ಧಾರವಾಡದ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನಲ್ಲಿ ಪೂರೈಸಲಾಗುತ್ತಿರುವ ಆಹಾರದ ಪ್ರಮಾಣ, ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ಮೇರೆಗೆ ಅಧಿಕಾರಿಗಳ ತಂಡವು ಉಪಹಾರ ಸೇವಿಸುವ ಮೂಲಕ ಆಹಾರದ ಪ್ರಮಾಣ, ಆಹಾರದ ಗುಣಮಟ್ಟ ಕುರಿತು ಪರಿಶೀಲನೆ ಮಾಡಿದರು.
ಈ ವೇಳೆ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಮಾತನಾಡಿ, “ಸಾರ್ವಜನಿಕ ದೂರುಗಳ ಹಿನ್ನಲೆ ಈಗಾಗಲೇ ನವಲಗುಂದ ಪುರಸಭೆಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಮರ್ಪಕ ಉತ್ತರ ನೀಡದಿದ್ದಲ್ಲಿ ಮತ್ತು ಕ್ಯಾಂಟೀನ್‍ಗಳಿಗೆ ವಿಧಿಸಿರುವ ನಿಯಮಗಳನ್ನು ಪಾಲಿಸದಿದ್ದಲ್ಲಿ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಇಡ್ಲಿ, ಅವಲಕ್ಕಿ ಸೇವಿಸಿದ ಅಧಿಕಾರಿಗಳು ಸ್ವಾದ ಹಾಗೂ ಗುಣಮಟ್ಟ ಮತ್ತು ಪ್ರಮಾಣದ ಪರಿಶೀಲನೆ ಮಾಡಿದರು. ಇಡ್ಲಿ, ಸಾಂಬಾರು, ಅವಲಕ್ಕಿ, ಚಟ್ನಿ ಕುರಿತ ದೂರುಗಳ ಬಗ್ಗೆ ಕ್ಯಾಂಟೀನ್ ಸಿಬ್ಬಂದಿಗಳನ್ನು ವಿಚಾರಿಸಿದರು. ಉಪಹಾರ ಸೇವನೆಗೆ ಆಗಮಿಸಿದ್ದ ಸಾರ್ವಜನಿಕರನ್ನು, ಮಾಧ್ಯಮ ಪ್ರತಿನಿಧಿಗಳನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಿದರು.
ಇಂದಿರಾ ಕ್ಯಾಂಟೀನ್‍ನಲ್ಲಿ ಇಟ್ಟಿರುವ ದೂರು ದಾಖಲೆ ರಿಜಿಸ್ಟರ್‌ನಲ್ಲಿ, ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ದಾಖಲಿಸಲು ಮನವಿ ಮಾಡಿದರು. ಸಾರ್ಜನಿಕರ ಅಭಿಪ್ರಾಯಗಳನ್ನು ಅವಲೋಕಿಸಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಪೂರೈಸುವ ಆಹಾರದ ಗುಣಮಟ್ಟ ಚನ್ನಾಗಿರಬೇಕು. ಕ್ಯಾಂಟೀನ್‌ನಲ್ಲಿ ತಯಾರಿಸಲಾಗುತ್ತಿರುವ ಆಹಾರದ ಗುಣಮಟ್ಟ, ಪೂರೈಸಲಾಗುತ್ತಿರುವ ಪ್ರಮಾಣ ಹಾಗೂ ಸ್ವಚ್ಛತೆಯ ಕುರಿತು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ಅವುಗಳನ್ನು ಪಾಲಿಸಲು ಸೂಚನೆ ನೀಡಿದರು.
ಇದನ್ನೂ ಓದಿ: ಧಾರವಾಡ | ಎಸ್‌ಐಆರ್ ಕೈಬಿಡಲು ಚುನಾವಣಾ ಆಯೋಗಕ್ಕೆ ಎಸ್‌ಯುಸಿಐ ಒತ್ತಾಯ
ಸರ್ಕಾರವು ನಿಗದಿಪಡಿಸಿರುವ ಪ್ರಮಾಣದಲ್ಲಿ ಆಹಾರ ಪೂರೈಕೆಯಾಗುತ್ತಿರುವ ಕುರಿತು ಪರಿಶೀಲಿಸಿ, ಪ್ರತಿದಿನ ಕಡ್ಡಾಯವಾಗಿ ನಿಗದಿತ ಪ್ರಮಾಣದಲ್ಲಿ ಆಹಾರಪೂರೈಸಲು. ಹಾಗೂ ಕ್ಯಾಂಟೀನ್ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಸಲು ಸೂಚಿಸಿ, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕ್ರಮಜರುಗಿಸಲಾಗುವುದೆಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃಧ್ದಿ ಕೋಶದ ಕಾರ್ಯನಿರ್ವಾಹಕ ಅಭಿಯಂತರ ಗವಿಸಿದ್ದಪ್ಪ ಗೊನಾಳ, ನವಲಗುಂದ ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಆರೋಗ್ಯ ನಿರೀಕ್ಷಕ ಅಕ್ಕಮಹಾದೇವಿ ಬಣಗಾರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.