ಮಹಿಳೆ ಗೆಳೆತನಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕ ಮತ್ತು ಆತನ ಸ್ನೇಹಿತರು ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.
33 ವರ್ಷದ ಮಹಿಳೆಯನ್ನು ಜೈತ್‌ಪುರ ಗ್ರಾಮದ ನಿವಾಸಿ ದೀಪಕ್ ಎಂಬಾತ ಹಲವು ತಿಂಗಳುಗಳಿಂದ ಹಿಂಬಾಳಿಸುತ್ತಿದ್ದ, ತನ್ನೊಂದಿಗೆ ಸ್ನೇಹ ಬೆಳೆಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಾಗಿದೆ. ಶನಿವಾರ ಔಷಧಿ ಖರೀದಿಸಿ ಮಹಿಳೆ ಮನೆಗೆ ಹಿಂದಿರುಗುತ್ತಿದ್ದಾಗ ದೀಪಕ್ ಮತ್ತು ಆತನ ಐವರು ಸ್ನೇಹಿತರು ಸೇರಿ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಮಹಿಳೆಯರ ಮೇಲಿನ ಹಿಂಸೆ; ಸಮಾಜಕ್ಕೆ ಕನ್ನಡಿ ಹಿಡಿದ ಭೀಕರ ಸಂಗತಿಗಳಿವು… (ಭಾಗ-1)
ತೀವ್ರ ಸುಟ್ಟಗಾಯಗಳನ್ನು ಹೊಂದಿದ್ದ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಇಟಾವಾ ಜಿಲ್ಲೆಯ ಸೈಫೈನಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಭಾನುವಾರ ತಡರಾತ್ರಿ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ದೀಪಕ್ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಂತ್ರಸ್ತೆ ಮಹಿಳೆ ವಿವಾಹಿತಳಾಗಿದ್ದು, ಆಕೆಯ ಪತಿ ದೆಹಲಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆಕೆಗೆ ಇಬ್ಬರು ಮಕ್ಕಳಿದ್ದರು. ನಾಲ್ವರೂ ಫತೇಘರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. “ದೀಪಕ್ ಕಳೆದ ಕೆಲವು ತಿಂಗಳುಗಳಿಂದ ನನ್ನ ಮಗಳನ್ನು ಹಿಂಬಾಲಿಸುತ್ತಿದ್ದ, ತನ್ನೊಂದಿಗೆ ಸ್ನೇಹ ಬೆಳೆಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ. ಆದರೆ ಅನಿತಾ ಅದನ್ನು ಒಪ್ಪಿರಲಿಲ್ಲ” ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
