ಜಿಲ್ಲೆಯ ಮಸ್ಕಿ ತಾಲೂಕಿನ ಗೌಡನಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನಲ್ಲಿ ಸಮರ್ಪಕವಾದ ಸ್ಮಶಾನ ಭೂಮಿ ಇಲ್ಲದ ಕಾರಣದಿಂದ ಗ್ರಾಮಸ್ಥರು ಅಂತ್ಯ ಸಂಸ್ಕಾರದಲ್ಲಿ ಪರದಾಡುವಂತಾಗಿದೆ.
ಗೌಡನಬಾವಿ ಗ್ರಾಮದಲ್ಲಿ 1200 ಮತದಾರರು ಇದ್ದರೂ, ಎಲ್ಲ ಜನಾಂಗಕ್ಕೂ ಬಳಸಬಹುದಾದ ಶಾಶ್ವತ ಸ್ಮಶಾನ ಭೂಮಿ ಇಲ್ಲ. ಪ್ರಸ್ತುತ ಅರೆ ಎಕರೆ ಜಮೀನು ಸ್ಮಶಾನವಾಗಿ ಬಳಕೆಯಾಗುತ್ತಿದ್ದು, ಅದು ಹಲವು ವರ್ಷಗಳಿಂದ ತುಂಬಿ ಹೋಗಿರುವಂತಾಗಿದೆ. ಇದರಿಂದ ಸಾಗರ ಕ್ಯಾಂಪ್ ಹಾಗೂ ನಾಗರೆಡ್ಡಿ ಕ್ಯಾಂಪಿನ ನಿವಾಸಿಗಳು ಮೃತದೇಹಗಳನ್ನು ಹೊತ್ತು ಸುಮಾರು ಒಂದು ಕಿಲೋಮೀಟರ್ ದೂರದ ಗದ್ದೆಗಳಲ್ಲಿ ಸಾಗಿಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.

ಮತ್ತೊಂದೆಡೆ, ಭತ್ತ ಬೆಳೆದ ರೈತರು ತಮ್ಮ ಗದ್ದೆಗಳ ಮೂಲಕ ಶವಯಾತ್ರೆಗೆ ದಾರಿ ಬಿಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಗ್ರಾಮದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಸರ್ಕಾರ ಪ್ರತಿಯೊಂದು ಗ್ರಾಮಕ್ಕೂ ಸ್ವಂತ ಸ್ಮಶಾನ ಭೂಮಿ ಒದಗಿಸಬೇಕೆಂದು ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಫಲಿತಾಂಶ ಕಾಣಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರು ವರ್ಷದಲ್ಲಿ 1,450 ಶಿಶು ಮರಣ: ಶಿಶು ಆರೈಕೆ ಘಟಕ ಸ್ಥಾಪನೆ ಯಾವಾಗ?
“ತಕ್ಷಣವೇ ಗ್ರಾಮಕ್ಕೆ ಶಾಶ್ವತ ಸ್ಮಶಾನ ಭೂಮಿ ಹಾಗೂ ಶವಯಾತ್ರೆಗೆ ಸೂಕ್ತ ದಾರಿ ಒದಗಿಸಬೇಕು,” ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಬಣ) ಮುಖಂಡ ವಿಜಯಕುಮಾರ್ ಸಾಗರ ಕ್ಯಾಂಪ್, ಮುತ್ತುರಾಜ್ ಸಾಗರ ಹಾಗೂ ಗ್ರಾಮಸ್ಥರು ಆಗ್ರಹಿಸಿದರು.
