ಮೈಸೂರು ಜಿಲ್ಲಾ ಸಮಿತಿಯು, ನಗರದ ಗಾಂಧಿ ವೃತ್ತದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕರೆಯ ಮೇರೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಅಶ್ಲೀಲತೆ, ಮದ್ಯಪಾನ ಹಾವಳಿಯ ವಿರುದ್ಧ ದೇಶ ವ್ಯಾಪಿ ಪ್ರತಿಭಟನೆ ನಡೆಸಿದರು.
ಸೆಪ್ಟೆಂಬರ್. 1 ರಿಂದ 7 ರವರೆಗೆ ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಸಮಾನ ವೇತನವನ್ನು ಖಾತ್ರಿಪಡಿಸಿ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನಾ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ , ಇಂದು ಕರ್ನಾಟಕ ರಾಜ್ಯವ್ಯಾಪಿ ಪ್ರತಿಭಟನೆ, ಪ್ರದರ್ಶನಗಳು ನಡೆಯಲಿದ್ದು, ಜಸ್ಟಿಸ್ ಫಾರ್ ಅಭಯ, ಮಹಿಳೆ ಮತ್ತು ಮಕ್ಕಳ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳಿಗೆ ಕೊನೆ ಹಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಅಸಂಘಟಿತ ಕಾರ್ಮಿಕರಿಗೆ ಹಾಗೂ ಸ್ಕೀಮ್ ವರ್ಕರ್ಸ್ ಗೆ ಗೌರವಯುತ ಜೀವನ ನಡೆಸಲು ಬೇಕಾದಂತಹ ವೇತನವನ್ನು ಖಾತ್ರಿಪಡಿಸಬೇಕು.
ಶಿಕ್ಷಣದ ಕೋಮುವಾದೀಕರಣ ಹಾಗೂ ಖಾಸಗೀಕರಣವನ್ನು ನಿಲ್ಲಿಸಿ, ಹೆಣ್ಣು ಮಕ್ಕಳ, ಮಕ್ಕಳ ಸಾಗಾಣಿಕೆಯನ್ನು ನಿಲ್ಲಿಸಿ, ಮದ್ಯಪಾನ, ಮಾದಕ ವಸ್ತು ಹಾಗೂ ಅಶ್ಲೀಲ ಜಾಲತಾಣಗಳನ್ನು ನಿಷೇಧಿಸಿ ಎಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟು ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿಗಳಾದ ಆಸಿಯಾ ಬೇಗಂ ‘ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಇಂದಿಗೂ ಯಾವುದೇ ಭದ್ರತೆ ಇಲ್ಲದಂತಾಗಿದೆ. ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಸಾವುಗಳು ಮುಂತಾದ ಪ್ರಕರಣಗಳು ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಪರವಾಗಿ ಕೆಲವು ಯೋಜನೆಗಳನ್ನು ತಂದು, ಆ ಮೂಲಕ ತಾವು ಸ್ತ್ರೀಪರ ಕಾಳಜಿ ಎಂಬಂತೆ ಮೇಲ್ನೋಟಕ್ಕೆ ಪ್ರದರ್ಶಿಸುತ್ತಿದ್ದಾರೆ.
ಆದರೆ. ವಾಸ್ತವದಲ್ಲಿ ಇವರ್ಯಾರಿಗೂ ಯಾವುದೇ ಕಾಳಜಿ ಇಲ್ಲ. ಇದಕ್ಕೆಲ್ಲ ಇಂಬು ಕೊಡುವಂತೆ ಇತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾದಂತೆ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 80 ಸಾವಿರ ಬಾಲ ಗರ್ಭಿಣಿಯರು ಕಂಡು ಬಂದಿರುವುದು. ತಡೆಯೇ ಇಲ್ಲದಂತೆ ದಿನೇ, ದಿನೇ ಹೆಚ್ಚುತ್ತಿರುವ ಸ್ತ್ರೀ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಸಾವುಗಳು, ಕಳ್ಳ ಸಾಗಾಣಿಕೆ, ಅಶ್ಲೀಲ ಸಿನಿಮಾ -ಸಾಹಿತ್ಯಗಳಿಗೆ ಕಡಿವಾಣ ಹಾಕದೆ ಇರುವುದು.
ಮದ್ಯಪಾನ ಅಂಗಡಿ, ಮುಂಗಟ್ಟುಗಳಲ್ಲಿ ಸಿಗುತ್ತಿದ್ದು, ನಿಷೇಧಿಸುವ ಬದಲು, ಪರವಾನಗಿಯನ್ನು ಕೊಡುತ್ತಿರುವುದೇ ಸಾಕ್ಷಿ ಯಾಗಿದೆ. ಮಹಿಳೆಯರ ಮೇಲಿನ ಸಮಸ್ಯೆಗಳ ವಿರುದ್ಧ ಎಲ್ಲಾ ಮಹಿಳೆಯರು ಒಂದಾಗಿ ಹೋರಾಡುವುದೊಂದೇ ನಮ್ಮೆದುರುಗಿರುವ ದಾರಿ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ದಸರಾ | ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಡಳಿತದಿಂದ ಆಹ್ವಾನ
ಕಾರ್ಯದರ್ಶಿ ಜಿ. ಪುಷ್ಪ, ಜಿಲ್ಲಾ ಅಧ್ಯಕ್ಷೆ ನಳಿನ, ಉಪಾಧ್ಯಕ್ಷೆ ಜಿ. ಎಸ್.ಸೀಮಾ , ಸದಸ್ಯರುಗಳಾದ ಪದ್ಮ, ಗಾಯಿತ್ರಿ, ತುಳಸಿ , ಸುಮಾ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.