ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?

Date:

Advertisements

ತಮ್ಮ ತಾಯಿಯನ್ನು ನಿಂದಿಸಿರುವುದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಪ್ರಧಾನಿ ಮೋದಿ ಅವರು ಹೇಳಿರುವುದು ಪರಸ್ಪರ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ. 2004ರಲ್ಲಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಅಡ್ವಾಣಿ ಅವರ ‘ಭಾರತ್‌ ಉದಯ ಜಾತ್ರೆ’ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಜರ್ಸಿ ಹಸು ಎಂದು ಅತ್ಯಂತ ಕೀಳಾಗಿ ಟೀಕಿಸಿದ್ದರು. ಮೋದಿಯವರ ಇಂತಹ ಹಲವು ಸ್ತ್ರೀ ನಿಂದನೆಯ ಹೇಳಿಕೆಗಳು ಈಗ ಮುನ್ನೆಲೆಗೆ ಬಂದಿವೆ.

ಬಿಹಾರದಲ್ಲಿ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಎರಡು ವಾರಗಳ ಕಾಲ ಮತ ಕಳ್ಳತನದ ವಿರುದ್ಧ ನಡೆದ ರ್‍ಯಾಲಿಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಯವರ ತಾಯಿಯನ್ನು ಅವಹೇಳನ ಮಾಡಿದ್ದಾನೆ ಎಂಬ ವಿಚಾರವನ್ನು ಮೋದಿಯವರು ಭಾವನಾತ್ಮಕಗೊಳಿಸಿರುವುದು ಆಕಾಶ ನೋಡಿ ಉಗುಳಿದಂತಾಗಿದೆ. ಮೋದಿಯವರು ಹಿಂದೆ ವಿಪಕ್ಷಗಳ ನಾಯಕಿಯರನ್ನು ನಿಂದಿಸಿದ್ದ ಹೇಳಿಕೆಗಳ ತುಣುಕು ಮೇಲೆದ್ದು ಬಂದು ಅವರನ್ನೇ ಚುಚ್ಚುವಂತಾಗಿದೆ. ಮೋದಿಯವರನ್ನು ನಿಂದಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್‌ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿರುವುದು ವಾಸ್ತವ. ಈ ಯಾತ್ರೆಯನ್ನು ತಡೆಯುವುದು ಬಿಜೆಪಿ ಬೆಂಬಲದೊಂದಿದೆ ಅಧಿಕಾರ ನಡೆಸುತ್ತಿರುವ ನಿತೀಶ್‌ಕುಮಾರ್‌ ಸರ್ಕಾರಕ್ಕೂ ಸಾಧ್ಯವಾಗಿಲ್ಲ ಎಂಬುದೂ ಅಷ್ಟೇ ನಿಜ. ಇವೆಲ್ಲದರ ಮಧ್ಯೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ನಿಂದಿಸಿದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಾನು ಕ್ಷಮಿಸಿದರೂ ಬಿಹಾರದ ಜನತೆ ಕ್ಷಮಿಸಲ್ಲ ಎಂದಿರುವುದು ಪರಸ್ಪರ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ರಾಹುಲ್‌ ಗಾಂಧಿ ಅವರಾಗಲಿ, ತೇಜಸ್ವಿ ಯಾದವ್‌ ಅವರಾಗಲಿ, ಉಭಯ ಪಕ್ಷಗಳ ಬೇರೆ ನಾಯಕರಾಗಲಿ ಮೋದಿಯವರನ್ನು ನಿಂದಿಸಿಲ್ಲ. ಆರೋಪಿಯನ್ನು ಬಂಧಿಸಿದ ಮೇಲೂ  ಮೋದಿಯವರು ಇದನ್ನು ಚುನಾವಣಾ ವಿಚಾರವಾಗಿ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ.

ಮೋದಿಯವರ ತಾಯಿಯನ್ನು ನಿಂದಿಸಿರುವುದರ ವಿರುದ್ಧ ಗುರುವಾರ (ಸೆ.4) ಬಿಹಾರದಲ್ಲಿ ಬಿಜೆಪಿ ಬಂದ್‌ಗೆ ಕರೆ ಕೊಟ್ಟಿತ್ತು. ಅದಕ್ಕೆ ಅಷ್ಟೇನೂ ಜನ ಬೆಂಬಲ ಸಿಕ್ಕಿಲ್ಲ. ಬದಲಿಗೆ ಈ ಹಿಂದೆ ಮೋದಿಯವರು ಮುಖ್ಯಮಂತ್ರಿ, ಪ್ರಧಾನಿ ಸ್ಥಾನದಿಂದ ವಿಪಕ್ಷಗಳ ನಾಯಕಿಯರಿಗೆ ಹೇಗೆಲ್ಲ ಅವಮಾನಿಸಿದ್ರು ಎಂಬ ವಿಷಯ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ ಕೆಲವು ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೂ ಪ್ಯಾನಲಿಸ್ಟ್‌ಗಳು ಈ ಪ್ರಶ್ನೆಯನ್ನು ಕೇಳಿದ್ದಾರೆ. “ಇದು ನನ್ನ ತಾಯಿಗೆ ಆದ ಅವಮಾನವಲ್ಲ, ಇಡೀ ದೇಶದ ಮಹಿಳೆಯರಿಗೆ ಆದ ಅವಮಾನ” ಎಂದು ಮೋದಿ ಭಾವನಾತ್ಮಕವಾಗಿ ಮಾತನಾಡಿದ ಬೆನ್ನಲ್ಲೇ, ಮೋದಿಯವರಿಗೆ ಈಗ ಮಹಿಳೆಯರ ಗೌರವ ನೆನಪಾಗಿದೆಯೇ? ಸೋನಿಯಾ ಗಾಂಧಿ ಮಹಿಳೆಯಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಸಹಜವಾಗಿಯೇ ಬಂದಿದೆ.

ಹಿಂದೊಮ್ಮೆ ಚುನಾವಣಾ ಸಮಯದಲ್ಲಿ ಮೋದಿಯವರು ವಿಪಕ್ಷಗಳು ನನ್ನನ್ನು ಕೆಟ್ಟದಾಗಿ ಬೈಯ್ಯುತ್ತಿವೆ ಎಂದು ಹೇಳಿದ್ದರು. ಅದನ್ನು ಉಲ್ಲೇಖಿಸಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು, “ನನ್ನ ತಾಯಿಯನ್ನು ಹೇಗೆಲ್ಲ ಅವಮಾನಿಸಲಾಗುತ್ತಿದೆ ಎಂದು ಪಟ್ಟಿ ಮಾಡಲು ಹೊರಟರೆ ಒಂದು ನೋಟ್‌ ಬುಕ್‌ ಸಾಲದು” ಎಂದು ಮಾರ್ಮಿಕವಾಗಿ ಹೇಳಿದ್ದರು. 2004ರಲ್ಲಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಎಲ್‌. ಕೆ. ಅಡ್ವಾಣಿ ಅವರ ಭಾರತ್‌ ಉದಯ ಜಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಜರ್ಸಿ ಹಸು ಎಂದು ಅತ್ಯಂತ ಕೀಳಾಗಿ ಟೀಕಿಸಿದ್ದರು. 

2018ರ ಡಿಸೆಂಬರ್ 4ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮೋದಿ ಅವರು “ವಿಧವಾ ವೇತನ ಕಾಂಗ್ರೆಸ್‌ ವಿಧವೆಗೆ ಹೋಗುತ್ತಿದೆ” ಎಂದು ಲೇವಡಿ ಮಾಡಿದ್ದರು. ಅಲ್ಲಿ ಸೋನಿಯಾ ಅವರ ಹೆಸರೆತ್ತದಿದ್ದರೂ  ಅವರನ್ನು ಉದ್ದೇಶಿಸಿಯೇ ಹೇಳಿದ್ದರು ಎಂದು ಅರ್ಥೈಸಲಾಗಿದೆ. ಏಕೆಂದರೆ ವಿಧವೆ ಸೋನಿಯಾ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಧವೆಯರಿಗೆ ಪಿಂಚಣಿ ನೀಡುವ ಕಾಂಗ್ರೆಸ್‌ನ ಯೋಜನೆಯನ್ನು ಟೀಕಿಸುತ್ತಾ, “ಕಾಂಗ್ರೆಸ್‌ನ ಯಾವ ವಿಧವೆಯ ಖಾತೆಗೆ ಹಣ ಹೋಗುತ್ತಿತ್ತು?” ಎಂದು ಪ್ರಶ್ನಿಸಿದ್ದರು.

2021ರಲ್ಲಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಸಭೆಯ ವೇದಿಕೆಯಲ್ಲಿ ನಿಂತು, ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ “ದೀದೀ ಓ ದೀದೀ” ಎಂದು ಹುಡುಕಬೇಕಾಗುತ್ತದೆ ಎಂದು ಆಂಗಿಕ ಅಭಿನಯ ಮಾಡುತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗೇಲಿ ಮಾಡಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ನಕ್ಕಾಗ “ಸಾಕ್ಷಾತ್‌ ಶೂರ್ಪನಖಿಯನ್ನು ಕಂಡಂತಾಯ್ತು” ಎಂದು ಅವಮಾನಿಸಿದ್ರು. ಈಗ ಎನ್‌ಡಿಎ ಭಾಗವಾಗಿರುವ ನಿತೀಶ್‌ ಕುಮಾರ್‌ ಅವರ ಡಿಎನ್‌ಎ ಪರೀಕ್ಷಿಸಬೇಕು ಎಂದು ಹಿಂದೆ ಹೇಳಿದ್ದರು. ಇವೆಲ್ಲ ಮಹಿಳೆಯರಿಗೆ ಮಾಡಿದ ಅವಮಾನವಲ್ಲವೇ? ಈಗ ಯಾರೋ ಒಬ್ಬ ಅವಿವೇಕಿ ತಮ್ಮ ತಾಯಿಯನ್ನು ನಿಂದಿಸಿದ್ದು, ಇಡೀ ದೇಶದ ಹೆಣ್ಣುಮಕ್ಕಳಿಗೆ ಅವಮಾನಿಸಿದಂತೆ ಎಂದು ಭಾವಿಸಿದ್ದು ಅಚ್ಚರಿ ಮೂಡಿಸಿದೆ. ಹಾಗಿದ್ದರೆ ವಿಪಕ್ಷದ ನಾಯಕಿಯರಿಗೂ ಘನತೆ ಇಲ್ಲವೇ? ಅವರನ್ನೂ ತಮ್ಮ ತಾಯಿಯಂತೆಯೇ ಗೌರವಿಸುವ ವಿಶಾಲ ಹೃದಯ ಯಾಕಿಲ್ಲ? ಈ ವಿಷಯವನ್ನು ರಾಜಕೀಕರಣಗೊಳಿಸುತ್ತಿರುವ ಬಿಜೆಪಿ ನಾಯಕರು ಉತ್ತರಿಸಬೇಕಿದೆ.

ಬಿಜೆಪಿ ನಾಯಕ ಮತ್ತು ಜನತಾ ಪಾರ್ಟಿಯ ಮಾಜಿ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸೋನಿಯಾ ಗಾಂಧಿಯವರ ವಿರುದ್ಧ ದೀರ್ಘಕಾಲದಿಂದ ವಿವಿಧ ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ಅವರ ಭಾರತೀಯ ಪೌರತ್ವ, ಶಿಕ್ಷಣ ಮತ್ತು ವೈಯಕ್ತಿಕ ಹಿನ್ನೆಲೆಯ ಕುರಿತಾದ ಟೀಕೆಗಳು ಸೇರಿವೆ. 2017ರ ದಿ ಪ್ರಿಂಟ್ ಲೇಖನವು ಸ್ವಾಮಿ ಅವರು ಸೋನಿಯಾ ಗಾಂಧಿಯವರನ್ನು ʼವೇಟ್ರೆಸ್ʼ ಎಂದು ಮೊದಲು ಕರೆದವರು ಎಂದು ಉಲ್ಲೇಖಿಸಿದೆ. ಸ್ವಾಮಿಯವರ ಹೇಳಿಕೆ ಇಟ್ಟುಕೊಂಡು ಬಿಜೆಪಿಯ ಐಟಿ ಸೆಲ್‌ ಹಾಲಿವುಡ್‌ ನಟಿ ಒಬ್ಬರ ಚಿತ್ರಕ್ಕೆ ಸೋನಿಯಾ ಅವರ ಮುಖದ ಚಿತ್ರ ಅಂಟಿಸಿ ವಿಕೃತವಾಗಿ ಟ್ರೋಲ್‌ ಮಾಡಿದ್ದು ಇದೇ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ. ಎಂದಾದರೂ ಮೋದಿಯವರು ಈ ನಡವಳಿಕೆಯನ್ನು ಮಹಿಳಾ ವಿರೋಧಿ, ಮಹಿಳೆಯರ ಘನತೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಬುದ್ದಿ ಹೇಳಿದ್ದಾರೆಯೇ? ಈ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಸೊಸೆಯಾಗಿ, ಪ್ರಧಾನಿ ರಾಜೀವ್‌ ಗಾಂಧಿ ಪತ್ನಿಯಾಗಿ, ಪತಿಯ ನಿಧನದ ನಂತರವೂ ಈ ದೇಶದಲ್ಲೇ ಉಳಿದು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದ, ಈಗಲೂ ಸಂಸದರಾಗಿರುವ ಸೋನಿಯಾರನ್ನು ಇನ್ನೂ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಈ ದೇಶದ ಪ್ರಜೆ ಎಂದು ಒಪ್ಪಿಕೊಳ್ಳುತ್ತಿಲ್ಲ. ಸೋನಿಯಾರನ್ನು ವಿದೇಶಿ ಮಹಿಳೆ, ಇಟಲಿ ಮಾತೆ ಎಂದು ಹಂಗಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ಪಪ್ಪು ಎಂದು ಬಿಂಬಿಸಲು ನೂರಾರು ಕೋಟಿ ಖರ್ಚು ಮಾಡಿ ಐಟಿ ಸೆಲ್‌ನಲ್ಲಿ ತಿರುಚಿದ ಸುಳ್ಳು ಸುದ್ದಿ, ಫೋಟೋ, ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಬಿಜೆಪಿ ಮೇಲಿದೆ. ಇದಕ್ಕೆ ಮೋದಿಯವರು ಉತ್ತರಿಸುವರೇ ?

ಬಿಜೆಪಿಯ ಬೆಂಬಲಿಗರು ಎಪ್ಪತ್ತು ವರ್ಷದ ಹಿರಿಯ ಸಂಸದೆ ಸೋನಿಯಾರನ್ನು ಈಗಲೂ ಬಾರ್ ಡಾನ್ಸರ್ ಎಂದು ನಿಂದಿಸುತ್ತಿದ್ದಾರೆ. ಆ ಕಾರಣಕ್ಕೆ ಸೋನಿಯಾ ಆಗಲಿ, ಅವರ ಮಕ್ಕಳಾದ ರಾಹುಲ್‌, ಪ್ರಿಯಾಂಕಾ ಅವರಾಗಲಿ ಎಲ್ಲಿಯೂ ಭಾವನಾತ್ಮಕವಾಗಿ ಮಾತಾಡಿಲ್ಲ. ಅದನ್ನು ಚುನಾವಣೆಯಲ್ಲಿ ಎದುರಾಳಿಯನ್ನು ಮಣಿಸುವ ದಾಳವಾಗಿ ಬಳಸಿಲ್ಲ. ಮೋದಿಯವರು ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯಾಗಿ ಇಂತಹ ವೈಯಕ್ತಿಕ ದಾಳಿಗಳನ್ನು ಎದುರಿಸುವ ಎದೆಗಾರಿಕೆ ಇಟ್ಟುಕೊಂಡು ಸಮಚಿತ್ತದಿಂದ ವರ್ತಿಸುವ ಅಗತ್ಯವಿದೆ. ಮಹಿಳೆಯರ ಘನತೆ ಕಳೆಯುವ ಹೇಳಿಕೆ ನೀಡುವುದನ್ನು ತಾವೂ ನಿಲ್ಲಿಸಬೇಕು. ತಮ್ಮ ಅನುಯಾಯಿಗಳಿಗೂ ಬುದ್ದಿ ಹೇಳಬೇಕು. ಆಗ ಇಂತಹ ಪ್ರಶ್ನೆಗಳನ್ನು ಎದುರಿಸುವ ಸಂದರ್ಭ ಎದುರಾಗದು. ರಾಜಕಾರಣಿ, ಸಾಮಾನ್ಯ ಪ್ರಜೆ, ಯಾರೇ ಆಗಲಿ ಮಹಿಳೆಯರನ್ನು ಕೇವಲವಾಗಿ ನಿಂದಿಸುವುದು ಖಂಡನಾರ್ಹ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X