ಹಾಸನ ಜಿಲ್ಲೆಯ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಜನ ಸಾಮಾನ್ಯರ ಸಹಭಾಗಿತ್ವದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ನಡೆದ ʼಜನಾರೋಗ್ಯಕ್ಕಾಗಿ ಜನಾಂದೋಲನʼಕ್ಕೆ ಒಂದು ಹಂತದಲ್ಲಿ ಫಲ ದೊರೆತಂತಾಗಿದ್ದು, ಸಚಿವ ಕೃಷ್ಣ ಭೈರೇಗೌಡರು ತಮ್ಮ ಭದ್ಧತೆಯನ್ನು ಸಾಬೀತುಪಡಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ ಅರ್ಧಕ್ಕೆ ನಿಂತುಹೋಗಿದ್ದ ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಜನಸಾಮಾನ್ಯರಿಗೆ ಆರೋಗ್ಯದ ಸ್ವಾತಂತ್ರ್ಯ ನೀಡಬೇಕೆಂದು ಜಿಲ್ಲೆಯ ಜನರೊಂದಿಗೆ ಜನಪರ ಚಳವಳಿಗಳ ಒಕ್ಕೂಟ ನಡೆಸಿದ ಆಂದೋಲನದ ಭಾಗವಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ₹63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸರ್ಕಾರ ಕೃಷ್ಣ ಬೈರೇಗೌಡರ ಮುಖಾಂತರ ಜಿಲ್ಲೆಯ ಜನತೆಗೆ ಆರೋಗ್ಯದ ಸ್ವಾತಂತ್ರ್ಯವನ್ನು ನೀಡುವ ಮನಸ್ಸು ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು, “ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ₹63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆಯಲ್ಲಿ ಇಂದು ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ತಿಳಿಸಲು ಜಿಲ್ಲಾ ಉಸ್ತುವಾರಿ ಸಚಿವನಾಗಿ ನನಗೆ ಸಂತೋಷವಾಗುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

“ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಉದ್ದೇಶಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಸ್ಥಾಪನೆಯನ್ನು ಈ ಹಿಂದೆಯೇ ಆರಂಭಿಸಲಾಗಿತ್ತು. ಆದರೆ ಅಗತ್ಯ ಅನುದಾನ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಬಂದಂತಹ ರೋಗಿಗಳನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ವಿಚಾರವನ್ನು ಹಾಸನ ಜಿಲ್ಲೆ ಸಂಸದರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದರು” ಎಂದು ಹೇಳಿದರು.
“ಈ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ನಾನು ಬೆಂಗಳೂರಿಗೆ ಮರಳಿದ ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಒದಗಿಸುವುದು ಈಗಿನ ತುರ್ತು ಅವಶ್ಯಕವಾಗಿರುತ್ತದೆ. ಹೀಗಾಗಿ ಇದನ್ನು ಪೂರೈಸಲು ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ನಮ್ಮ ಮನವಿಗೆ ಸ್ಪಂದಿಸಿ, ಈ ವಿಚಾರಕ್ಕೆ ಪರಿಹಾರ ನೀಡಲು ಸೂಚಿಸಿದ್ದಾರೆ” ಎಂದರು.
“ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಮೊತ್ತದ ಮಂಜೂರಾತಿಗಾಗಿ ಸದರಿ ವಿಷಯವನ್ನು ಇಂದು ಸಚಿವ ಸಂಪುಟದ ಮುಂದೆ ತರಲಾಗಿತ್ತು. ಅದರಂತೆ ಈ ಬಗ್ಗೆ ಚರ್ಚೆ ನಡೆಸಿದ ಸಂಪುಟ ಸಭೆ ₹63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿರುವುದು ಸಂತಸದ ವಿಚಾರ. ಶೀಘ್ರದಲ್ಲೇ ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆಂದು ನಾನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ” ಎಂದು ಮಾಹಿತಿ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ತುಮಕೂರಿನಲ್ಲಿ ಈದ್ ಮಿಲಾದ್ ಸಂಭ್ರಮ : ಬೃಹತ್ ಮೆರವಣಿಗೆ
“ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಹಾಸನ ಜಿಲ್ಲೆಯ ಜನರ ಪರವಾಗಿ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಹಾಗೂ ಕೃಷ್ಣ ಬೈರೇಗೌಡ ಕಾರ್ಯವೈಖರಿ ಹಾಗೂ ಬದ್ಧತೆಯ ಬಗ್ಗೆ ಜನಪರ ಚಳವಳಿಗಳ ಒಕ್ಕೂಟ ಹಾಗೂ ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಆರೋಗ್ಯದ ಸ್ವಾತಂತ್ರ್ಯ ಜಿಲ್ಲೆಯ ಜನತೆಗೆ ಸಿಗಲಿ ಎಂದಿದ್ದಾರೆ.