ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು
ತುಮಕೂರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ
ಸಮಯದಲ್ಲಿ ಕಲ್ಲು ತೂರಾಟ ನಡೆಸಿದವರ ಜತೆ ಸಂಘಪರಿವಾರದ ಸಂಘಟನೆಯವರು ಸೇರಿಕೊಂಡಿದ್ದಾರೆ. ಬಂಧನವಾಗಿರುವವರಲ್ಲಿ ಯಾರೆಲ್ಲ ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ಗೊತ್ತಿಲ್ಲ. ಬಂಧನಕ್ಕೆ ಒಳಗಾದವರು ಕಲ್ಲು ತೂರಾಟ ನಡೆಸಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದರು.
“ಘಟನೆಗೆ ಸಂಘಪರಿವಾರದ ಸಂಘಟನೆಯವರು ಕಾರಣ ಎಂದು ಪೊಲೀಸರು ಹೇಳುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಗೊತ್ತಾಗಲಿದೆ. ಶಾಂತಿ ಕಾಪಾಡಲು ಪೊಲೀಸರು ಒಂದು ಹಂತದವರೆಗೆ ಪ್ರಯತ್ನಿಸಿದ್ದಾರೆ. ಸಂಘಟನೆಯವರ ಮನವೊಲಿಸಿದ್ದಾರೆ. ಅವರ ಕೈ ಮೀರಿದಾಗ ಲಾಠಿ ಪ್ರಹಾರ ಮಾಡಿದ್ದಾರೆ” ಎಂದು ತಿಳಿಸಿದರು.