರೆಟ್ ಆಳ್ವರನ್ನು ಎರಡು ಸಲ ಸೋಲಿಸಿದ ಆಪಾದನೆಗಳಿವೆ. ಇವುಗಳ ನಡುವೆಯೇ, ಕಾಂಗ್ರೆಸ್ಸಿನ ಏಕಮೇವ ನಾಯಕನಂತೆ ಮೆರೆಯುತ್ತಿದ್ದಾರೆ.
ಹೀಗಿರುವಾಗ, ಜೋಯಿಡಾ ತಾಲೂಕಿನ ಸೂಪಾ ಡ್ಯಾಂ ತುಂಬಿರುವಾಗ, ಬಾಗಿನ ಅರ್ಪಿಸುವ ನೆಪದಲ್ಲಿ ಶಾಸಕರಾದ ಆರ್.ವಿ. ದೇಶಪಾಂಡೆಯವರು ನೆಲದ ಮೇಲೆ ಕಾಲಿಟ್ಟರು, ಉತ್ತರ ಕನ್ನಡ ಜಿಲ್ಲೆಯ ಜನರ ಕಣ್ಣಿಗೆ ಬಿದ್ದರು. ಅದೇ ಪ್ರದೇಶದಿಂದ ಬಂದ ಪತ್ರಕರ್ತೆ ರಾಧಾ ಹಿರೇಗೌಡರ್ ಕೂಡ ಅಲ್ಲೇ ಇದ್ದರು. ಅವರಿಗೆ ಸ್ಥಳೀಯ ಜನರ ಹಾಗೂ ಹೆಣ್ಣುಮಕ್ಕಳ ಸಮಸ್ಯೆಯ ಅರಿವಿತ್ತು. ಅದಕ್ಕೆ ಪೂರಕವಾಗಿ ತಮ್ಮ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಶಾಸಕರ ಗಮನ ಸೆಳೆಯಲು ಸ್ಥಳೀಯರ ಒತ್ತಾಯವಿತ್ತು.
ಆರ್.ವಿ. ದೇಶಪಾಂಡೆಯವರು ಪ್ರತಿನಿಧಿಸುವ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿದ್ದಾರೆ. ಜೊತೆಗೆ ಜಿಲ್ಲೆಯ ಹಿರಿಯ ರಾಜಕಾರಣಿ, ತಮ್ಮ ರಾಜಕೀಯ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ತಮ್ಮನ್ನು ಪೊರೆದ ಪೋಷಿಸಿದ ಜನರ ಋಣ ತೀರಿಸಬೇಕಾದ್ದು- ಮನುಷ್ಯರಾಗಿ ಮಾಡಬೇಕಾದ ಕೆಲಸ. ಆದರೆ ದೇಶಪಾಂಡೆಯವರು ಅದನ್ನು ಮಾಡದೆ ಮರೆತಿದ್ದಾರೆ.
ಮರೆತ ಸಂದರ್ಭದಲ್ಲಿ ದೇಶಪಾಂಡೆಯವರು ಜನರ ಮುಂದೆ ಬಂದಾಗ, ಸುದ್ದಿಗಾರರ ಪ್ರಶ್ನೆಗಳಿಗೆ ಎದುರಾದಾಗ, ಸ್ಥಳೀಯರೇ ಆದ ಪತ್ರಕರ್ತೆ ರಾಧಾ, ‘ಸರ್, ಮಳೆಗಾಲ ಶುರುವಾಗಿದೆ, ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗ್ತಿದೆ, ಹೆರಿಗೆಗೆ ಹೋಗುವ ಗರ್ಭಿಣಿ ಸ್ತ್ರೀಯರು ಬಹಳ ಪರದಾಡುತ್ತಿದ್ದಾರೆ. ತಮ್ಮ ಕಾಲಾವಧಿಯಲ್ಲಿ ಏನಾದರೂ ಒಂದು ಮಾಡಬಹುದಲ್ಲ, ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬಹುದಲ್ಲ’ ಎಂದು ಪ್ರಶ್ನೆ ಕೇಳಿದರು.
ಇದು ಉತ್ತರ ಕನ್ನಡ ಜಿಲ್ಲೆಯ ಜನಕ್ಕೆ ತೀರಾ ಅಗತ್ಯವಾಗಿದ್ದ, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಆಸ್ಪತ್ರೆ ಕುರಿತ ಕೋರಿಕೆಯಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಯಾರಿಗಾದರೂ ಹೆರಿಗೆ ನೋವು ಕಾಣಿಸಿಕೊಂಡರೆ, ದೂರದ ಧಾರವಾಡ, ಬೆಳಗಾವಿಗೆ ಹೋಗಬೇಕಾಗಿತ್ತು. ರಸ್ತೆಗಳಿಲ್ಲದ ಕಾರಣ, ಇರುವ ಗುಂಡಿ ರಸ್ತೆಗಳಲ್ಲಿಯೇ ಹಲವರ ಹೆರಿಗೆಯಾಗಿತ್ತು. ಸಾವು-ನೋವು ಸಂಭವಿಸಿತ್ತು. ಹಾಗಾಗಿ ಅದು ಅಲ್ಲಿಯ ಜನಕ್ಕೆ ಭಾರೀ ಸಮಸ್ಯೆಯಾಗಿತ್ತು. ಸಮಾಜದ ಪರವಾಗಿ ಪತ್ರಕರ್ತೆ ಎತ್ತಿದ ಜವಾಬ್ದಾರಿಯುತ ಪ್ರಶ್ನೆಯಾಗಿತ್ತು.
ಆದರೆ, 78ರ ಹರೆಯದ ದೇಶಪಾಂಡೆಯವರು- ಸಮಾಜದಲ್ಲಿರುವ ಹೆಣ್ಣುಮಕ್ಕಳ ಮೂಲಭೂತ ಸೌಲಭ್ಯದ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ ಉತ್ತರಿಸಬೇಕಾದವರು- ಕಣ್ಣು ಮಿಟುಕಿಸುತ್ತ ‘ನಿಂದೇನು ಹೆರಿಗೆ ಇದ್ದರೆ ಹೇಳು, ಮಾಡಸ್ತೀನಿ’ ಎಂದರು. ಸುತ್ತ ಇದ್ದ ಶಾಸಕರ ಹಿಂಬಾಲಕರು, ಅಭಿಮಾನಿಗಳು, ಪಕ್ಷದ ಪುಢಾರಿಗಳು ನಕ್ಕರು. ಮಾತು ತೇಲಿಸಿ, ಮತ್ತೊಮ್ಮೆ ಜನರಿಂದ ತಪ್ಪಿಸಿಕೊಂಡು ಹೋಗಿಯೇಬಿಟ್ಟರು.
ಇದನ್ನು ಓದಿದ್ದೀರಾ?: ದಿಕ್ಕು ತಪ್ಪಿಸುವ ದೃಶ್ಯಮಾಧ್ಯಮಗಳು ಮತ್ತು ಧರ್ಮಯಾತ್ರೆಗಳು
ದೇಶಪಾಂಡೆಯವರು ಗೌಡ ಸಾರಸ್ವತ ಬ್ರಾಹ್ಮಣ ಕೋಮಿಗೆ ಸೇರಿದ ವ್ಯಕ್ತಿ. ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವಿರುವ ವ್ಯಕ್ತಿ. ವಿದ್ಯೆ, ಬುದ್ಧಿ ಮತ್ತು ಪದವಿಗಳನ್ನು ಪಡೆದ ವ್ಯಕ್ತಿ. ವಯಸ್ಸಾದ ಹಿರಿಯ ವ್ಯಕ್ತಿಯಿಂದ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಕೊಳಕು ಮತ್ತು ಅಸಹ್ಯಕರ ಮಾತುಗಳು ಬರುತ್ತವೆಂದರೆ, ಆತ ಅನಾಗರಿಕ ಎಂದೇ ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಸಭ್ಯತೆ ಮತ್ತು ಸಂಯಮ ಮರೆತ ಶಾಸಕರನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಾಣಬೇಕಾಗಿದೆ.
ದೇಶಪಾಂಡೆಯವರು ಆಡಿದ ಮಾತು ಈಗ ವಿವಾದವಾಗಿದೆ. ಈ ದುರ್ವರ್ತನೆಯ ಬಗ್ಗೆ ಎಲ್ಲ ಕಡೆಯಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಕ್ಷಮೆಯಾಚಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಅವರು ಕ್ಷಮೆ ಕೇಳಬಹುದು, ಬಿಡಬಹುದು. ಆದರೆ, ಶಾಸಕರಾಗುತ್ತಿದ್ದಂತೆಯೇ ಬೆಂಗಳೂರಿಗೆ ವಲಸೆ ಹೋಗುವ ಇಂತಹವರನ್ನು ಸ್ಥಳೀಯರು ಮೊದಲು ತಿರಸ್ಕರಿಸಬೇಕು.
ಚುನಾಯಿತ ಪ್ರತಿನಿಧಿಗಳು ಕ್ಷೇತ್ರದಲ್ಲಿಯೇ ವಾಸವಿದ್ದು, ಜನರ ಕಷ್ಟ-ಸುಖಗಳಿಗೆ ಆಗಬೇಕು. ಅವರ ಮನೆಯ ಹೆಣ್ಣುಮಕ್ಕಳು- ಗರ್ಭಿಣಿ ಸ್ತ್ರೀಯರು- ಅದೇ ಗುಂಡಿ ರಸ್ತೆಗಳಲ್ಲಿ ಓಡಾಡಬೇಕು. ಜನರ ಕಷ್ಟಗಳನ್ನು ಅವರೂ ಅನುಭವಿಸುವಂತಾಗಬೇಕು. ಆಗ, ಶಾಸಕರು ಬುದ್ಧಿ ಕಲಿಯುತ್ತಾರೆ. ಕಲಿಯದಿದ್ದರೆ ಕಲಿಸುವ ಕೆಲಸವನ್ನು ಜನ ಮಾಡಬೇಕಾಗುತ್ತದೆ.
