ಕಳೆದ ವರ್ಷ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಅಮಾಯಕ ಹಿಂದೂಗಳ ಮೇಲೆ ಮತಾಂಧ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಅಂಗಡಿ-ಮುಂಗಟ್ಟುಗಳು, ವಾಹನಗಳಿಗೆ ಬೆಂಕಿ ಹಚ್ಚಿಲು ಬಿಟ್ಟು ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸುವ ಪಾಪದ ಕೆಲಸ ಮಾಡಿದ್ದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಈ ವರ್ಷವೂ ಗಣೇಶ ವಿಸರ್ಜನೆ ವೇಳೆ ಹಿಂದುಗಳಿಗೆ ಸೂಕ್ತ ಭದ್ರತೆ ಒದಗಿಸಲು ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಎರಡು ಕೋಮುಗಳ ನಡುವೆ ನಡೆದ ಕಲ್ಲು ತೂರಾಟ ವಿಚಾರವಾಗಿ ಎಕ್ಸ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು, “ಕಳೆದ ವರ್ಷ ನಾಗಮಂಗಲ, ಶಿವಮೊಗ್ಗ ಸೇರಿದಂತೆ ಅನೇಕ ಕಡೆ ಗಣೇಶೋತ್ಸವ ವೇಳೆ ಕೋಮು ದಳ್ಳುರಿ ನಡೆದಿದ್ದರೂ ಈ ಬಾರಿ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ ಈ ವರ್ಷ ಮದ್ದೂರು, ಹುಬ್ಬಳ್ಳಿ, ಬಾಗಲಕೋಟೆ, ಸಾಗರ, ಧಾರವಾಡ ಸೇರಿದಂತೆ 4-5 ಕಡೆಗಳಲ್ಲಿ ನೆಮ್ಮದಿಯ ಗಣೇಶೋತ್ಸವಕ್ಕೆ ಭಂಗ ಉಂಟುಮಾಡಿದೆ” ಎಂದು ಆರೋಪಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರ ಪ್ರಕಾರ ಇವೆಲ್ಲವೂ “ಆಕಸ್ಮಿಕ”, “ಸಣ್ಣ” ಘಟನೆಗಳೋ ಅಥವಾ ಈ ಘಟನೆಗಳ ಬಗ್ಗೆ “ಗೊತ್ತಿಲ್ಲ” ಎಂದು ಎಂದಿನಂತೆ ತಿಪ್ಪೆ ಸರಿಸುತ್ತಾರೋ ಆ ಭಗವಂತನೇ ಬಲ್ಲ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಕರ್ನಾಟಕದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂಗಳು ತಮ್ಮ ಹಬ್ಬ, ಹರಿದಿನಗಳನ್ನ, ಉತ್ಸವ, ಜಾತ್ರೆಗಳನ್ನ ನೆಮ್ಮದಿಯಿಂದ ಆಚರಿಸಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.