ಭೋವಿ ಅಭಿವೃದ್ಧಿ ನಿಗಮದೊಳಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ರಾಜೀನಾಮೆ ಪತ್ರ ಬರೆದಿರುವ ಅವರು, “ನನ್ನ ಅಧಿಕಾರಾವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ನಿಗಮದ ಮೂಲಕ ಕಾರ್ಯಗತಗೊಳಿಸಿದ್ದೇನೆ. ನನ್ನ ಅವಧಿಯಲ್ಲಿ ನಿಗಮದಲ್ಲಿ ಯಾವುದೇ ಆಕ್ರಮಗಳು ನಡೆದಿರುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಅಕ್ರಮಗಳ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದು ಸರಿಯಷ್ಟೆ ನಿಗಮದಲ್ಲಿ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಕೆಲವು ಅನುಚಿತ ವ್ಯವಹಾರ ಮತ್ತು ಅಶಿಸ್ತನ್ನು ನಾನು ಪತ್ತೆ ಹಚ್ಚಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಕ್ಕೇ ನನ್ನ ವಿರುದ್ಧ ಪಿತೂರಿ ನಡೆದು ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ” ಎಂದು ಹೇಳಿದ್ದಾರೆ.
“ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧದ ಅಗತ್ಯ ಕ್ರಮಕ್ಕೆ ತಮ್ಮಲ್ಲಿ ವಿನಂತಿಸುತ್ತೇನೆ. ಸೈಬರ್ ಪೊಲೀಸರು ಮತ್ತು ಎಫ್‌ಎಸ್‌ಎಲ್ ತಂಡದಿಂದ ತನಿಖೆ ನಡೆಸಿ ತಾಂತ್ರಿಕ ಸಲಕರಣೆಗಳನ್ನು ಬಳಸಿ ನನ್ನ ತೇಜೋವಧೆಗೆ ವೀಡಿಯೋ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ವಿನಂತಿಸುತ್ತೇನೆ” ಎಂದು ತಿಳಿಸಿದ್ದಾರೆ.
“ನಾನು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ ತಮಗೆ ಹಾಗೂ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ.
ನಾನು ಶಿವಮೊಗ್ಗ ನಿವಾಸಿಯಾಗಿರುವುದರಿಂದ, ನಿಗಮದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನನ್ನ ರಾಜಿನಾಮೆಯನ್ನು ನೀಡುತ್ತಿದ್ದೇನೆ. ದಯಮಾಡಿ ಅಂಗೀಕರಿಸಿ” ಎಂದು ಮನವಿ ಮಾಡಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ 2024 ಆಗಸ್ಟ್ನಲ್ಲಿ ಕೇಳಿಬಂದಿತ್ತು. ಬೆಂಗಳೂರಿನಲ್ಲಿರುವ ನಿಗಮದ ಕಚೇರಿ ಮೇಲೆ ಸಿಐಡಿ (CID) ದಾಳಿ ನಡೆಸಿತ್ತು. 2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವ ಆಮಿಷವೊಡ್ಡಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಆಧಾರದಲ್ಲಿ ಸಿಐಡಿ ದಾಳಿ ನಡೆದಿತ್ತು. ಆ ವಿಚಾರದಲ್ಲಿ ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮೇಲೆಯೇ ಕಮಿಷನ್ ಆರೋಪ ಕೇಳಿಬಂದಿದೆ.
ಯೋಜನೆಗಳಡಿ ಸವಲತ್ತು ಒದಗಿಸಿಕೊಡಲು ರವಿಕುಮಾರ್ ಶೇಕಡ 60 ರಷ್ಟು ಲಂಚ ಕೇಳುತ್ತಿದ್ದಾರೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಮೌರ್ಯ ಗಂಭೀರ ಆರೋಗ್ಯ ಮಾಡಿದ್ದರು. 2021-22 ರಲ್ಲಿ ನಿಗಮದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ 85 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು.
ಪ್ರಕರಣ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು.