ದೈನಂದಿನ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ಗೈರು ಹಾಜರಾಗುತ್ತಿದ್ದು, ವೈದ್ಯರು ಸಾರ್ವಜನಿಕ ಸೇವೆಯಲ್ಲಿದ್ದು ಜನ ಪ್ರತಿನಿಧಿಗಳ ಜೊತೆಯಲ್ಲಿ ಗೌರವಯುತವಾಗಿ ವರ್ತಿಸದೆ ದುರ್ನಡತೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಕರ್ತವ್ಯಲೋಪ ಹಾಗೂ ಲಂಚ ಬೇಡಿಕೆಯ ಆಡಿಯೋ ಆರೋಪದ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ
ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಎಂ ಜೆ ಶ್ರೀ ಕೃಷ್ಣ ಅಮಾನತುಗೊಂಡ ವೈದ್ಯಾಧಿಕಾರಿಯಾಗಿದ್ದು, ಈ ಹಿಂದೆ ದುರ್ನಡತೆ, ಕರ್ತವ್ಯಲೋಪ ಆರೋಪ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವರ್ಗಾವಣೆಗೊಂಡಿದ್ದರು.
ಗುತ್ತಿಗೆ ಆಧಾರದಡಿಯಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲತಾ ಎಂ ಬಿನ್ ಮೋಹನ್ ಕೃಷ್ಣ ಇವರಿಗೆ “ಕಾರ್ಯಕ್ಷಮತೆ ಮೌಲ್ಯಮಾಪನ ಪ್ರಮಾಣಪತ್ರ” (Performance Appraisal Form) ನೀಡಲು ಲಂಚ ಬೇಡಿಕೆಯ ಆರೋಪದ ಆಡಿಯೋ ಕೇಳಿ ಬಂದಿದ್ದು, ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ದೂರು ದಾಖಲಾಗಿತ್ತು. ಸಹಿ ಮಾಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸಂಭಾಷಣೆಯಲ್ಲಿನ ಧ್ವನಿಯು ಸದರಿ ವೈದ್ಯರದ್ರೆ ಎಂದು ಮೇಲಧಿಕಾರಿಗಳು ದೃಢಪಡಿಸಿರುತ್ತಾರೆ. ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿಡಲು ಸೂಚಿಸಲಾಗಿತ್ತು.
ಲಂಚ, ಕರ್ತವ್ಯಲೋಪ ಹಿನ್ನೆಲೆಯಲ್ಲಿ ಕರ್ನಾಟಕ ಮಾನವಹಕ್ಕು ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್ ಪಿ ವಿರುದ್ಧ ಹರಿಹರ ಬಿಜೆಪಿ ಶಾಸಕ ಹರೀಶ್ ಅವಹೇಳನಕಾರಿ ಹೇಳಿಕೆ; ಪ್ರಕರಣ ದಾಖಲು
ಅಲ್ಲದೇ ಜೂಲಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದ ವೇಳೆ ಕೇಳಿ ಬಂದಿದ್ದ ಆರೋಪ ಮೇಲ್ನೋಟಕ್ಕೆ
ಸಾಬೀತಾಗಿರುವ ಹಿನ್ನೆಲೆಯಲ್ಲಿ, ಮತ್ತು ಎಚ್ಚರಿಕೆ ಕ್ರಮವಾಗಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಿದರೂ ತಮ್ಮ ವರ್ತನೆ ತಿದ್ದಿಕೊಳ್ಳದೇ ಕರ್ತವ್ಯಲೋಪ ಎಸಗುತ್ತಿದ್ದ ಹಾಗೂ ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಕರ್ತವ್ಯದಲ್ಲಿ ಮುಂದುವರೆದರೆ ಸಾಕ್ಷಿನಾಶ, ಲೋಕಾಯುಕ್ತ ಪ್ರಕರಣಕ್ಕೆ ಅಡ್ಡಿ ಉಂಟು ಮಾಡುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರದ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.