ಆಲಮಟ್ಟಿ ಅಣೆಕಟ್ಟು ಎತ್ತರವನ್ನು 518 ಮೀ.ನಿಂದ 524 ಮೀ. ಎತ್ತರಿಸುವ ಬಗ್ಗೆ ಆದ್ಯತೆ ಮತ್ತು ಬದ್ಧತೆ ನಮ್ಮ ಸರ್ಕಾರಕ್ಕಿದೆ. ಮುಂದಿನ ಒಂದು ವಾರದೊಳಗೆ ಭೂಸ್ವಾಧೀನಕ್ಕೆ ನಿಗದಿ ಮಾಡಿರುವ ಬೆಲೆ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಆಲಮಟ್ಟಿ ಅಣೆಕಟ್ಟಿನಲ್ಲಿ ಕೃಷ್ಣಾನದಿಗೆ ಬಾಗಿನ ಅರ್ಪಿಸಿದ ನಂತರ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.
“ಮುಖ್ಯಮಂತ್ರಿಯವರು ಹಾಗೂ ಯೋಜನೆ ವ್ಯಾಪ್ತಿಯ ಜನಪ್ರತಿನಿಧಿಗಳ ಸಭೆ ನಡೆಸಿ ಬೆಲೆ ನಿಗದಿ ತೀರ್ಮಾನ ಮಾಡಲಾಗುವುದು. ಯಾವುದೇ ಮೇಲ್ಮನವಿ ಇಲ್ಲದಂತೆ ಒಂದೇ ಹಂತದ ಒಪ್ಪಿತ ಭೂಸ್ವಾಧೀನಕ್ಕೆ ಮುಖಂಡರು, ಜನಪ್ರತಿನಿಧಿಗಳು ಒಪ್ಪಿಗೆ ನೀಡಬೇಕು. ಪುನರ್ವಸತಿ ಬಗ್ಗೆ ಪ್ರತ್ಯೇಕ ತೀರ್ಮಾನ ಮಾಡಲಾಗುವುದು. ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ನಮ್ಮ ಜನರಿಗೆ ನೀರಾವರಿ ಕಲ್ಪಿಸುವುದು ನಮ್ಮ ಸಂಕಲ್ಪ. ಇದನ್ನು ಇದೇ ಅವಧಿಯಲ್ಲಿ ಮಾಡಲು ಮುಂದಾಗಿದ್ದೇವೆ” ಎಂದರು.
“ಮುಳುಗಡೆ ಜಮೀನುಗಳಿಗೆ ಉದಾರ ಮನಸ್ಸಿನಿಂದ ಪರಿಹಾರ ನೀಡಬೇಕು. ಕಾಲುವೆಗಳು ಹಾದುಹೋಗುವ ಕಡೆ ರೈತರಿಗೆ ಅನುಕೂಲವಾಗುವುದರಿಂದ ಇಂತಿಷ್ಟೇ ಪರಿಹಾರ ಬೇಕು ಎನ್ನುವ ಬೇಡಿಕೆಯಿಲ್ಲವೆಂದು ಶಾಸಕ ಯಶವಂತರಾಯ ಗೌಡ ಪಾಟೀಲರು ಅಭಿಪ್ರಾಯ ತಿಳಿಸಿದ್ದಾರೆ. ಶಿವಾನಂದ ಪಾಟೀಲರು, ಎಂ ಬಿ ಪಾಟೀಲರೂ ಕೂಡ ತಮ್ಮ ಸಲಹೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದರು.
“ನಾವು ಕೇಂದ್ರದ ಮೇಲೆ ಹಾಕುತ್ತಿರುವ ಒತ್ತಡ ನೋಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ಅಧಿಸೂಚನೆ ಹೊರಡಿಸಬಹುದು. ನಮ್ಮ ಪಾಲು ನಮಗೆ ಸಿಗಲೇಬೇಕು. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ನಾವು ಎಲ್ಲ ಪಕ್ಷದ ಶಾಸಕರ ಜತೆಗೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ” ಎಂದರು.
“ಈ ವಿಚಾರವಾಗಿ ಅಧಿಸೂಚನೆ ಹೊರಡಿಸಬೇಕೆಂದು ಮುಖ್ಯಮಂತ್ರಿಯವರು, ನಾನು ಹಾಗೂ ಸಣ್ಣ ನೀರಾವರಿ ಸಚಿವರು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದೆವು. ನಾನು ಸುಮಾರು ಐದು ಬಾರಿ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಧಾನಿಯವರ ಗಮನಕ್ಕೂ ಇದನ್ನು ತರಲಾಗಿತ್ತು. ಎರಡು ಬಾರಿ ಇದರ ಬಗ್ಗೆ ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಲಾಗಿತ್ತು. ಆಂಧ್ರಪ್ರದೇಶದವರು ಒಮ್ಮೆ ಮಹಾರಾಷ್ಟ್ರದವರು ಮತ್ತೊಮ್ಮೆ ಸಭೆಯನ್ನು ಮುಂದಕ್ಕೆ ಹಾಕಿಸಿದರು ಎನ್ನುವ ಮಾಹಿತಿಯಿದೆ” ಎಂದು ಹೇಳಿದರು.
“ಈ ಬಗ್ಗೆ ಮತ್ತೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದಾಗ ಅವರು ‘ಗಾಬರಿಯಾಗಬೇಡಿ, ತಾಂತ್ರಿಕ ವಿಚಾರದ ಕಾರಣಕ್ಕೆ ಸಭೆ ಮುಂದಕ್ಕೆ ಹಾಕಲಾಯಿತು. ಮತ್ತೊಮ್ಮೆ ಸಭೆ ಕರೆಯಲಾಗುವುದುʼ ಎಂಬುದಾಗಿ ಆಶ್ವಾಸನೆ ನೀಡಿದ್ದಾರೆ. ಅಣೆಕಟ್ಟು ಎತ್ತರ ಹೆಚ್ಚಳ ಕುರಿತಂತೆ ಯಾವುದೇ ತಕರಾರುಗಳು ಇಲ್ಲವೆಂದು ಮಹಾರಾಷ್ಟ್ರದವರು ಈ ಹಿಂದೆ ತಿಳಿಸಿರುವುದಾಗಿ ಎಂ ಬಿ ಪಾಟೀಲರು ಹೇಳಿದ್ದಾರೆ” ಎಂದರು.
“ರೈತರ ಭೂಮಿ ಸ್ವಾಧೀನಕ್ಕೆ ಒಳಪಡಿಸಿಕೊಳ್ಳುವ ಬಗ್ಗೆ ಅನೇಕ ಸಭೆಗಳನ್ನು ನಡೆಸಲಾಗಿದೆ. ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ ಇಂತಿಷ್ಟು ಪರಿಹಾರವೆಂದು ನಿಗದಿ ಮಾಡಲಾಗಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲವೆಂದು ಅನೇಕ ಜನಪ್ರತಿನಿಧಿಗಳು ಒತ್ತಡ ಹಾಕಿ ಇದನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಆಲಮಟ್ಟಿ ಭಾಗದ ಜನಪ್ರತಿನಿಧಿಗಳು, ಸಚಿವರು ಹಾಗೂ ರೈತರ ಸಭೆ ನಡೆಸಿ ಅದರ ತೀರ್ಮಾನವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮದ್ದೂರು | ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಎಂಟು ಜನರಿಗೆ ಗಾಯ
“ಪರಿಹಾರದ ವಿಚಾರವಾಗಿ ಸುಮಾರು 20 ಸಾವಿರ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅನೇಕ ವಕೀಲರು ರೈತರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಾರಿಗೂ ಕೂಡ ಅನುಕೂಲವಾಗುವುದಿಲ್ಲ ಎನ್ನುವುದನ್ನು ರೈತರು ಅರಿಯಬೇಕು” ಎಂದರು.
“ಅಣೆಕಟ್ಟು ಎತ್ತರ ಹೆಚ್ಚಳ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿ ನಮ್ಮ ಸರ್ಕಾರ ಬದ್ಧತೆ ಮೆರೆದಿದೆ. ಈ ವರ್ಷ 100 ಟಿಎಂಸಿಗೂ ಹೆಚ್ಚು ನೀರು, ಕೆಲವೊಮ್ಮೆ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದ ಉದಾಹರಣೆಯಿದೆ. ವರುಣನ ಕೃಪೆಯಿಂದ ಆಲಮಟ್ಟಿ ಅಣೆಕಟ್ಟು ತುಂಬಿ ಎಲ್ಲರಿಗೂ ಸಂತಸ ಉಂಟುಮಾಡಿದೆ” ಎಂದು ಹೇಳಿದರು.