ಹಿರಿಯ ಪತ್ರಕರ್ತ ಹಾಗೂ ‘ದಿ ಟೆಲಿಗ್ರಾಫ್’ನ ಸಂಪಾದಕರಾಗಿದ್ದ ಸಂಕರ್ಷಣ್ ಠಾಕೂರ್ (63) ಅವರು ಇಂದು (ಸೆಪ್ಟೆಂಬರ್ 8) ಗುರಗಾಂವ್‌ನ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತೀಕ್ಷ್ಣವಾದ ರಾಜಕೀಯ ವಿಶ್ಲೇಷಣೆ ಮತ್ತು ತಳಮಟ್ಟದ ವರದಿಗಾರಿಕೆಗೆ ಹೆಸರಾಗಿದ್ದ ಠಾಕೂರ್ ಅವರು ಸಮಕಾಲೀನ ಪತ್ರಿಕೋದ್ಯಮದ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದರು. ಠಾಕೂರ್ ಅವರನ್ನು ಸಮಕಾಲೀನ ಭಾರತೀಯ ಪತ್ರಿಕೋದ್ಯಮದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿತ್ತು.
ಬಿಹಾರದ ರಾಜಕೀಯ ಘಟನೆಗಳನ್ನು ದಾಖಲಿಸುವಲ್ಲಿ ಮುಂಚೂಣಿಯಲ್ಲಿದ್ದ ಅವರು ಮೇಕಿಂಗ್ ಆಫ್ ಲಾಲೂ ಯಾದವ್, ದಿ ಅನ್‌ಮೇಕಿಂಗ್ ಆಫ್ ಬಿಹಾರ, ಸಿಂಗಲ್ ಮ್ಯಾನ್: ದಿ ಲೈಫ್ ಆಂಡ್ ಟೈಮ್ಸ್ ಆಫ್ ನಿತೀಶ್ ಕುಮಾರ್ ಆಫ್ ಬಿಹಾರ ಮತ್ತು ದಿ ಬ್ರದರ್ಸ್ ಬಿಹಾರಿ ಎಂಬ ಪುಸ್ತಕಗಳನ್ನು ರಚಿಸಿದ್ದರು.
ಪಟನಾದ ಸೇಂಟ್ ಕ್ಸೇವಿಯರ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಠಾಕೂರ್, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದು ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಆನಂದ ಬಜಾರ್ ಪತ್ರಿಕಾ ಗುಂಪಿನ ಸಂಡೇ ಮ್ಯಾಗಜೀನ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, ಬಿಹಾರ ಮತ್ತು ಕಾಶ್ಮೀರದಲ್ಲಿ ತಳಮಟ್ಟದ ವರದಿಗಾರಿಕೆಯಲ್ಲಿ ಪರಿಣತರಾಗಿದ್ದರು. ದಿ ಟೆಲಿಗ್ರಾಫ್‌ನ ರಾಷ್ಟ್ರೀಯ ವ್ಯವಹಾರಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ ನಂತರ ಅವರು ಅದೇ ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?
2001ರಲ್ಲಿ ರಾಜಕೀಯ ಪತ್ರಿಕೋದ್ಯಮದಲ್ಲಿ ಮಾಡಿದ ಸೇವೆಗಾಗಿ ಪ್ರತಿಷ್ಠಿತ ಪ್ರೇಮ್ ಭಾಟಿಯಾ ಪುರಸ್ಕಾರವನ್ನು ಪಡೆದ ಠಾಕೂರ್, ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ತೆಹಲ್ಕಾ’ದಂತಹ ಪ್ರಮುಖ ಸಂಸ್ಥೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. 2001ರ ಜೂನ್‌ನಲ್ಲಿ ಮಣಿಪುರದ ರಾಜಕೀಯ ಹಿಂಸಾಚಾರದ ಕುರಿತು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗಾಗಿ ಮಾಡಿದ ಅವರ ವರದಿಗಾರಿಕೆ ವಿಶೇಷ ಗಮನ ಸೆಳೆದಿತ್ತು.
ಠಾಕೂರ್ ಅವರ ನಿಧನದ ಸುದ್ದಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭಾರೀ ದುಃಖವನ್ನುಂಟುಮಾಡಿದೆ. ”ನಾವು ಪತ್ರಿಕೋದ್ಯಮದ ಧೈರ್ಯಶಾಲಿ ಧ್ವನಿಯೊಂದನ್ನು ಕಳೆದುಕೊಂಡಿದ್ದೇವೆ. ಅವರ ತೀಕ್ಷ್ಣ ರಾಜಕೀಯ ವಿಶ್ಲೇಷಣೆ ಮತ್ತು ಸತ್ಯದ ಪರವಾದ ಅವರ ನಿರಂತರ ಬದ್ಧತೆ ತುಂಬಲಾರದ ನಷ್ಟ ಉಂಟು ಮಾಡಿದೆ,” ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಎಕ್ಸ್‌ನಲ್ಲಿ ಸಂತಾಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ”ಠಾಕೂರ್ ಅವರ ನಿರ್ಭೀತ ವರದಿ, ತೀಕ್ಷ್ಣ ರಾಜಕೀಯ ಟಿಪ್ಪಣಿ ಮತ್ತು ಸೊಗಸಾದ ಬರವಣಿಗೆ ಶೈಲಿ ಶಾಶ್ವತವಾಗಿ ಉಳಿಯಲಿದೆ,” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಅವರು, ”ತೀಕ್ಷ್ಣವಾದ ರಾಜಕೀಯ ವಿಶ್ಲೇಷಕರಾಗಿದ್ದ ಸಂಕರ್ಷಣ್ ಠಾಕೂರ್ ಅವರು ಬಿಹಾರ ಮತ್ತು ಜಮ್ಮು-ಕಾಶ್ಮೀರದ ಕುರಿತಾದ ಲೇಖನಗಳ ಮೂಲಕ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು. ಅವರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಬಹುತ್ವವಾದಿ ಭಾರತದ ಬಲವಾದ ರಕ್ಷಕರಾಗಿದ್ದರು,” ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಂಕರ್ಷಣ್ ಠಾಕೂರ್ ಅವರ ನಿಧನವು ಭಾರತೀಯ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಹಲವು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
Senior journalist and editor of The Telegraph newspaper, Sankarshan Thakur passed away today. He was 63.
— Press Club of India (@PCITweets) September 8, 2025
We’ve lost a fearless voice in journalism.
His sharp political analysis and unwavering commitment to the truth will be deeply missed.
In this time of sorrow, the Press… pic.twitter.com/HzmrpXYlrQ
A great and saddening loss. Sankarshan Thakur held on to courage and his conscience when so many sold theirs. He was a gifted writer, the sharpest of political analysts, and kept faith with the people, the country, and the Constitution.
— Nilanjana Roy 📚🦊 (@nilanjanaroy) September 8, 2025
Such a lighthouse of an editor. pic.twitter.com/0DIj1EVmZB