ಕೊಡಗು ಜಿಲ್ಲೆ, ಮಡಿಕೇರಿ ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ವತಿಯಿಂದ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದರು.
“ಶಿಕ್ಷಕರಿಲ್ಲದಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿರುತ್ತಿರಲಿಲ್ಲ. ಸಮಾಜದ ಸ್ಥಿತಿಗತಿಗಳು ಬೆರಡೆ ಸಾಗುತ್ತಿತ್ತು. ಶಿಕ್ಷಕರ ಸೇವೆಯಿಂದ ಅಂತಹ ಅಪಾಯಗಳು ದೂರ ಸರಿದು ಒಳಿತಿನ ಕಡೆ ಸಾಗುವಂತಾಗಿದೆ. ಆದುದರಿಂದಲೇ, ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಸ್ಥಾನ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು”.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇಂತಹ ಪರಿಸ್ಥಿತಿಯ ಸುಧಾರಣೆಗಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಲು, ಶಾಲೆಗಳಲ್ಲಿ ಅನೇಕ ಬದಲಾವಣೆ ಹಾಗೂ ನೂತನ ಕಾರ್ಯಕ್ರಮಗಳನ್ನು ತರಲಾಗುತ್ತಿದೆ ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅದನ್ನು ಸರಿಪಡಿಸುವ ಭರವಸೆಯನ್ನು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಶಿಕ್ಷಕರುಗಳು ಸಹ ಒಟ್ಟಾಗಿ ಹೋರಾಟ ನಡೆಸಬೇಕು. ತಮಗೆ ದೊರಕಬೇಕಾದ ಪ್ರತಿಯೊಂದು ಸವಲತ್ತು ಪಡೆದುಕೊಳ್ಳಬೇಕು. ಹಾಗೆಯೇ, ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಸರ್ಕಾರಿ ಶಿಕ್ಷಕ, ಶಿಕ್ಷಣ ಮಹಾವಿದ್ಯಾಲಯ ಮೈಸೂರಿನ ಉಪನ್ಯಾಸಕರಾದ ಎಸ್. ಪಿ. ನಾಗರಾಜು ಮಾತನಾಡಿ “ಶಿಕ್ಷಕ, ಚಿಂತಕ, ಬರಹಗಾರ, ಭಾಷಣಕಾರ ಈ ರೀತಿಯಾಗಿ ತಯಾರು ಮಾಡಿದ ನನ್ನ ಶಿಕ್ಷಕರುಗಳಿಗೆ ವಂದಿಸಬೇಕಾದರೆ ನನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಬೇಕು. ಆಗಲೇ ನನ್ನ ಜನ್ಮಕ್ಕೊಂದು ಸಾರ್ಥಕ ಹಾಗೂ ಅರ್ಥ ಸಿಗುವುದು ಎಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಿಳಿಸಿದರು. ಅಂತಹ ನಿಸ್ವಾರ್ಥ ಮನಸ್ಸಿನ ವ್ಯಕ್ತಿ ಎಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಾತ್ರವೇ. ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆಯದೆ ಶಿಕ್ಷಕರುಗಳು ಆನ್ಲೈನ್ ನಲ್ಲಿ ಹಾಗೂ ಗೂಗಲ್ ನಲ್ಲಿ ಮಾಹಿತಿ ಪಡೆದು ಬೋಧಿಸುತ್ತಿದ್ದರು. ಶಾಲೆಯಲ್ಲಿ ಪಾಠ ಮಾಡುವುದಕ್ಕೂ ಮೊಬೈಲ್ ನಲ್ಲಿ ಕುಳಿತು ಪಾಠ ಮಾಡುವುದಕ್ಕೂ ಹೆಚ್ಚಿನ ವ್ಯತ್ಯಾಸವಿದೆ. ಎಂದಿಗೂ ಸಹ ಕೋರೋನದಂತ ಸಮಯ ಮರುಕಳಿಸಬಾರದು, ಕೊರೋನಾ ಸಮಯದಲ್ಲಿ ಶಿಕ್ಷಕರುಗಳಿಗೆ ಆದ ಕಷ್ಟವನ್ನು ಉಲ್ಲೇಖಿಸಿದರು”.
“ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಇದನ್ನು ಬಸವಣ್ಣ ತಿಳಿಸಿದರು. ಈ ರೀತಿಯಂತೆಯೇ ಶಿಕ್ಷಕರು ನಡೆಯಬೇಕು. ವಿದ್ಯಾರ್ಥಿಗಳನ್ನು ನಡೆಸಬೇಕು. ಅರಿವೇ ಗುರು, ನನಗೊಬ್ಬ ಗುರು, ನಿನಗೊಬ್ಬ ಗುರು ಪ್ರತಿಯೊಬ್ಬರಲ್ಲಿಯೂ ಗುರುವಿದ್ದಾನೆ. ಒಳ್ಳೆಯದನ್ನು ಬೋಧಿಸಿದವರೆಲ್ಲರೂ ಗುರುವಿಗೆ ಸಮಾನವೆಂದರು. ಗುರುಗಳು ಪಾಠ ಪುಸ್ತಕದಲ್ಲಿರುವ ವಿಚಾರವಲ್ಲದೆ ಸಮಾಜದ ನೈತಿಕತೆ, ಆಚಾರ-ವಿಚಾರ, ಹಿರಿಯರಿಗೆ ಗೌರವ, ನಡವಳಿಕೆ ಎಲ್ಲವನ್ನು ಶಿಕ್ಷಕರುಗಳು ತಿಳಿಸಿಕೊಡಬೇಕು. ನೈತಿಕತೆ ಇಲ್ಲದ ಶಿಕ್ಷಣ ಊಟಕ್ಕೆ ಉಪ್ಪಿನಕಾಯಿ ಇಲ್ಲದಂತೆ. ಬದುಕಿನ ತುಂಬಾ ಹೆಣಗಾಡುವುದು, ಕೊನೆಗೊಮ್ಮೆ ಹೆಣವಾಗುವುದು” ಎಂದು ಹೇಳಿದರು.
2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರಾದ ಕೆ. ಆರ್, ಶಾಲಿನಿ, ಎ. ಡಿ. ಮೀನಾಕ್ಷಿ, ಎಂ. ವನಜ, ಕೆ.ಜಾನ್ಸಿ, ಎಸ್. ಎ. ಯೋಗೇಶ್, ಅಬ್ದುಲ್ ರಬ್ ಎಮ್. ಎಸ್, ಎ. ಕೆ ಮಾಚಮ್ಮ, ಸುಷಾ ಕೆ, ಎಚ್. ಡಿ ಲೋಕೇಶ್ ಇವರಿಗೆ ಶಾಸಕ ಮಂತರ್ ಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಪೊನ್ನಂಪೇಟೆ ತಾಲ್ಲೂಕು ಪಂಚಾಯತಿ ಪ್ರಭಾರ ಯೋಜನಾಧಿಕಾರಿ ಹೃದಯಾಘಾತದಿಂದ ನಿಧನ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮಂಜುಳಾ ಚಿತ್ತಾಪುರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸದಾಶಿವಯ್ಯ ಪಲ್ಲೆದ್, ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಪೂರ್ಣೇಶ್, ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ದೇವಕಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.