ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆಗಳು ಮಹತ್ವ ಪಡೆದುಕೊಳ್ಳುತ್ತವೆ. ಓದು-ಬರಹದ ಜತೆ ಕ್ರೀಡೆಗಳಲ್ಲಿ ಭಾಗವಹಿಸುವವರ ಜೀವನ ಹೆಚ್ಚು ಕ್ರಿಯಾಶೀಲ ಹಾಗೂ ಪರಿಪೂರ್ಣ ಆಗಿರುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಬಿಇಒ ವೆಂಕಟೇಶಪ್ಪ ಹೇಳಿದರು.
ಬಾಗೇಪಲ್ಲಿ ತಾಲೂಕು ಆಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪಟ್ಟಣದ ತಾಲೂಕು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಗುಂಡು ಎಸೆದು ಚಾಲನೆ ನೀಡಿ ಅವರು ಮಾತನಾಡಿದರು.
“ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಕ್ರೀಡೆಗಳಲ್ಲಿ ಭಾಗಿಯಾಗಬೇಕು. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂಬುದು ಮನವರಿಕೆ ಮಾಡಿಕೊಂಡು ಯುವಕರು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್ ಮಾತನಾಡಿ, ಯುವಕರು ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸದೃಢವಾದ ಆರೋಗ್ಯ ಹೊಂದಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅತ್ಯಂತ ಹಿರಿದಾಗಿದೆ. ಮಕ್ಕಳು ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಕ್ರೀಡಾ ಕ್ಷೇತ್ರಕ್ಕೆ ಸರ್ಕಾರ ಅನೇಕ ಸೌಲಭ್ಯ ಒದಗಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿಯುತ ಕ್ರೀಡೆಯಲ್ಲಿ ಸತತ ಪ್ರಯತ್ನ ಹಾಗೂ ಕಠಿಣ ಅಭ್ಯಾಸ ರೂಢಿಸಿಕೊಂಡು ಕ್ರೀಡಾ ಸಾಧಕರಾಗಿ, ಕ್ರೀಡಾ ಸೆಲೆಬ್ರೆಟಿಗಳಾಗಬೇಕು” ಎಂದು ಆಶಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸರ್ಕಾರಿ ನೌಕರರು ತಮ್ಮ ಹುದ್ದೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು: ಷಡಕ್ಷರಿ
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಆರ್ ವೆಂಕಟರಾಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ನಾಗಭೂಷಣ, ಸಾಕ್ಷರತೆ ಶಿವಪ್ಪ, ನಾರಾಯಣ ಸ್ವಾಮಿ, ರಘುನಾಥ್ , ಸುಜಾತಮ್ಮ, ಸುಭಾನ್, ಗಣೇಶ್ ಹಾಗೂ ದಸರಾ ಕ್ರೀಡಾಪಟುಗಳು ಹಾಜರಿದ್ದರು.